ಚುನಾವಣೆ ಬಹಿಷ್ಕಾರದ ಎಚ್ಚರಿಕೆ..?

Kannada News

10-11-2017

ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ತಕ್ಷಣವೇ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಅಹಿಂಸಾ(ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ)ದ ಸಾವಿರಾರು ಸರ್ಕಾರಿ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಚೇರಿಗಳಿಗೆ ಹಾಜರಾಗದ ಸಾವಿರಾರು ನೌಕರರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಸೇರಿ ಅಲ್ಲಿಂದ ಅರಮನೆ ಮೈದಾನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವನ್ನು ವಿಳಂಬ ಮಾಡದೇ ರಾಜ್ಯ ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿ ಮಾಡದೇ ಬಡ್ತಿ ಮೀಸಲಾತಿಯ"ತಿದ್ದುಪಡಿ ಕಾಯಿದೆ"ಯನ್ನು ಬೆಳಗಾವಿಯಲ್ಲಿ ಇದೇ 13ರಿಂದ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.

ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಬಡ್ತಿ ಮೀಸಲಾತಿಯ ‘ತಿದ್ದುಪಡಿ ಕಾಯಿದೆ’ ಮಂಡಿಸಿ ಸುಪ್ರೀಂ ಕೋರ್ಟ್ ಆದೇಶ ಜಾರಿ ಮಾಡದಿದ್ದರೆ, ಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದು ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಬಡ್ತಿ ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯದ ಹಿತದಷ್ಟಿಯಿಂದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಸಂವಿಧಾನ ಬದ್ಧವಾದ ಸಮಾನತೆ ಆಶಯಕ್ಕೆ ಇದು ಪೂರಕವಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಆದೇಶ ಜಾರಿಗೊಳಿಸದೆ ಇದ್ದರೆ 8 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಕುಟುಂಬಗಳಿಗೆ ಅನ್ಯಾಯ ವಾಗಲಿದೆ ಎಂದು ದೂರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ  ಮಾತನಾಡಿದ ಅಹಿಂಸಾ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಪ್ರಸ್ತುನ ಸಾಲಿನ ಫೆ.9ರಂದು ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ಬಡ್ತಿ ನೀಡಿದರೂ ತತ್ಪರಿಣಾಮದ ಜೇಷ್ಠತೆಯನ್ನು ನೀಡುವ ಕಾಯ್ದೆಯನ್ನು ರದ್ದುಪಡಿಸಿದೆ. 1978ರಿಂದ ಇದುವರೆಗೂ ಮುಂಬಡ್ತಿ ಕ್ರಮವನ್ನು ಕೈಗೊಳ್ಳಲು ಸರಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಸರಕಾರ ಈ ಆದೇಶವನ್ನು ಜಾರಿಗೊಳಿಸದೆ, ಆದೇಶದ ವಿರುದ್ಧ ವಾಗಿ ಸುಗ್ರಿವಾಜ್ಞೆ ತರಲು ಮುಂದಾಗಿರುವುದನ್ನು ಖಂಡಿಸಿದರು.

ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ಸಾಮಾನ್ಯ ವರ್ಗದವರಿಗೆ ಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿದೆ. ಮೀಸಲಾತಿ ವರ್ಗದವರಿಗೆ ಕೇವಲ ಮೂರು-ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಮೊದಲನೆ ಬಡ್ತಿ ದೊರಕಿದರೆ, ಅಹಿಂಸಾ ವರ್ಗದವರಿಗೆ 20 ರಿಂದ 25 ವರ್ಷಗಳ ಸೇವಾವಧಿ ಬೇಕಾಗಿದೆ. ಮೀಸಲಾತಿ ವರ್ಗದವರಿಗೆ ಬಡ್ತಿಯ ಎಲ್ಲ ಹುದ್ದೆಗಳಲ್ಲಿ ಶೇ.18ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಾರೆ. ಇದರಿಂದ 82 ವರ್ಗದವರಿಗೆ ಬಡ್ತಿ ಅವಕಾಶಗಳು ದೊರೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸತತ ಇಪ್ಪತ್ತೈದು ವರ್ಷಗಳಿಂದ ನ್ಯಾಯಾಂಗದೊಂದಿಗೆ ಹೋರಾಟ ಮಾಡಿದ ಪರಿಣಾಮ ಅಹಿಂಸಾ ವರ್ಗಗಳ ಹಿತಕ್ಕೆ ತೀರ್ಪು ಬಂದಿದೆ. ಆದರೆ, ಈ ಸರಕಾರ 18 ವರ್ಗದ ಸರ್ಕಾರವೇ? ರಾಜ್ಯದ ಇನ್ನು ಉಳಿದ ಶೋಷಿತ ಸಮುದಾಯ ಬಡ್ತಿ ಹುದ್ದೆಗೆ ಅರ್ಹರಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಾವಿರಾರು ನೌಕರರು ಪಾಲ್ಗೊಂಡಿದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು ವಿಧಾನಸೌಧದ ಸುತ್ತಮುತ್ತಲ ಕಚೇರಿಗಳು ಬಹುತೇಕ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

 


ಸಂಬಂಧಿತ ಟ್ಯಾಗ್ಗಳು

supreme court Reservation ಬಡ್ತಿ ಮೀಸಲಾತಿ ನೌಕರರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ