ಸ್ಥಾಯಿ ಸಮಿತಿಗಳಿಗೆ: 132 ಮಂದಿ ಆಯ್ಕೆ

Kannada News

10-11-2017

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಸಂಬಂಧ ಇಂದು ನಡೆದ ಚುನಾವಣೆಯಲ್ಲಿ 132 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿಂದ ಚುನಾವಣೆಗೆ ಮತ್ತು 137 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 12 ಸ್ಥಾಯಿ ಸಮಿತಿಗಳಿಗೆ 132 ಸದಸ್ಯರು ಮಾತ್ರ ಆಯ್ಕೆಯಾಗಬೇಕು. ಆದರೆ 5 ನಾಮಪತ್ರಗಳು ಹೆಚ್ಚುವರಿಯಾಗಿ ಸಲ್ಲಿಕೆಯಾಗಿದ್ದರಿಂದ ಚುನಾವಣೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ 12 ಸ್ಥಾಯಿ ಸಮಿತಿಗಳಿಗೆ ಪ್ರಾದೇಶಿಕ ಆಯುಕ್ತೆ ಜಯಂತಿಯವರು ಬೆಳಿಗ್ಗೆ 11.30 ರಿಂದ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ನಗರ ಯೋಜನೆ ಸ್ಥಾಯಿ ಸಮಿತಿಯಲ್ಲಿ ಸದಸ್ಯರಾದ ಶಿಲ್ಪಾ ಅಭಿಲಾಷ್ ಮತ್ತು ಬಾಲಕೃಷ್ಣನ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಚುನಾವಣೆ ಆರಂಭವಾದ ವೇಳೆ ಈ ಇಬ್ಬರು ಸದಸ್ಯರು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದರಿಂದ ನಗರ ಯೋಜನೆ ಸ್ಥಾಯಿ ಸಮಿತಿಗೆ 11 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಲು ಹಾದಿಸುಗಮವಾಯಿತು.

ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗೆ ವೇಲು ನಾಯಕರ್ ಅವರು ತಮ್ಮ ನಾಮಪತ್ರವನ್ನು ಕ‌ಡೆಗಳಿಗೆಯಲ್ಲಿ ವಾಪಸ್ಸು ಪಡೆದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿಗೆ ಅನಂತಕುಮಾರ್‌ ರವರು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು. ಆದರೆ ರೀತಿ, 2 ನಾಮಪತ್ರಗಳನ್ನು ಸಲ್ಲಿಸಿದ್ದ ಸಿ.ಆರ್. ಲಕ್ಷ್ಮೀನಾರಾಯಣ ಅವರು ಒಂದು ನಾಮಪತ್ರವನ್ನು ವಾಪಸ್ಸು ಪಡೆದಿದ್ದರಿಂದ ಈ ಸಮಿತಿ ಎಲ್ಲಾ 11 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಅಪೀಲು ಸ್ಥಾಯಿ ಸಮಿತಿ, ವಾರ್ಡ್ ಮಟ್ಟದ ಸ್ಥಾಯಿ ಸಮಿತಿ, ಲೆಕ್ಕಪತ್ರದ ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿಗಳಿಗೆ 11 ಮಂದಿ ಸದಸ್ಯರಷ್ಟೇ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಪ್ರಕಟಿಸಿದರು.


ಸಂಬಂಧಿತ ಟ್ಯಾಗ್ಗಳು

bbmp Ellection ಸ್ಥಾಯಿ ಸಮಿತಿ ಅವಿರೋಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ