ಪ್ರತಿಷ್ಠಿತ ಡಿಎನ್ಎ ಸಂಸ್ಥೆ ಮೇಲೆ ಐಟಿ ದಾಳಿ

IT Raid on DNA Network group

16-11-2017 243

ಬೆಂಗಳೂರು: ನಗರ ಸೇರಿದಂತೆ ದೇಶಾದ್ಯಂತ ವ್ಯವಹಾರ ಹೊಂದಿರುವ ಡಿಎನ್‍ಎ ಎಂಟರ್‍ಟೈನ್‍ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಹಾಗೂ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಹಾಗೂ ಇನ್ನೋವೇಟಿವ್ ಫಿಲ್ಮ್ ಸಿಟಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತರಾಯ್ ಮೊಮ್ಮಗ ವೆಂಕಟವರ್ಧನ್ ಮುಖ್ಯಸ್ಥರಾಗಿರುವ ದೇಶದ ಪ್ರತಿಷ್ಠಿತ ಈವೆಂಟ್ ಮ್ಯಾನೇಜಮೆಂಟ್ ಸಂಸ್ಥೆಗಳಲ್ಲಿ ಒಂದಾದ ಡಿಎನ್‍ಎ ನೆಟ್‍ವರ್ಕ್ ಸಂಸ್ಥೆಯ ಕಚೇರಿಗಳ ಮೇಲೆ ಏಕಕಾಲದ ದಾಳಿ ನಡೆಸಿರುವ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆ ಪತ್ರಗಳು ನಗದು ಚಿನ್ನಾಭರಣ ಇನ್ನಿತರ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ.

ಡಿಎನ್‍ಎ ನೆಟ್‍ವರ್ಕ್ ಸಂಸ್ಥೆ ಆರ್.ಸಿ.ಬಿ ತಂಡ ಇವೆಂಟ್ ಮತ್ತು ಫೆಸಿಲಿಟಿ ವಿಭಾಗ ನೋಡಿಕೊಳ್ಳುತ್ತಿತ್ತು. ಇತ್ತೀಚೆಗೆ ನಡೆದ ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದ ಇವೆಂಟ್ ಮ್ಯಾನೇಜ್‍ಮೆಂಟ್‍ನ್ನೂ ಡಿಎನ್‍ಎ ಸಂಸ್ಥೆ ವಹಿಸಿಕೊಂಡಿತ್ತು.

ಡಿಎನ್‍ಎ ನೆಟ್‍ವರ್ಕ್ ಸಂಸ್ಥೆಯ ಮಾಲೀಕ ವೆಂಕಟವರ್ಧನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಗಣ್ಯರಿಗೆ ಆಪ್ತರಾಗಿದ್ದು,  ಈ ಭಾರಿ ಖುದ್ದಾಗಿ ವಿರಾಟ್ ಕೊಹ್ಲಿ ಐಟಿಸಿ ಗಾರ್ಡೇನಿಯಾ ರಿಟ್ಜ್ ಕಾರ್ಲಟನ್ ಹೊಟೇಲ್‍ನಲ್ಲಿ ತಂಗಿದ್ದರು. ಸಚಿವ ಪ್ರಿಯಾಂಕ ಖರ್ಗೆಗೂ ಆಪ್ತರಾಗಿರುವ ವೆಂಕಟವರ್ಧನ್‍ಗೆ ಸಾಕಷ್ಟು ಸರ್ಕಾರಿ ಜಾಹೀರಾತು ನೀಡಲಾಗಿತ್ತು. ಐಪಿಎಲ್ ವೇಳೆ ಡಿಎನ್‍ಎ ಅಪಾರ ಪ್ರಮಾಣದಲ್ಲಿ  ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಡಿಎನ್‍ಎ ಸೊಲ್ಯೂಶನ್‍ಗೆ ಸೇರಿದ ಬೆಂಗಳೂರಿನ 6 ಕಡೆ ಮುಂಬೈ, ದೆಹಲಿಯಲ್ಲಿ ದಾಳಿ ನಡೆದಿದೆ.

ಇನ್ನೋವೆಟಿವ್‍ಫಿಲ್ಮ್ ಸಿಟಿ, ಇನ್ನೋವೆಟಿವ್ ಮಲ್ಟಿಪ್ಲೆಕ್ಸ್ ನಲ್ಲೂ ಅಪಾರ ಪ್ರಮಾಣದ ತೆರಿಗೆ ವಂಚನೆಯಾದ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ  ಇನ್ನೋವೇಟಿವ್ ಫಿಲ್ಮ್ ಸಿಟಿ ಹಾಗೂ ಮಾರತಹಳ್ಳಿಯ ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ ಮೇಲೂ ದಾಳಿ ಮಾಡಲಾಗಿದೆ. ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ನಾಲ್ಕು ವಾಹನಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದು, ದಾಳಿ ಮುಂದುವರೆದಿದೆ. ಇನ್ನು ಮಾರತಹಳ್ಳಿಯ ಇನ್ನೋವೆಟಿವ್ ಮಲ್ಟಿಪ್ಲೆಕ್ಸ್ ಮೇಲೂ ರೇಡ್ ಆಗಿದ್ದು, ಮಹತ್ವದ ಹಲವು ಫೈಲ್ ವಶಪಡಿಸಿಕೊಳ್ಳಲಾಗಿದ್ದು, ದಾಳಿ ಹಾಗೂ ಪರಿಶೀಲನೆ ಮುಂದುವರಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ