ಮಂಗಳ ಗ್ರಹಕ್ಕೆ ಟಿಕೆಟ್ ಬುಕ್ ಆಯ್ತಾ..?

Kannada News

13-11-2017 699

ಮಂಗಳ ಗ್ರಹಕ್ಕೆ ಹೋಗಲು ಸುಮಾರು ಒಂದು ಲಕ್ಷ ಮೂವತ್ತು ಸಾವಿರ ಭಾರತೀಯರು ಟಿಕೆಟ್ ಬುಕ್ ಮಾಡಿದ್ದಾರಂತೆ…! ಹೌದು ಇವರೆಲ್ಲರೂ ಟಿಕೆಟ್ ಬುಕ್ ಮಾಡಿರುವುದಂತೂ ನಿಜ, ಆದರೆ, ಸದ್ಯಕ್ಕೆ ಅವರ ಹೆಸರುಗಳು ಮಾತ್ರ ಮಂಗಳ ಗ್ರಹ ತಲುಪುತ್ತಿವೆ. ಮುಂದೊಂದು ದಿನ ಇವರ ಮೊಮ್ಮಕ್ಕಳೋ, ಮರಿ ಮೊಮ್ಮಕ್ಕಳೋ ಮಂಗಳ ಗ್ರಹಕ್ಕೆ ಭೇಟಿ ನೀಡುವಂತ ಕಾಲ ಬರಬಹುದು.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಮುಂದಿನ ವರ್ಷ ಮಂಗಳಯಾನ ಆಯೋಜಿಸಿದೆ. ಮಂಗಳನ ಮೇಲಿಳಿಯಲಿರುವ ಅಮೆರಿಕದ ‘ಇನ್‌ಸೈಟ್’ ನೌಕೆಯ ಜೊತೆಗೆ ತಮ್ಮ ಹೆಸರು ಕಳಿಸಲು ಆಸಕ್ತಿಯಿರುವವರು ನಮಗೆ ತಿಳಿಸಬಹುದು ಎಂದು ನಾಸ ಕಳೆದ ತಿಂಗಳು ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ವಿಶ್ವದ ಹಲವು ದೇಶಗಳ 24ಲಕ್ಷಕ್ಕೂ ಹೆಚ್ಚು ನಾಗರಿಕರು ತಮ್ಮ ಹೆಸರುಗಳನ್ನು ನಾಸಗೆ ಕಳಿಸಿಕೊಟ್ಟಿದ್ದರು. ಈ ರೀತಿ ಹೆಸರು ನೋಂದಾಯಿಸಿಕೊಂಡವರಿಗೆಲ್ಲಾ ಆನ್‌ಲೈನ್ ಮೂಲಕ ಮಂಗಳಯಾನದ ‘ಬೋರ್ಡಿಂಗ್ ಪಾಸ್’ ನೀಡಲಾಗುತ್ತದಂತೆ, ಅದನ್ನು ಅವರು ಡೌನ್ ಲೋಡ್ ಮಾಡಿ ತಮ್ಮ ಬಳಿ ಇಟ್ಟುಕೊಂಡು ಆನಂದಿಸಬಹುದು. ಇದರ ಜೊತೆಗೆ, ಇವರೆಲ್ಲರ ಹೆಸರುಗಳನ್ನೂ ಎಲೆಕ್ಟ್ರಾನಿಕ್ ಮೈಕ್ರೋ ಚಿಪ್ ಮೇಲೆ ಸೂಕ್ಷ್ಮವಾಗಿ ಕೆತ್ತಿ, ಅದನ್ನು 2018ರ ಮೇ ತಿಂಗಳ 5ರಂದು ‘ಮಂಗಳ ಯಾತ್ರೆ’ಗೆ ತೆರಳಲಿರುವ ಇನ್‌ಸೈಟ್ ನೌಕೆಯ ಜೊತೆಗೆ ಕಳಿಸಲಾಗುತ್ತದಂತೆ, ಅದು ಶಾಶ್ವತವಾಗಿ ಅಲ್ಲಿಯೇ ಉಳಿಯುತ್ತದಂತೆ.

ಅಮೆರಿಕದ ಸುಮಾರು 7 ಲಕ್ಷ ನಾಗರಿಕರು ಮಂಗಳ ಯಾತ್ರೆಗೆ ಹೆಸರು ಕಳಿಸಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಚೀನಾ ದೇಶದಿಂದ ಎರಡು ಲಕ್ಷ ಅರವತ್ತೆರಡು ಸಾವಿರದ ಏಳುನೂರ ಐವತ್ತೆರಡು ಜನ ಹೆಸರು ಕಳಿಸಿದ್ದು 2 ನೇ ಸ್ಥಾನದಲ್ಲಿದ್ದರೆ, ಒಂದು ಲಕ್ಷ ಮೂವತ್ತೆಂಟು ಸಾವಿರದ ಎಂಟು ನೂರ ತೊಂಬತ್ತೊಂಬತ್ತು ಭಾರತೀಯರೂ ಕೂಡ ತಮ್ಮ ಹೆಸರನ್ನು ಕಳಿಸಿದ್ದು ಭಾರತಕ್ಕೆ ಮೂರನೇ ಸ್ಥಾನ ದೊರಕಿದೆಯಂತೆ.

ಒಟ್ಟಿನಲ್ಲಿ, ಈಗಾಗಲೇ ನಮ್ಮ ಇಸ್ರೋದವರ ಮಾರ್ಸ್ ಆರ್ಬಿಟರ್ ಮಿಷನ್ ‘ಮಂಗಳ ಯಾನ’ ಯಶಸ್ವಿಯಾಗಿದೆ. ಮುಂದೊಂದುದಿನ ಕೆಂಪು ಗ್ರಹ ಎಂದು ಕರೆಸಿಕೊಳ್ಳುವ ಮಂಗಳ ಅಥವ ಅಂಗಾರನ ಅಂಗಳದಲ್ಲಿ ಭಾರತದ ಮಾನವ ಸಹಿತ ನೌಕೆಯೂ ಇಳಿಯಬಹುದು…

 


ಸಂಬಂಧಿತ ಟ್ಯಾಗ್ಗಳು

Mars NASA ‘ಇನ್‌ಸೈಟ್' ಮಂಗಳ ಗ್ರಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ