‘ದೇಶಪಾಂಡೆಯವರಿಗೆ ಕಾಮನ್ ಸೆನ್ಸೇ ಇಲ್ಲ’

Kannada News

11-11-2017

ಬೆಂಗಳೂರು: ದೇಶದಲ್ಲಿ ಕೈಗಾರಿಕಾ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಫಸ್ಟ್, ಅನುಷ್ಟಾನದ ವಿಷಯದಲ್ಲಿ ಲಾಸ್ಟ್ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಕೈಗಾರಿಕಾ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ರಾಜ್ಯ ಎಂದಿರುವ ಸಚಿವ ಆರ್.ವಿ.ದೇಶಪಾಂಡೆಯವರಿಗೆ ಕಾಮನ್ ಸೆನ್ಸೇ ಇಲ್ಲ. ಬಂಡವಾಳ ಆಕರ್ಷಿಸುವ ವಿಷಯದಲ್ಲಿ ಕರ್ನಾಟಕ ಯಾವತ್ತೂ ಹಿಂದಿರಲಿಲ್ಲ. ಆದರೆ ಇವರು ಅಧಿಕಾರಕ್ಕೆ ಬಂದ ಮೇಲೆ ಬರುವ ಬಂಡವಾಳ ಅನುಷ್ಟಾನದ ವಿಷಯದಲ್ಲಿ ರಾಜ್ಯ ಕೊನೆಯಲ್ಲಿದೆ ಎಂದರು.

ಪ್ರಸಕ್ತ ವರ್ಷ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ 1,47,625 ಕೋಟಿ ರೂ. ಕೈಗಾರಿಕಾ ಬಂಡವಾಳದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಆದರೆ ಇದರಲ್ಲಿ ಅನುಮೋದನೆಗೊಂಡ ಬಂಡವಾಳದ ಪ್ರಮಾಣ ಕೇವಲ 8,934 ಕೋಟಿ ರೂ. ಮಾತ್ರ. ಆದರೆ ಒಂದೇ ಒಂದು ಯೋಜನೆಯೂ ಜಾರಿಗೊಂಡಿಲ್ಲ ಎಂದು ಆರೋಪಿಸಿದರು.

ಇದೇ ರೀತಿ ಕಳೆದ ವರ್ಷ 2,45,584 ಕೋಟಿ ರೂ ಬಂಡವಾಳ ವಿನಿಯೋಗಿಸುವ ಪ್ರಸ್ತಾವನೆಗಳು ಬಂದಿವೆ. ಆದರೆ ವಾಸ್ತವಿಕವಾಗಿ ಹೂಡಿಕೆಯಾದ ಬಂಡವಾಳದ ಪ್ರಮಾಣ 11,158,83 ಕೋಟಿ ಮಾತ್ರ. 1100 ಕ್ಕೂ ಹೆಚ್ಚು ಪ್ರಸ್ತಾಪಿತ ಯೋಜನೆಗಳ ಪೈಕಿ ಜಾರಿಯಾಗಿದ್ದು ಕೇವಲ 67 ಮಾತ್ರ ಎಂದು ಟೀಕಿಸಿದರು. ಇನ್ನು ಉದ್ಯೋಗ ಸೃಷ್ಟಿಯ ವಿಷಯ ಬಂದಾಗ 6.52 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಇವರು ಹೇಳಿದ್ದರು. ಆದರೆ ವಾಸ್ತವಿಕವಾಗಿ ಸೃಷ್ಟಿಯಾಗಿದ್ದು 1.10 ಲಕ್ಷ ಉದ್ಯೋಗಗಳು ಮಾತ್ರ ಎಂದು ಅವರು ವಿಷಾದಿಸಿದರು.

ದೇಶಪಾಂಡೆಯವರಂತಹ ಸೀನಿಯರ್ ಮಂತ್ರಿಗಳು ಈ ರೀತಿ ಸುಳ್ಳು ಹೇಳಬಾರದು. ಬಂಡವಾಳ ಆಕರ್ಷಣೆಗೂ, ಅನುಷ್ಟಾನಕ್ಕೂ ವ್ಯತ್ಯಾಸವಿದೆ. ಈ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಮುಂದಿರುವ ರಾಜ್ಯಗಳೆಂದರೆ ಗುಜರಾತ್ ಹಾಗೂ ಮಹಾರಾಷ್ಟ್ರ ಎಂದು ಅವರು ಹೇಳಿದರು. ಕರ್ನಾಟಕ ಯಾವತ್ತೂ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳ. ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಎಲ್ಲರಿಗೂ ಆಸಕ್ತಿಯಿದೆ. ಇಷ್ಟಾದರೂ ಈ ಸರ್ಕಾರದ ಭ್ರಷ್ಟಾಚಾರ, ಕೈಗಾರಿಕೆಗಳಿಗೆ ಕೊಡುವ ಕಿರುಕುಳ ನೋಡಿ ಎಲ್ಲರೂ ಹಿಂದೆ ಸರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮಧ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ತಕ್ಷಣ ಕರ್ನಾಟಕದ ಉಸ್ತುವಾರಿಯಿಂದ ಕಿತ್ತು ಹಾಕುವಂತೆ ಅವರು ಸಿಎಂ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅನ್ನು ಆಗ್ರಹಿಸಿದರು. ಕೇರಳದಲ್ಲಿ ನಡೆದ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶಿವರಂಜನ್ ಅವರ ನೇತೃತ್ವದಲ್ಲಿ ನಡೆದ ನ್ಯಾಯಾಂಗ ತನಿಖೆಯ ವಿವರವನ್ನು ಅಲ್ಲಿನ ಸರ್ಕಾರ ಬಹಿರಂಗಪಡಿಸಿದೆ ಎಂದು ಹೇಳಿದರು.

ಅದರಲ್ಲಿ ಸೋಲಾರ್ ಹಗರಣ ಹಾಗೂ ಸೋಲಾರ್ ದಂಧೆಯ ಮಧ್ಯವರ್ತಿ ನಟಿಯ ಜತೆಗಿನ ಲೈಂಗಿಕ ಹಗರಣದ ವಿವರಗಳೂ ಹೊರಬಂದಿವೆ. ಹೀಗಾಗಿ ಇಂತವರು ಒಂದು ರಾಷ್ಟ್ರೀಯ ಪಕ್ಷವನ್ನು ರಾಜ್ಯ ಮಟ್ಟದಲ್ಲಿ ಮುನ್ನಡೆಸುವ ಜವಾಬ್ದಾರಿ ಪಡೆಯುವುದು ಸರಿಯಲ್ಲ, ಎಂದ ಅವರು. ನಟಿ ಸರಿತಾ ಅವರ ವಿರುದ್ದ ಮೂವತ್ತೆಂಟು ಪ್ರಕರಣಗಳಿವೆ. ಆಕೆ ಮಾಡಿದ ಆರೋಪ ಸುಳ್ಳು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿ,  ಪ್ರಕರಣದ ಕುರಿತು ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ, ಹೀಗಾಗಿ ತನಿಖೆ ಪೂರ್ಣವಾಗುವವರೆಗೆ ಅವರು ಆ ಜಾಗದಲ್ಲಿರಬಾರದು ಎಂದರು.

ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧ ಪಕ್ಷ ವ್ಯಾಪಕ ಹೋರಾಟ ನಡೆಸಲಿದೆ ಎಂದ ಅವರು,ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಭಾಗವಹಿಸಿದ ಒಬ್ಬ ವ್ಯಕ್ತಿಯನ್ನು ಯಾವ ನೈತಿಕತೆಯ ಆಧಾರದ ಮೇಲೆ ಮುಂದಿಟ್ಟುಕೊಂಡು ಕಾಂಗ್ರೆಸ್ ಹೋಗುತ್ತದೆ ಎಂದು ಪ್ರಶ್ನಿಸಿದ್ದು, ಇದೇ ರೀತಿ ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿಗಳಲ್ಲಿ ಒಬ್ಬರಾದ ಎ.ಐ.ಸಿ.ಸಿ ಕಾರ್ಯದರ್ಶಿ ವಿಷ್ಣುಪಂಥ್ ಅವರ ವಿರುದ್ಧವೂ ಆರೋಪ ಕೇಳಿ ಬಂದಿದೆ, ಅವರನ್ನೂ ಪಕ್ಷ ಕರ್ನಾಟಕದ ಉಸ್ತುವಾರಿಯಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿಯಲ್ಲಿ ಗೊಂದಲವಿದೆ ಎಂಬುದು ಸುಳ್ಳು. ಅದೇ ರೀತಿ ಯಡಿಯೂರಪ್ಪ ಅವರು ಹೋದೆಡೆಯಲ್ಲೆಲ್ಲ ಪಕ್ಷದ ನಿಯಮವನ್ನು ಮೀರಿ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿದ್ದಾರೆ ಎಂಬುದು ಸುಳ್ಳು ಎಂದು, ಇದೇ ಸಂದರ್ಭದಲ್ಲಿ ಅವರು ಹೇಳಿದರು. ಬೆಂಗಳೂರಿನಲ್ಲಿ ಪರಿವರ್ತನಾ ರ್ಯಾಲಿ ಆರಂಭವಾದಾಗ ಸ್ವಲ್ಪ ಗೊಂದಲವಾಗಿದ್ದು ನಿಜ. ಆದರೆ ಈಗ ಪರಿವರ್ತನಾ ರ್ಯಾಲಿ ಹೋದೆಡೆಯಲ್ಲೆಲ್ಲ ಯಶಸ್ವಿಯಾಗುತ್ತಿದೆ. ಸಾವಿರಾರು ಜನರು ಸೇರುತ್ತಿದ್ದಾರೆ. ಹೀಗಾಗಿ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.ಎಲ್ಲೂ ಒಡಕಿಲ್ಲ, ಅಂತಹ ಆರೋಪಗಳಲ್ಲಿ ಹುರುಳೂ ಇಲ್ಲ ಎಂದು ಅವರು ನುಡಿದರು.


ಸಂಬಂಧಿತ ಟ್ಯಾಗ್ಗಳು

Jagadish Shettar Karnataka ಬಂಡವಾಳ ಅನುಷ್ಟಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ