ವೈದ್ಯರ ಮುಷ್ಕರ: 6 ಮಂದಿ ಸಾವು

Kannada News

14-11-2017

ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರು ಇಂದು ಕೂಡ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟವರ ಸಂಖ್ಯೆ 6ಕ್ಕೆ ಎರಿಕೆಯಾಗಿದೆ. ಬೆಳಗಾವಿ ಸುವರ್ಣಸೌಧದ ಮುಂಭಾಗ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳು, ಹಾಸನ, ಬೆಂಗಳೂರು ಮತ್ತಿತರ ಜಿಲ್ಲೆಗಳ ವೈದ್ಯರು ಭಾಗವಹಿಸಿದ್ದು, ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಏಣಪ್ಪ ಎಂಬವರು ಮೃತಪಟ್ಟರೆ, ಹಾಸನದಲ್ಲಿ ಮೂರು ತಿಂಗಳ ಮಗು ಮೃತಪಟ್ಟಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ತಿಪಟೂರಿನಿಂದ ಪೋಷಕರಾದ ನದೀಮ್ ಮತ್ತು ಫರ್ಹಾನಾ ಹಾಸನಕ್ಕೆ ಕರೆ ತರುವಾಗ ಮೃತಪಟ್ಟಿದೆ. ತಿಪಟೂರಿನಲ್ಲಿ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳು ಬಂದ್ ಆದ ಹಿನ್ನೆಲೆಯಲ್ಲಿ ದಂಪತಿ ಹಾಸನಕ್ಕೆ ಮಗುವನ್ನು ಕರೆತರುತ್ತಿದ್ದರು ಎನ್ನಲಾಗಿದೆ.

ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ-2017ನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು, ಪ್ರಯೋಗಾಲಯ ಹಾಗೂ ಕ್ಲಿನಿಕ್ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಕೈಗೊಂಡಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ತುಮಕೂರು, ಹಾಸನ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಬೆಂಗಳೂರಿನ ಕೆಲವೆಡೆ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ದೊರೆಯದೆ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ವೈದ್ಯರ ಕೊರತೆಯಿಂದಾಗಿ ಬೆಂಗಳೂರಿನ ಕಿಮ್ಸ್, ಅಪೋಲೋ, ಎಂ.ಎಸ್ ರಾಮಯ್ಯ ಆಸ್ಪತ್ರೆಗಳು ಸೇರಿದಂತೆ ನಗರದ ಕೆಲವು ಆಸ್ಪತ್ರೆಗಳು ಹೊರರೋಗಿಗಳ ಚಿಕಿತ್ಸೆಯನ್ನು ಬಂದ್ ಮಾಡಿದ್ದವು. ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ 20,000 ವೈದ್ಯರು ನಿನ್ನೆ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ. ರೋಗಿಗಳು ಪರದಾಡುವಂತಾಗಿತ್ತು.

ಸರ್ಕಾರ ಎಲ್ಲಾ ಬಡವರಿಗೆ ಸುಲಭದಲ್ಲಿ ಆರೋಗ್ಯ ಸೇವೆ ದೊರೆಯುಬೇಕು ಎಂಬ ಉದ್ದೇಶದಿಂದ ಖಾಸಗಿ ಅಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಖಾಸಗಿ ಅಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಇದನ್ನು ವಿರೋಧಿಸಿ ಈ ಹಿಂದೆ ನವೆಂಬರ್ 2 ರಂದು ಒಂದು ದಿನದ ಮುಷ್ಕರವನ್ನು ಖಾಸಗಿ ಆಸ್ಪತ್ರೆಗಳು ಕೈಗೊಂಡಿದ್ದವು. ಅದರ ಮುಂದುವರೆದ ಭಾಗವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಬೆಳಗಾವಿಯಲ್ಲಿ ಮುಷ್ಕರ ನಿರತವಾಗಿದ್ದು, ಇದರ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಪ್ರಯೋಗಾಲಯಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಯಾವುದೇ ಮುನ್ಸೂಚನೆಯಿಲ್ಲದೆ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಇದರ ಅರಿವಿಲ್ಲದೆ ಚಿಕಿತ್ಸೆಗೆಂದು ಆಗಮಿಸಿದ್ದ ರೋಗಿಗಳು ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ.

ಸರ್ಕಾರಿ ಆಸ್ಪತ್ರೆಗೆ ಹೆಚ್ಚಿದ ರೋಗಿಯ ಸಂಖ್ಯೆ: ಖಾಸಗಿ ಆಸ್ಪತ್ರೆಗಳ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಎಲ್ಲಾ ವೈದ್ಯರು ಸೇವೆಗೆ ಹಾಜರಾಗುವಂತೆ ಮಾಡಿ, ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಕಾಲಕ್ಕೆ ದೊರೆಯುವಂತೆ ಮಾಡಿದ್ದಾರೆ. ದಿನಕ್ಕೆ 800-1200 ರವರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ಈಗ 2000ಕ್ಕೆ ತಲುಪಿದ್ದು, ರೋಗಿಗಳನ್ನು ಪರೀಕ್ಷಿಸಿ, ವೈದ್ಯಕೀಯ ಸಲಹೆ ನೀಡುತ್ತಿದ್ದಾರೆ. ಒಳರೋಗಿಗಳ ಜತೆಗೆ, ಹೊರ ರೋಗಿಗಳ ನೋಡಿ ಚಿಕಿತ್ಸೆ ನೀಡುವ ಮೂಲಕ ಸರ್ಕಾರಿ ಅಸ್ಪತ್ರೆಯ ಮೇಲಿರುವ ಒತ್ತಡವನ್ನು ನಿಭಾಯಿಸುವಲ್ಲಿ ಸರ್ಕಾರಿ ವೈದ್ಯರು ಸಫಲರಾಗಿದ್ದಾರೆ.

ಖಾಸಗಿ ಆಸ್ಪತ್ರೆಗಳ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಪ್ರಯೋಗಾಲಯಗಳು ಬಾಗಿಲು ಮುಚ್ಚಿದ್ದ ಪರಿಣಾಮ, ಪ್ರಯೋಗಾಲಯದ ಮುಂದೆ ರೋಗಿಗಳು ಕಾದು ಕುಳಿತಿದ್ದು ಕಂಡು ಬಂತು.


ಸಂಬಂಧಿತ ಟ್ಯಾಗ್ಗಳು

Doctors Bill ಅಧಿವೇಶ ಪ್ರಯೋಗಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ