ಅಧಿಕಾರಿಗೆ ಸಂಸದ ಪುಟ್ಟರಾಜು ಧಮಕಿ !

Kannada News

14-11-2017 223

ಮಂಡ್ಯ: ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಅಧಿಕಾರಿಗಳಿಗೆ ಸಂಸದರೊಬ್ಬರು ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಅದಲ್ಲದೇ ಜಿಲ್ಲಾಧಿಕಾರಿಗಳ ಎದುರಲ್ಲೇ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದು, ದಕ್ಷ ಅಧಿಕಾರಿಗಳ ಸ್ಥಿತಿ ಹೇಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಬಯಲಾಗಿದೆ.

ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜುರು ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷ್ ಅವರಿಗೆ, ಡಿಸಿ ಎದುರಲ್ಲೇ ಅಧಿಕಾರಿಗೆ ಏಕವಚನ ಪ್ರಯೋಗ ಮಾಡಿ ಬೆದರಿಕೆ ಹಾಕಿದ್ದಾರೆ. ಇನ್ನು ಸ್ಥಳದಲ್ಲೇ ಇದ್ದ ಡಿಸಿ ಮಂಜುಶ್ರೀ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.  

ಸಂಸದ ಪುಟ್ಟರಾಜು, ಅಧಿಕಾರಿಗೆ ‘ಏಯ್ ಏನ್ ಮಾಡ್ತೀಯಾ ಇಲ್ಲಿ, ನಿನ್ನನ್ನ ಸುಲಭವಾಗಿ ಬಿಡ್ತೀವಾ’ ಎಂದು ಗಣಿ ಮಾಲೀಕರ ಪರವಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ದರ್ಪ ಮುಂದುವರೆಸಿ, ಎಷ್ಟು ಸಾವಿರ ಜನರನ್ನು ಕರೆಸಬೇಕೋ ಕರಿಸ್ತೀನಿ, ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಬೇಬಿ ಬೆಟ್ಟ, ಚಿನಕುರಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು, ಎರಡು ತಿಂಗಳ ಕಾಲ ಜಿಲ್ಲಾಧಿಕಾರಿ ಮಂಜುಶ್ರೀ ಅವರು ನಿಷೇಧಿಸಿದ್ದರು. ಪರಿಸರ ಇಲಾಖೆಯ ಸಿ ಫಾರಂ ಹಾಗೂ ಅಕ್ರಮದ ಹಿನ್ನಲೆಯಲ್ಲಿ ಸಂಸದರ ಗಣಿಯೂ ಬಂದ್ ಮಾಡಲಾಗಿತ್ತು. ಈ ಕುರಿತಂತೆ ಕುಪಿತಗೊಂಡ ಪುಟ್ಟರಾಜು, ಮಾಲೀಕರನ್ನು ಡಿಸಿ ಕಚೇರಿಗೆ ಕರೆತಂದು, ಡಿಸಿ, ಅಪರ ಡಿಸಿ, ಇಬ್ಬರು ಎಸಿ ಗಳ ಸಮ್ಮುಖದಲ್ಲೇ ಬೆದರಿಕೆ ಹಾಕಿ, ನಿಷೇದಾಜ್ಞೆ ಹಿಂಪಡೆಯಲು ಒತ್ತಡ ಹೇರಿದ್ದಾರೆ. ಈ ವೇಳೆ ಒತ್ತಡಕ್ಕೆ ಮಣಿಯದ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ