‘ಜಾರ್ಜ್ ರಾಜೀನಾಮೆ ನೀಡುವ ಅಗತ್ಯವೇನಿದೆ’

Kannada News

13-11-2017

ಬೆಳಗಾವಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಮ್ಮ ಪಕ್ಷದ ವತಿಯಿಂದ ವಿಧಾನ ಪರಿಷತ್‍ನಲ್ಲಿ ನಿಲುವಳಿ ಸೂಚನೆ ಮಂಡಿಸಲಾಗುವುದು. ಸಚಿವರ ರಾಜೀನಾಮೆಗೆ ಆಗ್ರಹಿಸಿ ಪಟ್ಟು ಹಿಡಿಯುತ್ತವೆ ಎಂದರು.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರು ಪ್ರಮುಖ ಆರೋಪಿ ಎಂದು, ಸಿಬಿಐ ಎಫ್‍ಐಆರ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರು ರಾಜೀನಾಮೆ ನೀಡಬೇಕಾಗಿತ್ತು. ಇನ್ನೂ ರಾಜೀನಾಮೆ ನೀಡದ ಕಾರಣ ಅವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಒತ್ತಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಂ.ಆರ್.ಸಿತಾರಾಂ ಅವರು, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಈಗಾಗಲೇ ರಾಜೀನಾಮೆ ನೀಡಿದ್ದರು. ಈಗ ಮತ್ತೊಮ್ಮೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ. ಸಿಐಡಿ ಈ ಪ್ರಕರಣದಲ್ಲಿ ಕ್ಲೀನ್‍ಚಿಟ್ ಕೊಟ್ಟಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಬಿಐ ತನಿಖೆ ನಡೆಸುತ್ತಿದೆ, ಹಾಗಾಗಿ ಸತ್ಯಾಂಶ ಹೊರಬರಲಿದೆ, ಅವರು ಮತ್ತೊಮ್ಮೆ ರಾಜೀನಾಮೆ ಕೊಡುವ ಅಗತ್ಯವೇನಿದೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ