ಮುಷ್ಕರದ ಲಾಭದಲ್ಲಿ ನಕಲಿ ವೈದ್ಯರು

Kannada News

15-11-2017

ಬೆಂಗಳೂರು: ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ಮಸೂದೆಯಿಂದ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ರಾಜ್ಯ ಸಕಾರ ಪ್ರಯತ್ನ ಮುಂದುವರಿಯುತ್ತಿರುವ ಮಧ್ಯೆಯೇ ಖಾಸಗಿ ವೈದ್ಯರು ಮುಷ್ಕರ ಮುಂದುವರೆದಿರುವದರಿಂದ ರಾಜ್ಯದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತರ ಸಂಖ್ಯೆ ಹೆಚ್ಚಾಗುತ್ತಿದೆ.

ಖಾಸಗಿ ವೈದ್ಯರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿರುವುರಿಂದ ಉತ್ತರ ಕನ್ನಡ, ತುಮಕೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ರೋಗಿಗಳು ಪರದಾಡುತ್ತಿದ್ದು,ನಿನ್ನೆಯ 8 ಮಂದಿಯ ಜೊತೆಗೆ ಇಂದು ಇಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಚಿಕಿತ್ಸೆ ಸಿಗದೆ ಭಜಂತ್ರಿ ಗಲ್ಲಿಯ ನಿವಾಸಿ ವಿಠ್ಠಲ ಭಜಂತ್ರಿ (39) ಎಂಬವರು ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ವಿಠ್ಠಲ ಅವರು ಕಳೆದ ಎರಡು ದಿನಗಳಿಂದ ಚಿಕಿತ್ಸೆ ಸಿಗದೆ ಆಸ್ಪತ್ರೆಗೆ ಅಲೆದಾಟ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಅಲೆದಾಡಿದ ಅವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಇದೇ ವೇಳೆ ರಾಜ್ಯಾದ್ಯಾಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದು ನಕಲಿ ವೈದ್ಯರಿಗೆ ವರ ಎಂಬಂತಾಗಿದೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ದುಡ್ಡು ಮಾಡಲು ಹೋದ ನಕಲಿ ವೈದ್ಯ ಅಮಾಯಕ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದಲ್ಲಿ ಬಲಿ ಪಡೆದಿದ್ದಾನೆ.

ಚಿಕ್ಕಬಳ್ಳಾಪುರ ಬಾಗೇಪಲ್ಲಿ ತಾಲ್ಲೂಕು ಘಂಟವಾರಿಪಲ್ಲಿ ಗ್ರಾಮದ 40 ವರ್ಷದ ನರಸಪ್ಪ ಎಂಬವರು ನಕಲಿ ಚಿಕಿತ್ಸೆಗೆ ಒಳಗಾಗಿ ಮೃತಪಟ್ಟಿದ್ದಾರೆ. ಕೈಗೆ ಗಾಯವಾದ ಕಾರಣ ಪ್ರಾಥಮಿಕ ಚಿಕಿತ್ಸೆಗೆ ನರಸಪ್ಪ ಪಟ್ಟಣದ ಟಿಬಿ ಕ್ರಾಸ್‍ನ ಅಶ್ವಿನಿ ಕ್ಲಿನಿಕ್ ತೆರಳಿದ್ದಾರೆ. ಕ್ಲಿನಿಕ್‍ನಲ್ಲಿ ಆಂಧ್ರ ಮೂಲದ ಆರ್.ಎಂ.ಪಿ ವೈದ್ಯ ಇನಾಯತ್ ಉಲ್ಲಾ ಎಂಬಾತ ಚಿಕಿತ್ಸೆ ನೀಡಿದ್ದಾನೆ. ಚಿಕಿತ್ಸೆ ಪಡೆದ ನಂತರ ನರಸಪ್ಪ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.

ನರಸಪ್ಪ ಮೃತಪಟ್ಟ ಕೂಡಲೇ ಖುದ್ದು ನಕಲಿ ವೈದ್ಯ ಇನಾಯತ್ ಉಲ್ಲಾ ನರಸಪ್ಪ ರನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾನೆ. ಆದರೆ ಅಷ್ಟರಲ್ಲಿ ವಿಷಯ ತಿಳಿದ ಮೃತನ ಸಂಬಂಧಿಕರು ಹಾಗೂ ಘಂಟವಾರಿಪಲ್ಲಿ ಗ್ರಾಮಸ್ಥರು ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡು, ಬಾಗೇಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಗೇಪಲ್ಲಿ ಪೊಲೀಸರು ಇನಾಯತ್ ಉಲ್ಲಾನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನಲ್ಲಿಯೂ ನಕಲಿ ವ್ಯದ್ಯರ ಬಳಿ ಚಿಕಿತ್ಸೆ ಪಡೆದು ಬಿಎಸ್ಸಿ ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕೋಟೆ ಸೇರಿದಂತೆ ಹಲವು ಗ್ರಾಮಗಳಲ್ಲಿನ ಕ್ಲಿನಿಕ್‍ಗಳ ಮೇಲೆ ಇಂದು ತಹಶೀಲ್ದಾರ್ ಹಾಗೂ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದರು.

ಎಚ್.ಡಿ ಕೋಟೆ ಪಟ್ಟಣ ಸೇರಿದಂತೆ ನೆರೆಯ ಹ್ಯಾಂಡ್ ಪೋಸ್ಟ್ ಸರಗೂರು ಗ್ರಾಮಗಳ ಮೇಲೆ ತಹಸೀಲ್ದಾರ್ ಎಂ.ನಂಜುಂಡಯ್ಯ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ರವಿಕುಮಾರ್ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಅನುಮತಿ ಪಡೆಯದಿರುವ ಹಲವು ಮಂದಿ ವೈದ್ಯರು ಅಲೋಪತಿ ಚಿಕಿತ್ಸೆ ನೀಡುತ್ತಿದ್ದದ್ದು ಬಹಿರಂಗ ಪಟ್ಟಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಆರೋಗ್ಯ ಇಲಾಖೆ ಅಧಿಕಾರಿಗಳು ಅಲೋಪತಿ ಔಷಧ ಬಳಕೆ ಮಾಡುತ್ತಿದ್ದ ಔಷಧಗಳನ್ನು ವಶಕ್ಕೆ ತೆಗೆದುಕೊಂಡು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಅನರ್ಹರೇ ಅರ್ಹರೇ ಅನ್ನುವುದನ್ನು ಖಾತರಿ ಪಡಿಸಲು ಮುಂದಾದರು. ಇನ್ನು ದೃಢೀಕರಣ ಪತ್ರ ನೀಡಲು ವೈದ್ಯರು ಸಬೂಬು ಹೇಳಿದ ಹಿನ್ನೆಲೆಯಲ್ಲಿ ಅಸಲಿ ವೈದ್ಯರೇ ನಕಲಿ ವೈದ್ಯರೇ ಎನ್ನುವುದನ್ನು ದೃಢಪಡಿಸುವ ತನಕ ಎಚ್.ಡಿ. ಕೋಟೆಯ ಸಾಯಿ ಕ್ಲಿನಿಕ್ ಹಾಗೂ ಶಮನ ಪಾಲಿ ಕ್ಲಿನಿಕ್ ಹ್ಯಾಂಡ್ ಪೋಸ್ಟ್ ನ ಕರಿಯಪ್ಪ ಕ್ಲಿನಿಕ್ ಗಳನ್ನು ಬಂದ್ ಮಾಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ದಾಳಿಯ ಸಂದರ್ಭದಲ್ಲಿ ಹ್ಯಾಂಡ್ ಪೋಸ್ಟಿನ ಕರಿಯಪ್ಪ ಕ್ಲಿನಿಕ್ ಹಾಗೂ ಎಚ್.ಡಿ.ಕೋಟೆ ಪಟ್ಟಣದ ಶಮನ ಪಾಲಿ ಕ್ಲಿನಿಕ್ ನಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಆಯುಷ್ ಚಿಕಿತ್ಸೆ ನೀಡಬೇಕಾದ ಅರ್ಹ ವೈದ್ಯರು ಅಲೋಪತಿಕ್ ಹೆಸರಿನಲ್ಲಿ ಚುಚ್ಚು ಮದ್ದುಗಳನ್ನು ನೀಡಲು ಸಜ್ಜುಗೊಂಡಿದ್ದ ಹಲವಾರು ಔಷಧದ ಬಾಟಲಿಗಳನ್ನು ಆರೋಗ್ಯ ಇಲಾಖೆ ವಶಕ್ಕೆ ತೆಗೆದುಕೊಂಡರು. ವೈದ್ಯರು ಅಸಲಿಯೇ ನಕಲಿಯೇ ಅನ್ನುವ ಆಧಾರಿತ ದೃಢೀಕರಣ ಪತ್ರಗಳನ್ನು ಹಾಜರು ಪಡಿಸಿದ ಬಳಿಕ ಅನರ್ಹ ವೈದ್ಯರ ವಿರುದ್ಧ ಕಾನೂನಿನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ