ಕರ್ನಾಟಕಕ್ಕೆ ಮತ್ತೆ ಮೊದಲ ಸ್ಥಾನ..

Kannada News

10-11-2017

ಬೆಂಗಳೂರು: ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಇಡೀ ದೇಶದಲ್ಲಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಪಡೆದಿದ್ದು, ಕಳೆದ ಸೆಪ್ಟೆಂಬರ್ ವರೆಗೆ ಕೈಗಾರಿಕೆಯಲ್ಲಿ ಶೇಕಡ 44.3ರಷ್ಟು ಹೂಡಿಕೆಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಒಟ್ಟು 1,47,625 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮೂಲಗಳ ಪ್ರಕಾರ ಕಳೆದ ಜನವರಿಯಿಂದ ಸೆಪ್ಟೆಂಬರ್ ವರೆಗೆ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಯಾಗಿದೆ ಎಂದಿದ್ದಾರೆ. ಇಡೀ ದೇಶದಲ್ಲಿ ಮಾದರಿ ರಾಜ್ಯ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಆಡಳಿತದ ರಾಜ್ಯಗಳಾದ ಗುಜರಾತ್‍ನಲ್ಲಿ 65,741 ಕೋಟಿ ರೂಪಾಯಿ, ಮಹಾರಾಷ್ಟ್ರದಲ್ಲಿ 25,018 ಕೋಟಿ, ಟಿಡಿಪಿ ಆಡಳಿತದ ಆಂಧ್ರಪ್ರದೇಶದಲ್ಲಿ 24,013 ಕೋಟಿ ಹೂಡಿಕೆಯಾಗಿದೆ ಎಂದು ಹೇಳಿದ್ದಾರೆ. ಕಳೆದ ಎರಡು ದಶಕಗಳ ನಂತರ ಕರ್ನಾಟಕದಲ್ಲಿ ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆಯಾಗಿದೆ ಎಂದು ತಿಳಿಸಿದರು.

ರಾಜ್ಯ  ಮೊದಲಿನಿಂದಲೂ ಬಂಡವಾಳ ಹೂಡಿಕೆಯಲ್ಲಿ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ನಮ್ಮ ಸರ್ಕಾರವು ಜಾರಿಗೆ ತಂದಿರುವ ನೂತನ ಕೈಗಾರಿಕಾ ನೀತಿ, ಮಾಹಿತಿ ತಂತ್ರಜ್ಞಾನ, ಜವಳಿ, ಎಲೆಕ್ಟ್ರಿಕ್ ವಾಹನಗಳು, ಸ್ಟಾರ್ಟ್‍ ಅಪ್ ಮುಂತಾದ ಅನೇಕ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಶೇಷ ನೀತಿಗಳು ಮತ್ತು ಏಕಗವಾಕ್ಷಿ ವ್ಯವಸ್ಥೆ, ಸಕಾಲ ಜಾರಿಗೊಳಿಸುವಿಕೆ, ಈಸ್ ಆಫ್ ಡೂಯಿಂಗ್ ಬುಸಿನೆಸ್ ಮುಂತಾದ ಅನೇಕ ಉಪಕ್ರಮಗಳ ಫಲಶೃತಿಯಾಗಿ ಕರ್ನಾಟಕವು ನಿರಂತರವಾಗಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಸಾಧ್ಯವಾಗಿದೆ ಎಂದು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ನೆಲ, ಪರಿಸರ, ಜನಸಂಖ್ಯೆ, ಉತ್ತಮ ಆಡಳಿತ ವ್ಯವಸ್ಥೆ ಮುಂತಾದ ಎಲ್ಲಾ ವಲಯಗಳಲ್ಲೂ ಕೈಗಾರಿಕೋದ್ಯಮ ಸ್ಥಾಪನೆಗೆ ಸೂಕ್ತ ತಾಣವಾಗಿದೆ. ಈ ಸುವರ್ಣಾವಕಾಶವನ್ನು ದೇಶ ವಿದೇಶಗಳ ಕೈಗಾರಿಕೋದ್ಯಮಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಕೋರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

R.V. Deshpande Investment ಹೂಡಿಕೆ ಮಾದರಿ ರಾಜ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ