'ಡಿಸೆಂಬರ್ 15ರೊಳಗೆ ಪಡಿತರ ಚೀಟಿ'

Kannada News

10-11-2017

ಬೆಂಗಳೂರು: ರಾಜ್ಯಾದ್ಯಂತ  ಡಿಸೆಂಬರ್ 15 ರೊಳಗೆ ಪ್ರತಿಯೊಂದು ಕುಟುಂಬಗಳ ಕೈಗೂ ಪಡಿತರ ಚೀಟಿ ತಲುಪಲಿದೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಈಗಾಗಲೇ ಹದಿನಾರು ಲಕ್ಷದಷ್ಟು ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಈ ಎಲ್ಲರಿಗೂ ಡಿಸೆಂಬರ್ ಹದಿನೈದರ ಒಳಗೆ ಪಡಿತರ ಚೀಟಿ ಲಭ್ಯವಾಗಲಿದೆ ಎಂದರು.

ಹೀಗೆ ರಾಜ್ಯದಲ್ಲಿರುವ ಎಲ್ಲರಿಗೂ ಪಡಿತರ ಚೀಟಿ ತಲುಪಿದ ನಂತರವೂ ಅಲ್ಲಿಲ್ಲಿ ಬೇಡಿಕೆ ಕೇಳಿ ಬಂದರೆ, ಆಯಾ ತಾಲ್ಲೂಕು ಕಚೇರಿಗಳಿಗೆ ಹೋಗಿ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ಪಡೆದು,ಅಲ್ಲೇ ಇರುವ ಫುಡ್ ಇನ್ಸ್ ಪೆಕ್ಟರ್ ಅವರಿಗೆ ನೀಡಿದರೆ ತಕ್ಷಣವೇ ತಾತ್ಕಾಲಿಕ ಪಡಿತರ ಚೀಟಿ ನೀಡಲಾಗುತ್ತದೆ, ತದ ನಂತರ ಅದನ್ನು ಪರಿಶೀಲಿಸಿ ಖಾಯಂ ಪಡಿತರ ಚೀಟಿ ನೀಡಲಾಗುವುದು ಎಂದು ವಿವರಿಸಿದ ಅವರು, ಹೀಗೆ ಹೆಚ್ಚುವರಿ ಕಾರ್ಡುಗಳನ್ನು ನೀಡುವುವುದರಿಂದ ಅನ್ನಭಾಗ್ಯ ಯೋಜನೆಯಡಿ ಒಂದು ಕೋಟಿ ಕೆಜಿಗೂ ಹೆಚ್ಚು ಅಕ್ಕಿಯನ್ನು ಒದಗಿಸಬೇಕಾಗುತ್ತದೆ ಎಂದರು.

ಇನ್ನು ಮುಂದೆ ಪಡಿತರ ಚೀಟಿ, ಕೂಪನ್ ಇದ್ದವರು ರಾಜ್ಯದ ಯಾವುದೇ ಭಾಗದಲ್ಲಿ ಆಹಾರ ಪದಾರ್ಥಗಳನ್ನು ಪಡೆಯಬಹುದು ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು. ಮುಂದಿನ ತಿಂಗಳ ಮೊದಲ ವಾರದಿಂದ ಅನಿಲಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್, ಸ್ಟವ್, ಲೈಟರ್‍ ಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಗ್ಯಾಸ್ ಕಂಪನಿಗಳು ಪ್ರತಿ ತಿಂಗಳು ಒಂದು ಲಕ್ಷದಿಂದ, ಒಂದೂ ಕಾಲು ಲಕ್ಷದಷ್ಟು ಸಂಪರ್ಕ ನೀಡಲು ಸಾಧ್ಯ ಎಂದು ಹೇಳಿವೆ. ಈ ಮಧ್ಯೆ ರಾಜ್ಯದಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷದಷ್ಟು ಗ್ಯಾಸ್ ಸಂಪರ್ಕ ಇಲ್ಲದ ಕುಟುಂಬಗಳಿವೆ ಎಂದು ಅಂದಾಜು ಮಾಡಲಾಗಿದ್ದು ,ಮೂರು ಹಂತಗಳಲ್ಲಿ ಗ್ಯಾಸ್ ಸಂಪರ್ಕಗಳನ್ನು ಒದಗಿಸಲಾಗುವುದು ಎಂದರು.

ಇದೇ ಕಾರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಸಕರು ಅದರಲ್ಲಿರುತ್ತಾರೆ. ಮತ್ತು ಆದ್ಯತೆಯ ಮೇಲೆ ಫಲಾನುಭವಿಗಳ ಪಟ್ಟಿಯನ್ನು ಅವರೇ ಒದಗಿಸುತ್ತಾರೆ, ಅವರು ಹೇಳಿದವರಿಗೆ ಗ್ಯಾಸ್ ಸಂಪರ್ಕ ನೀಡುವ ಕೆಲಸವಾಗುತ್ತದೆ. ಪ್ರತಿ ಆರು ತಿಂಗಳಿಗೆ ಒಂದು ಹಂತದಂತೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ವಿವರ ನೀಡಿದರು.


ಸಂಬಂಧಿತ ಟ್ಯಾಗ್ಗಳು

U.T.Khader Ration card ಪಡಿತರ ಚೀಟಿ ತಾತ್ಕಾಲಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ