ಕಾಫಿ ತೋಟಗಳ ಮಾಲೀಕರಿಗೆ ಶಾಸಕರ ಬೆಂಬಲ

MLA support coffee plantation owners

17-11-2017 271

ಬೆಳಗಾವಿ: ಮಲೆನಾಡು ಹಾಗೂ ಇತರೆ ಭಾಗಗಳಲ್ಲಿ ಕಾಫಿ ಬೆಳೆಯಲು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸದೆ ಮಾಲೀಕರಿಗೆ ಭೋಗ್ಯದ ಆಧಾರದ ಮೇಲೆ ನೀಡಬೇಕೆಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ.

ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆ ಹಾಗೂ ಕರಾವಳಿ ಭಾಗದ ಶಾಸಕರ ಜತೆ ಮಹತ್ವದ ಸಭೆ ನಡೆಸಿದರು. ಅದರಲ್ಲಿ ಶಾಸಕರಾದ ಸಿ.ಟಿ.ರವಿ, ಜೀವರಾಜ್, ಬಿ.ಬಿ.ನಿಂಗಯ್ಯ, ಮೋಟಮ್ಮ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು. ಎಲ್ಲಾ ಶಾಸಕರು ಪಕ್ಷಾತೀತವಾಗಿ ಒತ್ತುವರಿ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ಎಸ್ಟೇಟ್ ಮಾಲೀಕರಿಗೆ ಬಿಟ್ಟುಕೊಡಬೇಕೆಂದು ಒತ್ತಡ ಹೇರಿದರು.

ನ್ಯಾಯಾಲಗಳ ಆದೇಶದ ಹಿನ್ನೆಲೆಯಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕಿದ್ದು, ಇದಕ್ಕಾಗಿ ಕಾರ್ಯಾಚರಣೆ ಆರಂಭವಾಗಿದೆ. ಇದರಿಂದ ಮಲೆನಾಡು ಭಾಗದ ಕಾಫಿ ತೋಟದ ಮಾಲೀಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದರು.

ಇಂದು ನಡೆದ ಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಕಾಫಿ ತೋಟಗಳ ಮಾಲೀಕರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೂರಾರು ವರ್ಷಗಳಿಂದ ಕಾಫಿ ತೋಟ ಮಾಡಿಕೊಂಡು ಹಿಡುವಳಿ ಮಾಡಲಾಗುತ್ತಿದೆ. ಈಗ ಏಕಾಏಕಿ ಇದನ್ನು ಅಕ್ರಮ ಆಸ್ತಿ ಎಂದು ಪರಿಗಣಿಸಿ ತೆರವು ಮಾಡಿದರೆ ರೈತರ ಬದುಕು ಬೀದಿಗೆ ಬರಲಿದೆ. ಭೂಮಿಯನ್ನು ಖಾಯಂ ಆಗಿ ಬಿಟ್ಟುಕೊಡುವುದು ಬೇಡ. ಆದರೆ, ಭೋಗ್ಯದ ಆಧಾರದ ಮೇಲೆ ಬೆಳೆ ಬೆಳೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಸಾವಿರಾರು  ಎಕರೆ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಸಾಧ್ಯವೇ ಎಂದು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.ಸಂಬಂಧಿತ ಟ್ಯಾಗ್ಗಳು

coffe Estate ಅರಣ್ಯ ಇಲಾಖೆ ಭರವಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ