ಪ್ರತಿಭಟನೆಯತ್ತ ರಾಜ್ಯ ಎನ್‍ಪಿಎಸ್ ನೌಕರರು...

Kannada News

13-11-2017 354

ಬೆಂಗಳೂರು: ಸರ್ಕಾರಿ ನೌಕರರ ತೀವ್ರ ಪ್ರತಿರೋಧದ ಪರಿಣಾಮ ದೇಶದ 12ಕ್ಕೂ ಹೆಚ್ಚು ರಾಜ್ಯಗಳು ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್) ಪದ್ಧತಿಯನ್ನು ರದ್ದುಪಡಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಮಾತ್ರ ನಿವೃತ್ತಿ ಮತ್ತು ಮರಣ ಉಪಧನ (ಡಿಸಿಆರ್‍ಜಿ) ಮಸೂದೆಯು ಅಂಕಿತಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾದು ಕುಳಿತಿದೆ.

ಸರ್ಕಾರಿ ನೌಕರರು ನಿವೃತ್ತಿ ನಂತರ ಪಿಂಚಣಿ ಪಡೆಯುತ್ತಿದ್ದರು ಆದರೆ 2006ರ ಏಪ್ರಿಲ್ ನಂತರದಲ್ಲಿ ನೇಮಕಗೊಂಡ ಸಕಾರಿ ನೌಕರರಿಗೆ ಪಿಂಚಣಿ ಬದಲು ಎನ್‍ಪಿಎಸ್ ಜಾರಿಗೊಳಿಸಿ ನೌಕರರ ಮೂಲ ವೇತನದ ಶೇ.10ರಷ್ಟು ಕಡಿತಗೊಳಿಸುತ್ತಿದ್ದು ಇದಕ್ಕೆ ಸರಕಾರ ಶೇ.10ರಷ್ಟು ಹಣ ನೀಡುತ್ತದೆ.

ಭವಿಷ್ಯನಿಧಿ ಯೋಜನೆಯಡಿ ಹೂಡಿಕೆ ಮಾಡಿ, ಅದರಿಂದ ಪಿಂಚಣಿ ಪಾವತಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ನೂತನ ಪಿಂಚಣಿ ವ್ಯವಸ್ಥೆಗೆ ಸರ್ಕಾರಿ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಎನ್‍ಪಿಎಸ್ ಅವೈಜ್ಞಾನಿಕವಾಗಿದ್ದು, ನೌಕರರ ನಿವೃತ್ತ ಜೀವನ ಹಲವು ಸಂಕಷ್ಟಗಳನ್ನು ಎದುರಿಸುವಂತಾಗಲಿದೆ ಎಂದು ಸರ್ಕಾರಿ ನೌಕರರು ಎನ್‍ಪಿಎಸ್ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಎನ್‍ಪಿಎಸ್ ರದ್ದತಿಯನ್ನು ಪೂರ್ಣವಾಗಿ ಕೈಗೊಳ್ಳದಿದ್ದರೂ, ನೌಕರರ ಬೇಡಿಕೆಗೆ ಪೂರಕವಾಗಿ ಕೆಲವೊಂದು ಸುಧಾರಿತ ಕ್ರಮ ಕೈಗೊಂಡಿವೆ.

ಎಂಟು ರಾಜ್ಯಗಳಲ್ಲಿ ನಿವೃತ್ತಿ ಮತ್ತು ಮರಣ ಉಪಧನ ಬಿಲ್‍ನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿವೆ. ಕುಟುಂಬ ಪಿಂಚಣಿ ಬಿಲ್ ಜಾರಿಗೆ ಕ್ರಮ ಕೈಗೊಂಡಿವೆ. ಆಂಧ್ರಪ್ರದೇಶ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಎನ್‍ಪಿಎಸ್ ಸರ್ಕಾರಿ ನೌಕರರ ಕುಟುಂಬಗಳಿಗೆ ಪೂರಕವಾಗುವ ಪಿಂಚಣಿ ಬಿಲ್ ಜಾರಿಗೆ ಅನುಮೋದನೆ ನೀಡಿದೆ. ರಾಜ್ಯದಲ್ಲೂ ಎನ್‍ಪಿಎಸ್ ಸರ್ಕಾರಿ ನೌಕರರ ಸಂಘದಿಂದ ಸಮಾವೇಶ, ಹೋರಾಟ ಕೈಗೊಳ್ಳಲಾಗಿದೆ.

ರಾಜದಲ್ಲಿ 2006ರ ಏಪ್ರಿಲ್‍ನಿಂದ ಇದುವರೆಗೆ ಸುಮಾರು 1.90 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಸೇವೆಯಲ್ಲಿರುವ ಒಟ್ಟು ಸರ್ಕಾರಿ ನೌಕರರಲ್ಲಿ ಶೇ.50ರಷ್ಟು ಎನ್‍ಪಿಎ ನೌಕರರಾಗಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ 8 ರಾಜ್ಯಗಳು ನಿವೃತ್ತಿ ಮತ್ತು ಮರಣ ಉಪಧನ (ಡಿಸಿಆರ್‍ಜಿ)ಬಿಲ್‍ನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮಸೂದೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ತೀವ್ರವಾಗಿದ್ದು, ಸಂಘದವರು ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ಮನವರಿಕೆ ಮಾಡಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹೇಳಲಾಗುತ್ತಿದ್ದು, ಕಡತಕ್ಕೆ ಮುಖ್ಯಮಂತ್ರಿಯವರ ಅಂಕಿತವೊಂದೇ ಬಾಕಿ ಇದೆ ಎಂದು ಎನ್ನಲಾಗಿದೆ.

ಕುಟುಂಬ ಪಿಂಚಣಿಗೆ ಒತ್ತಾಯ: ರಾಜ್ಯದಲ್ಲಿ ಸುಮಾರು 200-300 ಎನ್‍ಪಿಎ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಹಳೇ ಪಿಂಚಣಿ ಮಾದರಿಯಲ್ಲಿ ಪಿಂಚಣಿ ನೀಡಬೇಕೆಂಬ ಒತ್ತಾಯ ಮಾಡಲಾಗಿದೆ. ಆಂಧ್ರಪ್ರದೇಶ ಸರಕಾರ ಕೆಲ ದಿನಗಳ ಹಿಂದೆಯಷ್ಟೇ ಎನ್‍ಪಿಎ ಸರ್ಕಾರಿ ನೌಕರರ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮೃತಪಟ್ಟ 200-300 ಎನ್‍ಪಿಎ ನೌಕರರ ಕುಟುಂಬದವರಿಗೆ ಹಳೇ ಮಾದರಿ ಪಿಂಚಣಿ ನೀಡುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬದ ಸಹಾಯಕ್ಕೆ ಸರಕಾರ ಧಾವಿಸಬೇಕೆಂಬುದು ಸಂಘದ ಒತ್ತಾಯವಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ