ನಾಗಾ ಸಾಧುಗಳೊಂದಿಗೆ ನಡೆದಾಡುತ್ತಾ….

Kannada News

13-11-2017

(2012ರಲ್ಲಿ ಬರೆದ ಒಂದು ಪ್ರವಾಸ ಕಥನ): ಹರಿದ್ವಾರ ಮತ್ತು ಉತ್ತರಾಖಂಡ್ ಈಗ ಸಾಕಷ್ಟು ಬದಲಾಗಿದೆ. ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಹರಿದ್ವಾರದ ವಾತಾವರಣ ಬದಲಾಗಿದೆ, ಹಾಗೆಯೇ ಸ್ವಚ್ಛವಾಗಿದ್ದ ಹರಿದ್ವಾರ ಈಗ ಕೊಚ್ಚೆಯಂತಾಗಿಬಿಟ್ಟಿದೆ. ಆದರೂ, ಬಹಳಷ್ಟು ಅಂಶಗಳು ಹಾಗೇ ಉಳಿದುಬಿಟ್ಟಿವೆ. 2010ರ ಪೂರ್ಣ ಕುಂಭ ಮೇಳದ ನಂತರ, 2016ರಲ್ಲಿ ಅರ್ಧ ಕುಂಭ ಮೇಳವೂ ಆಗಿದೆ. ಆದರೆ, ಹರಿದ್ವಾರ ಯಾತ್ರೆಯ ಈ ನಿರೂಪಣೆ ಓದುಗರಿಗೆ ಹೊಸದೊಂದು ಅನುಭವವನ್ನು ಕಟ್ಟಿಕೊಡಬಹುದು.

ಕುಂಭ ಮೇಳ ಎಂದರೆ ಜನಜಾತ್ರೆ, ನಾಗಾ ಸಾಧುಗಳು, ಗಲಾಟೆ, ಸಂತರು, ಟ್ರಾಫಿûಕ್ ಜ್ಯಾಮ್, ಕ್ಯೂ, ಕೊಳಚೆ ಎಂದೆಲ್ಲ ಅಂದುಕೊಂಡು ಹರಿದ್ವಾರದಲ್ಲಿ ಕಾಲಿಟ್ಟಾಗ ನನಗೆ ಕಾದಿತ್ತು ಆಶ್ಚರ್ಯ. ಅದು ಶಾಹಿಸ್ನಾನದ ದಿನವಾಗಿಲ್ಲದ ಕಾರಣದಿಂದಲೋ, ವ್ಯವಸ್ಥೆ ಅಷ್ಟು ಅಚ್ಚುಕಟ್ಟಾಗಿದ್ದರಿಂದಲೋ ಏನೊ ಜನಜಂಗುಳಿ ಇಲ್ಲ, ಅವ್ಯವಸ್ಥೆ ಇಲ್ಲ, ಕೊಳಕು ಕಂಡು ಬರಲಿಲ್ಲ, ಗಲಾಟೆ ಅನುಭವಿಸಲಿಲ್ಲ. ಜನ ಬದಲಾಗುವುದಿರಲಿ, ಭಾರತವೇ ಬದಲಾಗಿಬಿಟ್ಟಿದೆಯೋ ಎಂದು ಒಂದು ಕ್ಷಣ ಅನ್ನಿಸಿತು. ಏನಿದ್ದರೂ ಹರಿದ್ವಾರದ ಬಗ್ಗೆ ನನ್ನ ಮನಸ್ಸಲ್ಲಿದ್ದ ಕಲ್ಪನೆ ಮಾತ್ರ ಬದಲಾಗಿಬಿಟ್ಟಿದೆ. ಅನೇಕ ಪುಣ್ಯ ಕ್ಷೇತ್ರಗಳನ್ನು ನೋಡಿದ್ದ ಮತ್ತು ಅಲ್ಲಿನ ಕೊಳಕು ಮತ್ತು ಅವ್ಯವಸ್ಥೆಗಳನ್ನು ಕಂಡಿದ್ದ ನನ್ನ ಕಣ್ಣುಗಳಿಗೆ, ಹರಿದ್ವಾರ ಒಂದು ಹೊಸ ಆಯಾಮದಂತೆ ತೋರಿತು.

ಒಂದು ಅತ್ಯಂತ ಸ್ವಚ್ಛವಾದ ಬೀದಿಯನ್ನು ಬೆಳಿಗ್ಗೆ ನೋಡಿದಾಗ, ‘ಓ ಈಗ ತಾನೆ ಗುಡಿಸಿ ಸ್ವಚ್ಛವಾಗಿದೆ, ಮಧ್ಯಾಹ್ನದ ಮೇಲೆ ಇದೇ ಸ್ವಚ್ಛತೆ ಹೇಗಿರುತ್ತದೆ ಎಂದು ನೋಡಿಬಿಡೋಣ’ ಎಂದುಕೊಂಡು ಅಪರಾಹ್ನ ಮೂರು ಗಂಟೆಗೆ ನೋಡಿದಾಗಲೂ ಅದೇ ಸ್ವಚ್ಛತೆ, ಅದೇ ಅಚ್ಚುಕಟ್ಟು. ಇನ್ನೂ ಕುತೂಹಲದಿಂದ ಸಂಜೆ ಬಂದು ನೋಡಿದಾಗಲೂ ಯಥಾಸ್ಥಿತಿ.

ಇದು ಹೇಗೆ ಸಾಧ್ಯ, ಅದೂ ಭಾರತದ ಒಂದು ಪುಣ್ಯಕ್ಷೇತ್ರದಲ್ಲಿ ಎಂದು ನಾನು ಆಶ್ಚರ್ಯಪಟ್ಟಿದ್ದು ಉಂಟು. ಹರಿದ್ವಾರದಲ್ಲಿ ನಾನು ಕಂಡ ಸ್ವಚ್ಛತೆ ಬರೀ ಭ್ರಮೆಯೋ ಅಥವ ಕುಂಭಮೇಳಕ್ಕಾಗಿ ಏರ್ಪಟ್ಟ ವಿಶೇಷ ತಾತ್ಕಾಲಿಕ ವ್ಯವಸ್ಥೆಯೋ ನಾ ಹೇಳಲಾರೆ. ಉತ್ತರಾಖಂಡದ  (ಅಂದಿನ) ಮುಖ್ಯಮಂತ್ರಿ ಪೋಖ್ರಿಯಾಲ್‍ರನ್ನು ಹರಿದ್ವಾರದ ಜನ ಹೊಗಳುವುದನ್ನು ನೋಡಿದರೆ, ಇದೊಂದು ಶಾಶ್ವತ ಪ್ರಯತ್ನ ಎಂದೆನಿಸಿದರೂ ತಪ್ಪಿಲ್ಲ.

ಡೆಹರಾಡೂನಿನ ತನಕ ಮಾತ್ರ ವಿಮಾನಸೇವೆ ಇರುವುದರಿಂದ ಅಲ್ಲಿಂದ ರಸ್ತೆಯಲ್ಲಿ ಪ್ರಯಾಣಿಸಬೇಕಾದ್ದರಿಂದ ಸುತ್ತಮುತ್ತಲಿನ ನಿಸರ್ಗವನ್ನು ಆಸ್ವಾದಿಸುತ್ತಾ ಕಾರಿನಲ್ಲಿ ಜೊತೆಗಿದ್ದ ಸ್ಥಳೀಯರೊಡನೆ ಹರಟುತ್ತಾ ಸಾಗಿದಾಗ ಎಲ್ಲೋ ನಮ್ಮ ಕೊಡಗಿನ ವಿರಾಜಪೇಟೆ ಸುತ್ತಮುತ್ತಲು ವಿಹರಿಸಿದ ಭ್ರಮೆ. ಮೃದು ಸ್ವಭಾವದ ಸ್ಥಳೀಯರು ಸಜ್ಜನಿಕೆಯಿಂದ ತಮ್ಮ ಊರಾದ ಹರಿದ್ವಾರದ ಬಗ್ಗೆ ಮತ್ತು ಗಂಗಾ ಮಾತೆಯ ಬಗ್ಗೆ ಹೇಳಿದಾಗ ನನ್ನಲ್ಲಿ ನಿರೀಕ್ಷಾಮಟ್ಟ ಏರುತ್ತಾ ಹೋಗಿದ್ದು ಸಹಜವೇ. ಇಲ್ಲಿ ಈಗ ಆಳುತ್ತಿರುವವರು ಫೂಲ್‍ವಾಲೆ(ಹೂವಿನವರು) ಎಂದು ಅವರು ಬಿಜೆಪಿಯವರನ್ನು ಕರೆದಾಗ, ನಾವು ಕರ್ನಾಟಕದಲ್ಲಿ ಬಿಜೆಪಿಯವರನ್ನು ಏನೆಲ್ಲಾ ಕರೆಯುತ್ತೇವೆ ಎಂದು ನೆನಪಾಗಿ ನಗು ಬಂದಿತು.

ಅಚ್ಚುಕಟ್ಟಾದ ಹಳ್ಳಉಬ್ಬುಗಳಿಲ್ಲದ ರಸ್ತೆಯಲ್ಲಿ ಸಾಗಿ ಹರಿದ್ವಾರ ತಲುಪಿದಾಗ ನಾನು ಮೊದಲು ಗಮನಿಸಿದ್ದೇ ಅಲ್ಲಿನ ಸ್ವಚ್ಛತೆ. ಸ್ಥಳೀಯರು ಕಸ ಹಾಕುವುದಿರಲಿ, ಪ್ರವಾಸಿಗರೂ ಕಸ ಹಾಕುವುದು, ಕೊಳಕು ಹಾಕುವುದು ಕಂಡು ಬರಲಿಲ್ಲ. ನನಗೆ ಹರಿದ್ವಾರಕ್ಕೆ ಹೋಗಲು ಅವಕಾಶ ಬಂದಿದ್ದು ಅಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ರಕ್ಷಾ ಸಮ್ಮೇಳನದಲ್ಲಿ ಭಾಗವಹಿಸಲು ಸಿಕ್ಕಿದ ಆಮಂತ್ರಣದಿಂದಾಗಿ. ಸಮ್ಮೇಳನಕ್ಕಿಂತಲೂ ನನ್ನನ್ನು ಆಕರ್ಷಿಸಿದ್ದು ಹರಿದ್ವಾರ. ಜೀವನದಲ್ಲಿ ಪ್ರಥಮಬಾರಿಗೆ ಗಂಗೆಯನ್ನು ನೋಡುವ, ಗಂಗೆಯನ್ನು ಮುಟ್ಟುವ, ಗಂಗೆಯಲ್ಲಿ ಸ್ನಾನಮಾಡುವ ಅವಕಾಶವನ್ನು ನೆನೆದೇ ಪುಳಕಿತನಾಗಿದ್ದೆ.

ಹತ್ತಿರವಿದ್ದುದ್ದೆಲ್ಲದರ ಬಗ್ಗೆ ಅಸಡ್ಡೆ ಎಂಬ ಇಂಗ್ಲಿಷ್ ನಾಣ್ಣುಡಿ ಸತ್ಯವಾಗಿದ್ದರೆ, ಹರಿದ್ವಾರದ ಸ್ಥಳೀಯರಿಗೆ ಗಂಗೆಯ ಬಗ್ಗೆ ಎಂಥಹ ಭಾವನೆ ಇದೆ ಎಂಬುದು ನನ್ನ ಕುತೂಹಲವಾಗಿತ್ತು. ಅನೇಕರನ್ನು ಮಾತನಾಡಿಸಿ ಗಂಗೆಯ ತಟೆಯಲ್ಲಿ ಕುಳಿತು ಹಾದಿಹೋಕರ ಚಲನವಲನವನ್ನು ಗಮನಿಸಿದಾಗ ಗಂಗೆ ಎಷ್ಟು ಪೂಜನೀಯ ಮತ್ತು ಎಂಥಹ ದೈವೀ ಪ್ರಭಾವವನ್ನು ಅಲ್ಲಿನ ಜನರ ಮೇಲೆ ಬೀರಿದ್ದಾಳೆಂಬುದು ಸ್ಪಷ್ಟ ಗೋಚರ.

ಹರಿದ್ವಾರದಲ್ಲಿ, ಈ ಸಮಯದಲ್ಲಿ, ಎಲ್ಲರೂ ಪ್ರವಾಸಿಗರೇ ಎನಿಸಿದರೆ ಆಶ್ಚರ್ಯವಿಲ್ಲ. ಕಾರಣ, ಹರಿದ್ವಾರಕ್ಕೆ ಬಂದಿರುವವರಿಗೆ ಎಲ್ಲಿ ಏನಿದೆ ಎಂದು ಗೊತ್ತಿರಲು ಸಾಧ್ಯವಿಲ್ಲವಾದರೂ, ಅಲ್ಲಿನ ಸ್ಥಳೀಯರಿಗೂ ಎಲ್ಲಿ ಏನನ್ನು ನಿರ್ಮಿಸಲಾಗಿದೆ ಎಂಬುದು ಗೊತ್ತಿಲ್ಲ. ಕೆಲವೊಮ್ಮೆ ಪೆÇಲೀಸರನ್ನು ಕೇಳುವ ಎಂದರೆ, ಅವರಿಂದ ಬರುವ ತಯಾರಾದ ಉತ್ತರ, ‘ನಮಗೂ ಏನೂ ಗೊತ್ತಿಲ್ಲ, ನಮ್ಮನ್ನು ಬೇರೆ ಕಡೆಯಿಂದ ಕರೆತರಲಾಗಿದೆ’.

ಆದರೆ, ಹರಿದ್ವಾರದಲ್ಲಿ ಸಂಜೆ ಓಡಾಡುವುದು, ಅದೇ ಒಂದು ಸುಖ. ಅಪರಿಚಿತ ಪಟ್ಟಣದಲ್ಲಿ ಅಪರಿಚಿತರನ್ನೇ ನೋಡಿಕೊಂಡು ವಿದ್ಯುತ್ ಬೆಳಕಿನಲ್ಲಿ ಗಂಗೆಯ ಹೊಳಪಿನ ಸ್ಪೂರ್ತಿಯೊಂದಿಗೆ ಸಾವಿರಾರು ಪೆÇಲೀಸರ ಮಧ್ಯೆ ಓಡಾಡುವಾಗ ಒಂದು ವಿಚಿತ್ರ ಸುರಕ್ಷತೆಯ ಅನುಭೂತಿ. ನಾನಿದ್ದ ಸಮಯದಲ್ಲಂತೂ ಜನರಿಗಿಂತ ಹೆಚ್ಚು ಪೆÇಲೀಸರೇ ಕಂಡುಬಂದಿದ್ದು ಇನ್ನೊಂದು ವಿಚಿತ್ರ. ಅದರಲ್ಲೆಲ್ಲ ಮೀಸೆ ಚಿಗುರಿದ ಹುಡುಗರೆಲ್ಲ ಒಮ್ಮೆಲೇ ಪೆÇಲೀಸ್ ಸೇವೆ ಸೇರಿಬಿಟ್ಟರೇ ಎಂಬಂತೆ ಬರೀ ಯುವ ಪೆÇಲೀಸರೆ ಎಲ್ಲಾ ಕಡೆ ಮುಗುಳ್ನಗೆಯಿಂದ ಓಡಾಡಿಕೊಂಡಿದ್ದು ಕಂಡು, ಇದು ಹರಿದ್ವಾರಕ್ಕೆ ಸನ್ನಡತೆಯ ಇಮೇಜನ್ನು ಹೊದಿಸುವ ಹುನ್ನಾರವೇನೋ ಎಂಬ ಗುಮಾನಿಯೂ ಬಂದಿತು.

ಹರ್ ಕಿ ಪೌಡಿ, ಸ್ನಾನ ಮಾಡುವ ವಿಶಿಷ್ಟ ಸ್ಥಳ.  ಸಂಜೆಯ ಹೊತ್ತು ಸ್ನಾನಕ್ಕೆ ತಯಾರಿ ಮಾಡಿಕೊಂಡು ಹರ್ ಕಿ ಪೌಡಿ ಹುಡುಕುತ್ತಾ ಸಾವಿರಾರು ಜನ ಸ್ನಾನ ಮಾಡುವ ಜಾಗ ಹೇಗಿರುತ್ತೋ, ಹೇಗಪ್ಪಾ ಮುಳುಗುವುದು ಎಂದುಕೊಂಡು, ಹುಡುಕುತ್ತಾ ಹುಡುಕುತ್ತಾ, ನಡೆಯುತ್ತ ನಡೆಯುತ್ತಾ ಸೂರ್ಯಸ್ತವಾಗುತ್ತಿದ್ದಂತೆ ಹರ್ ಕಿ ಪೌಡಿ ತಲುಪಿದಾಗ, ಭಾರತದ ಅಧ್ಯಾತ್ಮದ ಅಮೂರ್ತ ಸ್ವರೂಪವು ಆಕಾರ ಪಡೆದುಕೊಂಡು ಸಾಕ್ಷಾತ್ಕಾರವಾದಂಥ ನೋಟ. ಹರ್ ಕಿ ಪೌಡಿಗೆ ಪಾದರಕ್ಷೆಯೊಂದಿಗೆ ಪ್ರವೇಶವಿಲ್ಲ. ಒಂದು ಕ್ಷಣ ಇಡೀ ಹರ್ ಕಿ ಪೌಡಿಯೇ ದೇವಸ್ಥಾನದಂತೆ ಮತ್ತು ಪೂಜೆಗೊಳ್ಳುತ್ತಿದ್ದ ಗಂಗೆಯೇ ಜೀವವುಳ್ಳ ಉಸಿರಾಡುತ್ತಿರುವ ದೈವೀ ಮೂರ್ತಿಯಂತೆ ಕಂಡುಬಂದಾಗ ಅದು ಸಾಂದರ್ಭಿಕವಾಗಿ ಏರ್ಪಟ್ಟ ಉನ್ಮಾದವೋ, ಮತಿಭ್ರಮಣೆಯೋ ಅಥವ ದೈವಿಕ ಅನುಭವವೋ – ಒಂದು ಕ್ಷಣ ಗೊತ್ತಾಗಲಿಲ್ಲ.

ಕನಿಷ್ಠ ವಸ್ತ್ರ ಧರಿಸಿ, ತೊಳೆದಿಟ್ಟಂತಹ ಮೆಟ್ಟಿಲುಗಳನ್ನಿಳಿದು ಗಂಗೆಯೊಳಗೆ ಕಾಲಿಟ್ಟಾಗ ಮೈಯನ್ನೆಲ್ಲ ಗಂಗೆಯ ಪ್ರಭಾವ ಆವರಿಸಿದಂತಾಯಿತು. ಮುಳುಗಿ, ಮುಳುಗಿ, ಮುಳುಗಿ ಎದ್ದ ನನಗೆ ಏನೋ ಸಾಧಿಸಿದ ಸಂತೃಪ್ತಿ. ಕೊಟ್ಟ ದಕ್ಷಿಣೆಗೆ ತಕ್ಕಂತೆ ನನ್ನ ಕೈಯಲ್ಲಿ ಗಂಗೆಗೆ ಪೂಜೆ ಮಾಡಿಸಿದ ಪೂಜಾರಿ ಹೆಚ್ಚು ದುಡ್ಡು ಕೇಳಿ ನಾನು ಸಿಟ್ಟು ಮಾಡಿಕೊಂಡಾಗ ‘ನಾರಾಜ್ ಮತ್ತ್ ಹೋನಾ ಭಾಯಿಸಾಭ್’ (ಸಿಟ್ಟು ಮಾಡಿಕೊಳ್ಳಬೇಡಿ ಅಣ್ಣ) ಎಂದು ಮುಗುಳ್ನಗೆಯೊಂದಿಗೆ ಹೇಳಿದ್ದು ಮರೆಯಲಸಾಧ್ಯ. 

ಒಂದು ನದಿಯ ಬಗ್ಗೆ ಇಷ್ಟೊಂದು ಭಕ್ತಿ ಭಾವನೆ ಇರಿಸಿಕೊಳ್ಳಲು ಸಾಧ್ಯವೇ ಎಂದು ಚಿಂತಿಸುತ್ತಾ, ವಿಶ್ಲೇಶಿಸುತ್ತಾ ಜೊತೆಗೆ ಫೆÇಟೊ ಕ್ಲಿಕ್ಕಿಸುತ್ತಾ, ನಡೆಯುತ್ತಾ ನಡೆಯುತ್ತಾ ನಾಗಾ ಸಾಧುಗಳನ್ನು ಅರಸುತ್ತಾ, ಕಂಡ ಕಂಡವರಲ್ಲಿ ಕೇಳಿದಾಗ ಕೊನೆಗೆ ಸಿಕ್ಕ ವಿಳಾಸ ನನ್ನನ್ನು ವಾರಣಾಸಿಯ ಜೂನಾ ಅಖಾಡದ ವಾಸ್ತವ್ಯದತ್ತ ಕರದೊಯ್ಯಿತು. ಇಂಥಹ ಅನೇಕ ಅಖಾಡಗಳ ನಾಗಾ ಸಾಧುಗಳಿಗೆ ಬೇರೆ ಬೇರೆ ಕಡೆ ವಾಸ್ತವ್ಯ ಕಲ್ಪಿಸಿಕೊಟ್ಟಿದ್ದರೂ, ಜೂನಾ ಅಖಾಡದ ಬಗ್ಗೆ ಕೇಳಿದ್ದ ನಾನು ಅದೇ ಅಖಾಡ ತಲುಪಿದ್ದು ಕಾಕತಾಳೀಯವೆನಿಸಿತು.

ಬಂದೂಕುಧಾರಿ ಕಮಾಂಡೊಗಳಿಂದ ರಕ್ಷಿಸಲ್ಪಟ್ಟ ನಾಗಾಸಾಧುಗಳ ವಾಸ್ತವ್ಯಪ್ರದೇಶಕ್ಕೆ ಕಾಲಿಟ್ಟು ಮೆಲ್ಲಮೆಲ್ಲನೆ ಭಯಮಿಶ್ರಿತ ಕುತೂಹಲದಿಂದ ಹೆಜ್ಜೆ ಹಾಕತೊಡಗಿದಾಗ ಎರಡೂ ಬದಿಯಲ್ಲಿ ಪ್ರತಿ ಡೇರೆಯೊಳಗೆ, ಹೋಮ ಕುಂಡದಂತಿರುವ ಧುನಿಯಲ್ಲಿ ಧಗಧಗಿಸುತ್ತಿರುವ ಬೆಂಕಿಯ ಮುಂದೆ ಕುಳಿತು ಪ್ರಾರ್ಥನೆಯಲ್ಲಿ ತೊಡಗಿದ್ದ ಕಾವಿಧಾರಿಗಳನ್ನು ಕಂಡು, ಇಷ್ಟೇನಾ ನಾಗಾಸಾಧುಗಳು ಎಂದೆನಿಸುವಷ್ಟರಲ್ಲಿ, ಕೆಲವೇ ಹೆಜ್ಜೆ ಮುಂದೆ ಹೋಮಕುಂಡದಿಂದ ಬರುತ್ತಿರುವ ಹೊಗೆಯಿಂದ ಆವರಿಸಲ್ಪಟ್ಟ ಭಸ್ಮದಿಂದ ಲೇಪಿತವಾದ ಜಟಾಧಾರಿ ಮಾನವರೂಪ, ಸಂಪೂರ್ಣ ನಗ್ನವಾಗಿದೆ ಎಂಬ ಅರಿವಾಗಿ, ಓಹ್ ನಾಗಾಸಾಧೂ ಎನ್ನುತ್ತಾ ಅವರ ಬಗ್ಗೆ ಸಾಕಷ್ಟು ಕೇಳಿದ್ದ ನನ್ನ ಎದೆ ಒಂದು ಕ್ಷಣ ಝಲ್ ಎನ್ನಿತು. ನಿಂತಲ್ಲೆ ನಿಂತು ಆ ಬಿಂಬವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ, ಆ ವ್ಯಕ್ತಿಯನ್ನೇ ನೋಡುತ್ತಿದ್ದಾಗ, ‘ಕಹಾ ಸೆ ಆಯೆ ಹೋ’ ಎಂದು ಆ ಸಾಧು ನನ್ನನ್ನು ಉದ್ದೇಶಿಸಿ ನಮಸ್ಕರಿಸಿ ಕೇಳಿದ್ದು ಅರಿವಾಗಿ, ‘ಬೆಂಗ್ಳೊರ್ ಸೆ’ ಎಂದು ಹೇಳಿ ಮುಂದಕ್ಕೆ ನಡೆದೆ.

ಬಹುತೇಕ ಡೇರೆಗಳೊಳಗೆ ಇಣುಕಿದಾಗಲೂ ಇದೇ ಅನುಭವ. ಒಂದು ಡೇರೆಯಲ್ಲಿ ಮಾತ್ರ ಸಂಪೂರ್ಣ ನಗ್ನನಂತಿಲ್ಲದಿದ್ದರೂ ಭಸ್ಮಲೇಪಿತನಾಗಿದ್ದ ಒಬ್ಬ ಯುವ ಸಾಧು ವಿದ್ಯಾವಂತನಾಗಿ ಕಂಡುಬಂದಿದ್ದರಿಂದ ಸ್ವಲ್ಪ ಆಶ್ಚರ್ಯದಿಂದಲೇ ನೋಡುತ್ತ ನಿಂತೆ. ಮುಗುಳ್ನಗೆಯಿಂದಲೇ ನಾನು ಎಲ್ಲಿಂದ ಬಂದೆ, ಏನು ನೋಡಲು ಬಂದೆ ಎಂದು ತಿಳಿದುಕೊಂಡ ಮೇಲೆ ನನ್ನನ್ನು ಡೇರೆಯೊಳಗೆ ಆಹ್ವಾನಿಸಿ, ಕೂರಿಸಿ, ಶಿಷ್ಯರಿಂದ ಚಹಾ ಮಾಡಿಸಿ, ಕುಡಿಸಿ, ನನ್ನೊಂದಿಗೆ ಉಭಯಕುಶಲೋಪರಿಗಿಳಿದ ಆ ಸಾಧುವಿನ ಹೆಸರು ನಾಗಾ ಬಾಬಾ ತೂಫಾನ್ ಗಿರಿ. ಸುಮಾರು 25 ವರ್ಷದ ಯುವಕ. ತನ್ನ ಗುರುವಿನ ಅಪ್ಪಣೆಯೊಂದಿಗೆ ವಾರಣಾಸಿಯಿಂದ ಬಂದು ಹರಿದ್ವಾರದಲ್ಲಿ ಅವಶ್ಯ ಕ್ರಿಯೆಗಳನ್ನು ನಡೆಸುತ್ತಿದ್ದ. ಬಹಳಷ್ಟು ಸಾಮಾನ್ಯಜ್ಞಾನ ಪಡೆದುಕೊಂಡಿದ್ದ ಈ ಸಾಧು ಬೆಂಗಳೂರಿನ ಬಗ್ಗೆ ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದಾಗ ನನಗೆ ಕೊನೆಯವರೆಗೂ ಆತನ ಉದ್ದೇಶ ತಿಳಿಯಲೇ ಇಲ್ಲ. ತನ್ನ ಶಿಷ್ಯರೊಡಗೂಡಿ ಅತ್ಯಂತ ಆದರ ಪೂರ್ವಕವಾಗಿ ನನ್ನನ್ನು ನಡೆಸಿಕೊಂಡ ಈ ಸಾಧು, ನಾನು ಹೊರಡಲು ಅಣಿಯಾದಾಗ ನನ್ನನ್ನು ಡೇರೆಯಲ್ಲಿ ಚಪಾತಿಯ ‘ಡಿನ್ನರ್’ಗೂ ಆಹ್ವಾನಿಸಲು ಮರೆಯಲಿಲ್ಲ.

ನಾನು ಕಂಡ ಎಲ್ಲ ನಾಗಾಸಾಧುಗಳು, ಅವರತ್ತ ನಾನು ನೋಡಿದರೂ, ನಮಸ್ಕರಿಸಿದರೂ, ಮುಗುಳ್ನಗೆಯಿಂದಲೇ ನನ್ನನ್ನು ಸ್ವಾಗತಿಸಿದ್ದನ್ನು ನೋಡಿ, ಮುಗುಳ್ನಗೆಯೂ ಅವರ ಸಂಪ್ರದಾಯವೇ ಅಥವ ಲಕ್ಷಣವೇ ಎಂದು ಯೋಚಿಸತೊಡಗಿದೆ. ಹೊಳೆಯುವ ಕಣ್ಣುಗಳ, ನೀಳ ಜಟೆಯ ಇಪ್ಪತ್ತರ ಆಸುಪಾಸಿನ ಯುವಕ ಸಾಧುಗಳು, ರುದ್ರಾಕ್ಷಿಗಳನ್ನು ಜಟೆಯೊಂದಿಗೆ ಹೆಣೆದು ತಲೆಯ ಮೇಲೆ ಒಂದೆರಡು ಅಡಿಗಳೆತ್ತರದ ಗೋಪುರವನ್ನು ಕಟ್ಟಿಕೊಂಡ ಸಾಧು, ಕಾಲುಗಳಿಗೆ ಕೈಗಡಿಯಾರಗಳನ್ನು ಕಟ್ಟಿಕೊಂಡ ಸಾಧು, ಹೀಗೆ ಒಬ್ಬೊಬ್ಬ ಮತ್ತು ಒಂದೊಂದು ರೀತಿಯಲ್ಲಿ ವಿಚಿತ್ರವಾಗಿದ್ದ ಸಾಧುಗಳನ್ನು ನೋಡಿಕೊಂಡು ಕೊನೆಗೂ ನಾನಿದ್ದ ಹೊಟೆಲ್ ತಲುಪಿದಾಗ ದೇಹಕ್ಕೆ ದೀರ್ಘ ವಿಶ್ರಾಂತಿ ಕೊಡುವಾಗ ಮನಸ್ಸು ಹೂವಿನಷ್ಟು ಹಗುರವಾದಂತಹ ಮಧುರ ಭಾವನೆ. ಇದಕ್ಕೆ ಏನೋ ತೀರ್ಥ ಯಾತ್ರೆ, ತೀರ್ಥ ಯಾತ್ರೆ ಎಂದು ನಮ್ಮವರು ಹೆಣಗಾಡುವುದು.

ಮಾರನೆಯ ದಿನ ಯಾವುದೇ ಉದ್ದೇಶವಿಲ್ಲದೆ ನನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಕೇಸರಿ ಬಣ್ಣದ ಟಿ ಶರ್ಟ್‍ನ್ನು ನಾನು ವಿಧಿಯಿಲ್ಲದೆ ಧರಿಸಿ ಹರಿದ್ವಾರದ ಬೀದಿ ಬೀದಿಗಳಲ್ಲಿ ಓಡಾಡಲು ಆರಂಭಿಸಿದಾಗ ನನ್ನೆದುರು ಬಂದ ಜನ ಹಸನ್ಮುಖದೊಂದಿಗೆ ನನ್ನ ಕಡೆ ದೃಷ್ಟಿ ಹೊರಳಿಸಿ, ಕೈ ಜೋಡಿಸಿ ‘ನಮಸ್ಕಾರ್ ಬಾಬಾ’ ಎಂದು ಭಕ್ತಿಯಿಂದ ಹೇಳಿದಾಗ ಆರಂಭದಲ್ಲಿ ಒಂದೆರಡು ಬಾರಿ ನನ್ನೊಂದಿಗೆ ಯಾರಿದ್ದಾರೆಂದು ಅಕ್ಕ ಪಕ್ಕ ನೋಡಿಕೊಂಡರೂ, ಕೊನೆಗೆ ವಾಸ್ತವತೆಯ ಅರಿವಾಗಿ, ಪ್ರತಿಯಾಗಿ ನಮಸ್ಕರಿಸುತ್ತಾ ನನ್ನ ಕೇಸರಿ ಟಿ ಶರ್ಟ್‍ಗೆ ಸಂದ ಗೌರವವನ್ನು ಸ್ವೀಕರಿಸುತ್ತ ಮುನ್ನಡೆದೆ. ಭಾರತ ಭೂಮಿಯಲ್ಲಿ ಕೇಸರಿ, ಖಾದಿಗೆ ಇರುವ ವಿಶಿಷ್ಟ ಸ್ಥಾನ ಮತ್ತು ಗೌರವ ಕಂಡು, ಅದರ ದುರುಪಯೋಗದ ಬಗ್ಗೆಯೂ ಒಂದು ಕ್ಷಣ ಆತಂಕ ಮೂಡಿತು.

ಮಂದಿರದಂತೆ ಕಂಡರೂ ವಸ್ತುಸಂಗ್ರಹಾಲಯದಂತಿರುವ ಭಾರತ್ ಮಾತಾ ಮಂದಿರ, ಎಲ್ಲೆಲ್ಲೂ ಕಾಣಸಿಗುವ ನೂರಾರು ಮಠಗಳು, ದೇವಸ್ಥಾನಗಳು, ಹೆಜ್ಜೆ ಹೆಜ್ಜೆಗೂ ಸಿಗುವ ಕಾವಿಧಾರಿಗಳು - ಇದು ಎಂತಹದೊಂದು ಊರು? ಎಂಬ ಪ್ರಶ್ನೆಯನ್ನು ನನ್ನಲ್ಲಿ ಮೂಡಿಸಿತು. ಇದನ್ನು ಜನ ಪಾವನ ಭೂಮಿ, ಪುಣ್ಯ ಭೂಮಿ ಎಂದು ಕರೆಯುತ್ತಾರೆ.

ಒಂದು ಪ್ರಖ್ಯಾತ ಟಿವಿಚಾನೆಲ್‍ನ ಸ್ಥಳೀಯ ಕ್ಯಾಮರಮನ್ ಅಂತೂ ಹರಿದ್ವಾರದಲ್ಲಿ ಹೆಚ್ಚು ಬ್ರಾಹ್ಮಣರಿರುವುದರಿಂದ ಇದು ಧರ್ಮ ಭೂಮಿ ಎಂದು ಹೇಳಿದಾಗ, ‘ನೀವೂ ಬ್ರಾಹ್ಮಣರೇ?’ ಎಂದು ಕೇಳಿದೆ. ‘ಇಲ್ಲ, ನಾನು ಬಡಗಿ ಜಾತಿಗೆ ಸೇರಿದವನು, ಆದರೆ ಬ್ರಾಹ್ಮಣರೇ ಇಲ್ಲಿನ ವಿಶೇಷ’ ಎಂದು ಹರಿದ್ವಾರದ ಜಾತಿ ವ್ಯವಸ್ಥೆಯ ಪರಿಚಯ ಮಾಡಿಕೊಟ್ಟಾಗ ನಾನು ಮಾತು ಮುಂದುವರೆಸದೆ ಸುಮ್ಮನಾದೆ.

ಸಂಜೆಯಾಗುತ್ತಿದ್ದಂತೆ ಪುನಃ ಗಂಗೆಯನ್ನು ಮತ್ತೆ ನೋಡುವ ತವಕದೊಂದಿಗೆ ನಾಗಾ ಸಾಧುಗಳ ನೆನಪೂ ಬಂದಾಗ ಜುನಾ ಅಖಾಡದ ಕಡೆಗೆ ಹೆಜ್ಜೆ ಹಾಕತೊಡಗಿದೆ. ಸುಮಾರು ಐದು ಕಿಲೊಮೀಟರ್ ನಡೆದು ಡೇರೆಗಳನ್ನು ತಲುಪುತ್ತಿದ್ದಂತೆ ಹಿಂದಿನ ರಾತ್ರಿ ಪಡೆದುಕೊಂಡಿದ್ದ ನಂಬರಿಗೆ ಫೋನಾಯಿಸಿ ಬಾಬಾ ತೂಫಾನ್‍ಗಿರಿಗೆ ನನ್ನ ಮರು ಆಗಮನದ ಸುದ್ದಿ ತಿಳಿಸಿದೆ. ತನ್ನ ಶಿಷ್ಯರೊಂದಿಗೆ ನನ್ನ ಬರುವಿಕೆಯನ್ನು ಕಾದು ಕುಳಿತಿದ್ದ ಸಾಧು ನನ್ನನ್ನು ಕಂಡೊಡನೆಯೇ, ‘ಬನ್ನಿ ಕುಳಿತುಕೊಳ್ಳಿ, ಏನನ್ನು ತಿಳಿದುಕೊಳ್ಳಬೇಕೋ ತಿಳಿದುಕೊಳ್ಳಿ’ ಎಂದು ನೇರವಾಗಿ ವಿಷಯಕ್ಕೆ ಬಂದಾಗ ನಾನು ಅಳಕುತ್ತಾ ತೊದಲುತ್ತಾ ಒಂದೊಂದೇ ಪ್ರಶ್ನೆಗಳನ್ನು ಕೇಳಿದೆ. ಪ್ರತಿಯೊಂದಕ್ಕೂ ವಿವರವಾಗಿ ನಗುತ್ತಲೇ ಉತ್ತರ ನೀಡಿದ ಬಾಬಾ ತೂಫಾನ್ ಗಿರಿ ‘ನಾನು ಸ್ವಯಂಪ್ರೇರಿತನಾಗಿ ಸಾಧುವಾದೆ. ಇದು ಯೋಗವಿಲ್ಲದವರಿಗೆ ಅಲಭ್ಯ. ನಾನು ಸಾಧಿಸಿದ ಅತ್ಯಂತ ದೊಡ್ಡ ಸಿದ್ಧಿ ನನ್ನ ಗುರುವಿನ ಕೃಪೆಗೆ ಪಾತ್ರನಾಗಿರುವುದು. ನನಗೆ ಬೇಕಾದುದೆಲ್ಲವನ್ನೂ ನನ್ನ ದೇವರಾದ ಭೋಲೇನಾಥ್ ನೀಡುತ್ತಾನೆ. ನನಗಿನ್ನೇನೂ ಬೇಕಿಲ್ಲ. ಇದರಿಂದ ಏನು ಸಾಧಿಸಿರುವೆ ಎಂದು ನೀವು ಕೇಳಿದರೆ, ಇದಕ್ಕಿಂತ ಬೇರೇನು ಸಾಧಿಸಬೇಕು ಎಂದು ನಾನು ಕೇಳುತ್ತೇನೆ. ನನಗೆ ಎಲ್ಲವೂ ಸಿಕ್ಕಿದೆ. ನಾನು ಪರಮಾನಂದವನ್ನು ಅನುಭವಿಸಿದ್ದೇನೆ. ನನಗೆ ದೀಕ್ಷೆ ಸಿಗುವ ಮೊದಲು ನನ್ನ ತಂದೆ ತಾಯಿಗಳಿಗೆ, ಎಲ್ಲಾ ಬಂಧುಗಳಿಗೆ ಮತ್ತು ಸ್ವಯಂ ನನಗೂ ಪಿಂಡವನ್ನು ನೀಡಿ ಆಗಿದೆ. ನನಗೆ ಯಾವ ಲೌಕಿಕ ಸಂಬಂಧಗಳೂ ಇಲ್ಲ. ನನಗೀಗಿರುವ ಸಂಬಂಧಗಳು ನನ್ನ ಗುರುವಿನೊಂದಿಗೂ ಮತ್ತು ನನ್ನ ಭಗವಂತನೊಂದಿಗೆ.

ನಾನು ದೀಕ್ಷೆಗೊಳಗಾದಾಗ ನನ್ನ ಕೈಯಲ್ಲಿ ಎಲ್ಲ ಕ್ರಿಯೆಗಳನ್ನು ಮಾಡಿಸಿ, ನನ್ನನ್ನು ಧರ್ಮಧ್ವಜದ ಕೆಳಗೆ ನಿಲ್ಲಿಸಿ ವಿವಸ್ತ್ರನನ್ನಾಗಿಸಿ ನನ್ನ ಲಿಂಗವನ್ನು ಹಿಡಿದು ಜೋರಾಗಿ ಒಮ್ಮೆಲೆ ಎಳೆದಾಗ ನನ್ನ ಲಿಂಗ ಲೈಂಗಿಕ ಕ್ರಿಯೆಗೆ ನಿರುಪಯುಕ್ತವಾಗಿ ನನ್ನ ದೇಹ ಲೌಕಿಕ ಆಸೆಗಳನ್ನು ಕಳೆದುಕೊಂಡು ವಸ್ತ್ರಮೋಹವನ್ನೂ ಕಳೆದುಕೊಂಡು ಧರ್ಮಕಾರ್ಯಕ್ಕೆ ಸಮರ್ಪಿಸಲ್ಪಟ್ಟಿತು. ನನ್ನ ದೇಹದಲ್ಲೀಗ ಯಾವುದೇ ಭಾವನೆಗಳಿಲ್ಲ. ನಾನೀಗ ಒಬ್ಬ ನಂಗಾ (ಬೆತ್ತಲೆ) ಬಾಬಾ’ ಎಂದು ಒಂದು ಕ್ಷಣವೂ ಕಣ್ಣಲ್ಲಿ ತೇಜಸ್ಸು ಕಳೆದುಕೊಳ್ಳದೆ ಅತ್ಯಂತ ಅತ್ಮೀಯವಾಗಿ ತಿಳಿಸಿದಾಗ ನನ್ನಲ್ಲಿದ್ದ ಅಸ್ತಿತ್ವ ಪ್ರಜ್ಞೆಯೇ ಗೊಂದಲಕ್ಕೀಡಾಯಿತು.

ಅಲ್ಲಿ ಇದ್ದಷ್ಟೂ ಹೊತ್ತು ಮತ್ತಷ್ಟು ಹೊತ್ತು ಕಳೆಯುವ ಅನಿಸಿದರೂ ಯಾವುದೋ ಅತಿಭೌತಿಕ ಸಂಬಂಧದಿಂದ ಬಿಡಿಸಿಕೊಂಡು ಬರುವಂತೆ ಅಲ್ಲಿಂದ ಹೊರಟ ನಾನು ನಾನಿದ್ದ ಹೋಟೆಲ್‍ನ ಕಡೆ ಹೆಜ್ಜೆ ಬೆಳೆಸಿದೆ. ಮಧ್ಯರಾತ್ರಿಯ ದೆಹಲಿ ರೈಲಿನ ಪ್ರಯಾಣಕ್ಕಾಗಿ ಹರಿದ್ವಾರದ ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ಅನೇಕಾನೇಕ ಕಾವಿಧಾರಿಗಳು, ಅವರ ಮಧ್ಯೆ ವಿದೇಶಿಯರು ಮತ್ತು ಅವರ ನಡುವೆ ನನ್ನಂತಹ ಅಸಂಖ್ಯಾತ ಸಾಧಾರಣ ಮಾನವರ ಮುಖದಲ್ಲಿ ವಿಚಿತ್ರವೆಂದರೂ ಸತ್ಯವೆಂಬಂತೆ ಕಂಡುಬಂದಂತ ಏಕೈಕ ಮುಖಮುದ್ರೆ-ನಿರ್ಲಿಪ್ತತೆ.                                                                                                                                                                                     - ದೀಪಕ್ ತಿಮ್ಮಯ

 


ಸಂಬಂಧಿತ ಟ್ಯಾಗ್ಗಳು

Naga sadhus uttarakhand ಹರಿದ್ವಾರ ಕುಂಭ ಮೇಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ