ಛೇ..ಇಂಥದ್ದೆಲ್ಲ ನೋಡ್ತೀರಾ..?

Trying to watch porn..?

16-11-2017

ಇಲ್ಲೊಬ್ಬರು ಮೇಷ್ಟ್ರು, ಒಂದು ಆಪ್ ಅಂದ್ರೆ ಕಿರುತಂತ್ರಾಂಶ ರೂಪಿಸಿದ್ದಾರಂತೆ. ಇದೇನ್ಮಾಡುತ್ತೆ ಗೊತ್ತಾ? ವಯಸ್ಕರಾಗಲಿ, ಮಕ್ಕಳಾಗಲಿ ಇಂಟರ್‌ನೆಟ್ ಬಳಸಿ ಪೋರ್ನ್ ಅಂದ್ರೆ ಅಶ್ಲೀಲ ದೃಶ್ಯಗಳನ್ನಾಗಲಿ ಅಥವ ಹಿಂಸಾತ್ಮಕ ದೃಶ್ಯಗಳನ್ನಾಗಲಿ ನೋಡುವುದನ್ನು ತಪ್ಪಿಸುತ್ತದಂತೆ.

ಫೋನ್ ಅಥವ ಕಂಪ್ಯೂಟರ್‌ನಲ್ಲಿ ಈ ಆಪ್ ಇನ್ಸ್‌ಸ್ಟಾಲ್ ಮಾಡಿಕೊಂಡಿದ್ರೆ ಸಾಕು, ಯಾರು ಎಷ್ಟು ಹೊತ್ತಿನಲ್ಲೇ ಆದರೂ, ಸೂಕ್ತವಲ್ಲದ ಅಥವ ಅನುಚಿತ ಅನ್ನಬಹುದಾದ ಯಾವುದೇ ವೆಬ್ ಸೈಟ್ ಓಪನ್ ಮಾಡೋದಕ್ಕೆ ಟ್ರೈ ಮಾಡಿದ್ರೆ ಭಕ್ತಿಗೀತೆಗಳು ಕೇಳಿಬರುತ್ತವಂತೆ. ಆ ಭಕ್ತಿ ಗೀತೆಗಳನ್ನು ಕೇಳಿದ ಕೂಡಲೇ ಅವರ ಮೂಡ್ ಬದಲಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ಬಯಸುತ್ತಿರೋ ವೆಬ್ ಸೈಟ್ ಆಗಲಿ ದೃಶ್ಯಾವಳಿಗಳಾಗಲಿ ಸಿಗೋದಿಲ್ಲವಂತೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಜಯ್ ನಾಥ್ ಮಿಶ್ರ ನಿರ್ಮಿಸಿರೋ ಈ ಆಪ್‌ ಗೆ ಏನು ಹೆಸರಿಟ್ಟಿರಬಹುದು ಊಹೆ ಮಾಡಿ ನೋಡೋಣ.  ಸ್ವಾಮಿ, ಇವರು ಇರೋದು ಕಾಶಿ ನಗರದಲ್ಲಿ, ಹೀಗಾಗಿ  ಅವರ ಆಪ್‌ ಗೆ ‘ಹರ ಹರ ಮಹಾದೇವ್’ ಅಂತ ಹೆಸರಿಟ್ಟುಬಿಟ್ಟಿದ್ದಾರೆ.  

ಛೇ ಛೇ ಇಂಥದಕ್ಕೆಲ್ಲ ಮಹಾದೇವನೇ ಆಗಬೇಕಿತ್ತೇ ಎಂದು ಯಾರಾದಾರೂ ಆಕ್ಷೇಪಣೆ ಮಾಡಿದರೂ ಮಾಡಬಹುದು. ಅದಕ್ಕೆ ಈ ಮೇಷ್ಟ್ರು, ಹೌದು, ಶಿವ ತನ್ನ ಮೂರನೇ ಕಣ್ಣು ತೆರೆದು ಕಾಮದೇವನನ್ನು ಸುಟ್ಟನಲ್ಲಾ ಅದರಿಂದ ಪ್ರೇರಿತನಾಗಿ ಇಂಥ ಹೆಸರು ಇಟ್ಟಿದ್ದೇನೆ ಅಂತ ಹೇಳ್ಕೋಬಹುದುಬಿಡಿ.

ಈ ಆಪ್ ನ ಬೀಟಾ ವರ್ಷನ್ ಲಭ್ಯವಿದ್ದು harharmahadev.coನಿಂದ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಕಂಪ್ಯೂಟರ್‌ ಗಳಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದಂತೆ. ಸದ್ಯದಲ್ಲೇ ಆಂಡ್ರಾಯ್ಡ್ ಫೋನ್‌ ಗಳಿಗೂ ಈ ಆಪ್ ಲಭ್ಯವಾಗುತ್ತಂತೆ. ಬನಾರಸ್ ವಿವಿಯ ಈ ಪ್ರಾಧ್ಯಾಪಕರು ರೂಪಿಸಿರೋ ಆಪ್ ಎಲ್ಲರಿಗೂ ಸಿಗೋ ಹಾಗಾಗ್ಲಿ, ಪೋರ್ನ್ ನೋಡೋರೆಲ್ಲಾ ಶಿವಭಕ್ತರಾಗಿ ಬದಲಾಗಲಿ ತುಂಬಾ ಒಳ್ಳೆಯದು. ಆದರೆ, ಅದಕ್ಕಿಂತ ಮೊದಲು, ಇವರು ಪಟ್ಟಿಮಾಡಿರೋ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಾರ್ಹ ವೆಬ್ ಸೈಟ್‌ಗಳ ಲಿಸ್ಟ್ ಮಾತ್ರ ಯಾರ ಕೈಗೂ ಸಿಗದಂತೆ ನೋಡಿಕೊಂಡರೆ ಸಾಕು. 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ