ವಿಜ್ಞಾನಿಗಳಿಂದ ಮಾನವ ಜನಾಂಗಕ್ಕೆ ಎಚ್ಚರಿಕೆ…

Kannada News

14-11-2017

ಈ ಜಗತ್ತಿನ ಜೀವ ವೈವಿಧ್ಯಕ್ಕೆ ಭಾರಿ ಧಕ್ಕೆಯಾಗುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಲು, ವಿಶ್ವದ ಎಲ್ಲಾ ದೇಶಗಳ ಜನರು, ಪರಿಸರಕ್ಕೆ ಪೂರಕವಾಗುವಂತೆ ಸುಸ್ಥಿರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇಡೀ ಮಾನವ ಜನಾಂಗಕ್ಕೆ ಭಾರಿ ಅಪಾಯ ಕಾದಿದೆ, ಎಂದು ವಿಶ್ವದ 184 ದೇಶಗಳ 15 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇದು ಜಾಗತಿಕ ವಿಜ್ಞಾನಿಗಳ ಸಮುದಾಯ ನೀಡಿರುವ ಎರಡನೇ ಎಚ್ಚರಿಕೆ. ಸರಿಯಾಗಿ 25 ವರ್ಷಗಳ ಹಿಂದೆಯೂ ಇಂಥದ್ದೇ ಒಂದು ಎಚ್ಚರಿಕೆ ಸಂದೇಶವನ್ನು ಮಾನವರಿಗೆ ನೀಡಲಾಗಿತ್ತು.  

ನಾವೆಲ್ಲರೂ ವಾಸಮಾಡುತ್ತಿರುವ ಭೂ ಗ್ರಹ ಎದುರಿಸುತ್ತಿರುವ ಸಮಸ್ಯೆಗಳು, ತೀರಾ ಅಪಾಯದ ಮಟ್ಟತಲುಪಿವೆ ಎಂದು ವಿಶ್ವದ ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಪತ್ರವನ್ನು ಬಯೋಸೈನ್ಸ್ ಜರ್ನಲ್‌ ನಲ್ಲಿ ಪ್ರಕಟಿಸಲಾಗಿದೆ.

1992ರಲ್ಲಿ ಜಗತ್ತಿನ 1,700 ವಿಜ್ಞಾನಿಗಳ ಒಕ್ಕೂಟ ಮಾನವ ಜನಾಂಗಕ್ಕೆ ಮೊದಲ ಎಚ್ಚರಿಕೆ ನೀಡಿತ್ತು.  ಅಲ್ಲೀಂದೀಚೆಗೆ, ಕಳೆದ 25 ವರ್ಷಗಳಲ್ಲಿ ಜಗತ್ತಿನ ಜನಸಂಖ್ಯೆಗೆ 200 ಕೋಟಿ ಜನರ ಸೇರ್ಪಡೆಯಾಗಿದ್ದು ಶೇ.35 ರಷ್ಟು ಏರಿಕೆ ಕಂಡಿದೆ.

ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆಗಳ ಬಳಕೆಯಿಂದ ವಾಯು ಮಾಲಿನ್ಯ ವಿಪರೀತ ಹೆಚ್ಚಾಗಿದೆ. ಅರಣ್ಯ ನಾಶ, ಸುಸ್ಥಿರವಲ್ಲದ ಕೃಷಿ ಪದ್ಧತಿಗಳ ಅನುಸರಣೆ, ಪ್ಲಾಸ್ಟಿಕ್ ತ್ಯಾಜ್ಯ, ಕಲುಷಿತ ನೀರು ಮತ್ತು ರಾಸಾಯನಿಕಗಳ ಸೇರ್ಪಡೆಯಿಂದ ನದಿ, ಸರೋವರ ಮತ್ತು ಸಮುದ್ರಗಳು ಕಲುಷಿತವಾಗುತ್ತಿವೆ. ಮಾನವರು ನಡೆಸುತ್ತಿರುವ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳಿಂದ ಪ್ರಾಣಿಗಳು ಸಂಕಟ ಅನುಭವಿಸುತ್ತಿವೆ. ಎಷ್ಟೋ ಪ್ರಾಣಿಗಳ ಸಂತತಿಯೇ ಅಳಿದು ಹೋಗಿದ್ದು, ಸಾವಿರಾರು ಪ್ರಾಣಿಗಳು ಮತ್ತು ಜಲ ಚರಗಳು ಅಳಿವಿನಂಚಿಗೆ ತಲುಪಿವೆ.

ಹೀಗಾಗಿ, ಭೂಮಿಯನ್ನು ಉಳಿಸಲು ಮಾನವರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಶ್ವದ ವಿಜ್ಞಾನಿಗಳ ಒಕ್ಕೂಟ ಪಟ್ಟಿ ಮಾಡಿದೆ. ಜಗತ್ತಿನ ಜನಸಂಖ್ಯೆ ಕಡಿಮೆಗೊಳಿಸುವ ಸಲುವಾಗಿ ಕುಟುಂಬ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಸೌರಶಕ್ತಿ, ವಾಯು ಶಕ್ತಿ ಇತ್ಯಾದಿ ನವೀಕರಿಸಬಹುದಾದ ಶಕ್ತಿ ಬಳಕೆ ಹೆಚ್ಚು ಮಾಡಿ, ಪೆಟ್ರೋಲ್, ಡೀಸೆಲ್ ಬಳಕೆ ತಗ್ಗಿಸಬೇಕು. ಪ್ರಾಣಿ ಪಕ್ಷಿಗಳಿಗಾಗಿ ಹೆಚ್ಚಿನ ಅಭಯಾರಣ್ಯಗಳನ್ನು ಮೀಸಲಿಡುವುದು, ಪ್ರಾಣಿಗಳ ಬೇಟೆ ತಪ್ಪಿಸುವುದು, ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸುವುದು ಇತ್ಯಾದಿ ಹಲವಾರು ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆಯೆಂದು ವಿಜ್ಞಾನಿಗಳ ಒಕ್ಕೂಟ, ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಮೊದಲ ಎಚ್ಚರಿಕೆ ಬಂದಾಗಲೇ ಸರಿಯಾಗಿ ಗಮನ ವಹಿಸಿದ್ದರೆ, ಇದೀಗ ಈ ಎರಡನೇ ಎಚ್ಚರಿಕೆ ಕೊಡುವ ಅಗತ್ಯವಿರುತ್ತಿರಲಿಲ್ಲವೇನೋ? ಒಟ್ಟಿನಲ್ಲಿ, ಮನುಷ್ಯರು ಬುದ್ಧಿ ಕಲಿಯಲು ತುಂಬಾ ಕಡಿಮೆ ಸಮಯ ಉಳಿದಿದೆ, ಬುದ್ಧಿ ಕಲಿಯದಿದ್ದರೆ ವಿನಾಶ ಖಚಿತ. “we have not inherited this earth from our forefathers. But we have borrowed it from our children” ‘ನಾವು ಈ ಜಗತ್ತನ್ನು ನಮ್ಮ ಪೂರ್ವಜರಿಂದ ಆಸ್ತಿಯಾಗಿ ಪಡೆದುಕೊಂಡಿಲ್ಲ, ಬದಲಿಗೆ, ನಮ್ಮ ಮಕ್ಕಳಿಂದ ಎರವಲು ಪಡೆದಿದ್ದೇವೆ’ ಎಂಬ ಮಾತನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.


ಸಂಬಂಧಿತ ಟ್ಯಾಗ್ಗಳು

Scientists environment ಜೀವ ವೈವಿಧ್ಯ ವಿಶ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ