ನೊ ಶೇವ್ ನವೆಂಬರ್…ಮೊವೆಂಬರ್?

Kannada News

14-11-2017 549

ನಿಮಗೆ ನೊ ಶೇವ್ ನವೆಂಬರ್ ಬಗ್ಗೆ ಗೊತ್ತಾ? ಹಂಗೇ ಮೊವೆಂಬರ್ ಕೂಡ ಇದೆ, ಅದರ ಬಗ್ಗೆ ಏನಾದ್ರೂ ಗೊತ್ತಾ? ಹೋಗಲಿ ಬಿಡಿ, ನವೆಂಬರ್ ಮುಗಿಯೋದರ ಒಳಗೆ, ನಾವೂ ನೀವೆಲ್ಲಾ ಸೇರಿ ಇವರೆಡರ ಬಗ್ಗೆನೂ ಒಂದಿಷ್ಟು ತಿಳ್ಕೊಂಬಿಡೋಣ.

ಮೊದಲಿಗೆ ನೊ ಶೇವ್ ನವೆಂಬರ್ ಮತ್ತು ಮೊವೆಂಬರ್ ಅನ್ನುವ ಎರಡೂ ಕೂಡ ಬೇರೆ ಬೇರೆ ಆದ್ರೂ ಒಂದಕ್ಕೊಂದು ಸಂಬಂಧ ಇರೋ ವಿಚಾರಗಳು. ಇಡೀ ನವೆಂಬರ್ ತಿಂಗಳು, ಗಡ್ಡಕ್ಕೆ ರೇಜರ್ ಹಾಕೋದು ಅಥವ ಕತ್ತರಿ ಬಳಸೋದನ್ನು ಮರೆತು, ಗಡ್ಡಧಾರಿಗಳಾಗೋದೇ ನೊ ಶೇವ್ ನವೆಂಬರ್.

ಅದೇ ರೀತಿ ಮೊವೆಂಬರ್ ಅನ್ನೋದು ಮೌಸ್ಟಾಶ್ ಮತ್ತು ನವೆಂಬರ್ ಎರಡೂ ಸೇರಿ ಆಗಿರುವ ಪದ. ಇದು, ಇಡೀ ನವೆಂಬರ್ ತಿಂಗಳು ನಿಮ್ಮ ಮೀಸೆಯನ್ನು ಹುಲುಸಾಗಿ  ಬೆಳೆಯೋದಕ್ಕೆ ಬಿಡೋದನ್ನು ಸೂಚಿಸುತ್ತದೆ. ನೊ ಶೇವ್ ನವೆಂಬರ್ ಅಮೆರಿಕದಲ್ಲಿ ಆರಂಭವಾದರೆ, ಮೊವೆಂಬರ್ ಅಭಿಯಾನ ಆರಂಭವಾಗಿದ್ದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ. ನೊ ಶೇವ್ ನವೆಂಬರ್ ಮತ್ತು ಮೊವೆಂಬರ್ ಗಳು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನಿಧಿ ಸಂಗ್ರಹಿಸುವ ಸಲುವಾಗಿ ಆರಂಭವಾದ ಅಭಿಯಾನಗಳು.

ನೊ ಶೇವ್ ನವೆಂಬರ್ ಅನ್ನುವುದು, ಈ ತಿಂಗಳಲ್ಲಿ ನಮ್ಮ ಗಡ್ಡವನ್ನು ತನಗೆ ಹೇಗೆ ಬೇಕೋ ಹಾಗೆ ಬೆಳೆಯಲು ಬಿಟ್ಟು, ಅದನ್ನು ಒಪ್ಪಿಕೊಳ್ಳುವುದನ್ನು ಸೂಚಿಸುತ್ತದೆ. ಇದರ ಜೊತೆಗೆ, ಕ್ಯಾನ್ಸರ್ ರೋಗಿಗಳು ತಮ್ಮ ತಲೆಗೂದಲನ್ನು ಕಳೆದುಕೊಳ್ಳುವುದರ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ. ನೊ ಶೇವ್ ನವೆಂಬರ್ ನಲ್ಲಿ ನೀವು ಗಡ್ಡ ಶೇವ್ ಮಾಡಿಸಲು, ಟ್ರಿಮ್ ಮಾಡಿಸಲು ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸಿ, ಅದನ್ನು ಕ್ಯಾನ್ಸರ್ ರೋಗಿಗಳ ಸಹಾಯಕ್ಕೆ, ಕ್ಯಾನ್ಸರ್‌ ಕಾಯಿಲೆ ಬಗ್ಗೆ ಮಾಹಿತಿ ನೀಡುವುದಕ್ಕೆ ದಾನ ಮಾಡುವುದೂ ಈ ಅಭಿಯಾನದಲ್ಲಿ ಸೇರಿದೆ.

ಮೊವೆಂಬರ್  ಅಭಿಯಾನ, ನಿಮ್ಮ ಮೀಸೆ ಕತ್ತರಿಸಿಕೊಳ್ಳಲು ಬಳಸೋ ಸಮಯವನ್ನು, ಪುರುಷರನ್ನು ಮಾತ್ರ ಬಾಧಿಸುವ ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್, ವೃಷಣಗಳ ಕ್ಯಾನ್ಸರ್, ಪುರುಷರ ಆತ್ಮಹತ್ಯೆ, ಖಿನ್ನತೆ ಇತ್ಯಾದಿ ಕೆಲವು ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು, ಕಾಳಜಿವಹಿಸಲು ಬಳಸಿಕೊಳ್ಳಲು ಪ್ರೇರೇಪಿಸುತ್ತವೆ. ಮೊವೆಂಬರ್ ಅನ್ನುವುದು ಪುರುಷರ ಆರೋಗ್ಯದ ಮುಖ ಚಹರೆಯನ್ನೇ ಬದಲಿಸುವ ಉದ್ದೇಶ ಹೊಂದಿದೆ.


ಸಂಬಂಧಿತ ಟ್ಯಾಗ್ಗಳು

No-shave Movember ಕ್ಯಾನ್ಸರ್ ಮೀಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ