ಮತ್ತೆ ನಕ್ಸಲರ ಮೇಲೆ ಎಸ್ಐಟಿ ಕಣ್ಣು..

Kannada News

10-11-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಜಾಲಾಡುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಇದೀಗ ಮತ್ತೆ ನಕ್ಸಲೀಯರ ಮೇಲೆ ಸಂಶಯ ಹೊಂದಿರುವುದು ವಿಶೇಷವಾಗಿದೆ.

ತಮ್ಮನ್ನು ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದ ಗೌರಿ ಲಂಕೇಶ್ ಬಗ್ಗೆ ನಕ್ಸಲ್ ನಾಯಕ ವಿಕ್ರಂ ಗೌಡ ತೀವ್ರ ಅಸಮಾಧಾನ ಹೊಂದಿದ್ದ. ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಎಸ್.ಐ.ಟಿ ಅಧಿಕಾರಿಗಳು ಇದೀಗ ತನಿಖೆಯನ್ನು ಮತ್ತೊಂದು ಆಯಾಮದತ್ತ ತಿರುಗಿಸಿದ್ದಾರೆ. 

ಗೌರಿ ಲಂಕೇಶ್ ಹತ್ಯೆಗೂ ಒಂದು ತಿಂಗಳ ಮುಂಚೆ ವಿಕ್ರಂ ಗೌಡನನ್ನು ಮುಖ್ಯವಾಹಿನಿಗೆ ಕರೆ ತರಲು ಪ್ರಯತ್ನ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮೂಲದ ವಿಕ್ರಂ ಗೌಡನನ್ನು ಪತ್ತೆ ಮಾಡಲು 12 ಸಿಬ್ಬಂದಿ ತಂಡ ರಚಿಸಲಾಗಿತ್ತು. ಪತ್ತೆ ಕಾರ್ಯ ತೀವ್ರಗೊಳಿಸಲು ಒಟ್ಟು 20 ಜನರ ತಂಡ ರಚನೆ ಮಾಡಲಾಗಿದೆ ಎಂದು ಎಸ್.ಐ.ಟಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಲತಾ ಹಾಗೂ ಪ್ರಭಾ ಎಂಬ ನಕ್ಸಲೀಯರನ್ನು ಮನವೊಲಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಲು ಸಮಯವೂ ನಿಗದಿಯಾಗಿತ್ತು. ಆದರೆ ಗೌರಿ ಕ್ರಮಕ್ಕೆ ವಿಕ್ರಂ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಇನ್ನು ಮುಂದೆ ಶರಣಾಗತಿ ವಿಚಾರಕ್ಕೆ ಬರಬಾರದು ಎಂದು ನಿಷ್ಠುರವಾಗಿಯೇ ಹೇಳಿದ್ದ ಎನ್ನಲಾಗಿದೆ.

ಈ ಬೆಳವಣಿಗೆ ನಡೆದ ನಾಲ್ಕೈದು ವಾರಗಳ ನಂತರ ಗೌರಿ ಲಂಕೇಶ್ ಹತ್ಯೆಯಾಗಿದೆ. ಹೀಗಾಗಿ ಈ ಬೆಳವಣಿಗೆಯ ಬಗ್ಗೆಯೂ ಎಸ್.ಐ.ಟಿ. ಪೊಲೀಸರು ವಿಶೇಷ ಗಮನ ಹರಿಸಿದ್ದು, ಈ ಜಾಲದ ಬಗ್ಗೆ ತನಿಖೆ ಮುಂದುವರೆಸಿದೆ. ವಿಕ್ರಂ ಗೌಡ ದೊರೆತರೆ ಇದರಲ್ಲಿ ನಕ್ಸಲರ ಪಾತ್ರ ಇದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಲಿದೆ. ಗೌರಿ ಹತ್ಯೆ ನಡೆದ ನಂತರ ವಿಕ್ರಂ ಗೌಡ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಆತನನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು. ಆದರೆ ಅಷ್ಟರಲ್ಲಾಗಲೇ ವಿಕ್ರಂ ಅಲ್ಲಿಂದ ಪರಾರಿಯಾಗಿದ್ದ. ಇಲ್ಲಿಯವರೆಗೂ ವಿಕ್ರಂಗೌಡ ಅವರ ಪತ್ತೆಯಾಗಿಲ್ಲ.


ಸಂಬಂಧಿತ ಟ್ಯಾಗ್ಗಳು

Investigation gauri lankesh ನಕ್ಸಲ್ ಎಸ್.ಐ.ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ