ಎರಡೇ ನಿಮಿಷದಲ್ಲಿ ನಿಮ್ಮ ಕತೆ ಕ್ಲೋಸ್…!

Kannada News

09-11-2017

ಭಾರತದ ಡಾಕ್ಟರುಗಳು ತಮ್ಮ ಬಳಿಗೆ ಬರುವ ರೋಗಿಗಳನ್ನು ನೋಡುವ ಸರಾಸರಿ ಸಮಯ ಎಷ್ಟು ಗೊತ್ತೇ? ಕೇವಲ 2 ನಿಮಿಷ ಅಷ್ಟೇ. ಆದ್ರೂ ಕೂಡ, ನಮ್ಮ ಪಕ್ಕದ ಮನೆಯವರಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರಿಗಿಂತ ನಾವು ಉತ್ತಮ, ಏಕೆ ಗೊತ್ತಾ? ಪಾಕಿಸ್ತಾನದ ಡಾಕ್ಟರುಗಳು ಒಂದು ನಿಮಿಷ ಹದಿನೆಂಟು ಸೆಕೆಂಡುಗಳಲ್ಲಿ ರೋಗಿಗಳನ್ನು ನೋಡಿ ಮುಗಿಸಿದರೆ, ಬಾಂಗ್ಲಾ ದೇಶದ ಡಾಕ್ಟರುಗಳು, ತಮ್ಮ ಪ್ರತಿ ಪೇಷೆಂಟ್ ಜೊತೆಗಿನ ವ್ಯವಹಾರ ಚುಕ್ತಾ ಮಾಡಲು ತೆಗೆದುಕೊಳ್ಳುವ ಸಮಯ ಕೇವಲ 48 ಸೆಕೆಂಡುಗಳು ಮಾತ್ರವಂತೆ.

ಈ ವಿಚಾರ, ಬಿಎಂಜೆ ಓಪನ್ ಎಂಬ ವೈದ್ಯಕೀಯ ಸಂಶೋಧನಾ ವರದಿಯಲ್ಲಿ ಪ್ರಕಟವಾಗಿದೆ. ಈ ವರದಿ, ಇಂಗ್ಲೆಂಡಿನ ಹಲವಾರು ಆಸ್ಪತ್ರೆಗಳ ವೈದ್ಯರು ಸೇರಿ ನಡೆಸಿದ ಸಂಶೋಧನೆಯ ಫಲಿತಾಂಶ.

ಬಿಎಂಜೆ ಓಪನ್ ಮೆಡಿಕಲ್ ಜರ್ನಲ್‌ ವರದಿ ಪ್ರಕಾರ, ಜಗತ್ತಿನ ಮುಂದುವರಿದ ದೇಶಗಳು ಎಂದು ಕರೆಸಿಕೊಳ್ಳುವ ಸ್ವೀಡನ್, ಅಮೆರಿಕ, ನಾರ್ವೆಯಂಥ ದೇಶಗಳಲ್ಲಿ, ವೈದ್ಯರು ರೋಗಿಗಳನ್ನು ವಿಚಾರಿಸಿಕೊಳ್ಳುವ ಸರಾಸರಿ ಸಮಯ 20 ನಿಮಿಷಗಳು ಎಂದು ಹೇಳಲಾಗಿದೆ.

ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡ 50 ರಷ್ಟು ಜನರನ್ನು ಹೊಂದಿರುವ 18 ದೇಶಗಳಲ್ಲಿ, ಸರಾಸರಿ ಕನ್ಸಲ್‌ ಟೇಷನ್ ಅಂದರೆ ರೋಗಿಗಳನ್ನು ವಿಚಾರಿಸುವ, ಪರೀಕ್ಷೆ ಮಾಡುವ ಸಮಯ ಕೇವಲ 5 ನಿಮಿಷಗಳು ಅಥವ ಅದಕ್ಕಿಂತ ಕಡಿಮೆ.

ಇಷ್ಟು ಕಡಿಮೆ ಸಮಯದಲ್ಲಿ ರೋಗಿಗಳ ಪರಿಶೀಲನೆ ಆಗುತ್ತಿದೆ ಅಂದರೆ, ಅದು ರೋಗಿಗಳಿಗೆ ಸರಿಯಾದ ರೀತಿಯ ಚಿಕಿತ್ಸೆ ಸಿಗುತ್ತಿಲ್ಲ ಅನ್ನುವುದನ್ನು ತೋರಿಸುತ್ತದೆ. ಇದರ ಜೊತೆಗೆ, ವೈದ್ಯರ ಮೇಲೆ ಬೀಳುತ್ತಿರುವ ಒತ್ತಡವನ್ನೂ ಸೂಚಿಸುತ್ತದೆ. ಇಂಥ ಒಂದು ಪರಿಸ್ಥಿತಿಯಲ್ಲಿ, ರೋಗಿಗಳೇ ದೊಡ್ಡ ನಷ್ಟ ಅನುಭವಿಸುವವರು. ರೋಗಿಗಳಿಗೆ ವೈದ್ಯರ ಬಳಿ ಸಿಗುವ ಸಮಯ ತುಂಬಾ ಕಡಿಮೆ ಇದ್ದರೂ, ಮೆಡಿಕಲ್ ಶಾಪ್‌ ಗಳಲ್ಲಿ ಔಷಧಿಗಳನ್ನು ಕೊಂಡುಕೊಳ್ಳುವ ಸಮಯ ಮಾತ್ರ ಹೆಚ್ಚು.

ಹೆಚ್ಚಿನ ಕಡೆಗಳಲ್ಲಿ, ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಸಂಬಂಧವೇ ಏರ್ಪಟ್ಟಿರುವುದಿಲ್ಲ. ಕನ್ಸಲ್ಟೇಷನ್ ಸಮಯ ಅತಿ ಕಡಿಮೆ ಇದೆ ಎಂದರೆ, ಆ ದೇಶದ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳು ತುಂಬಾ ದೊಡ್ಡವು ಎಂದು ಅರ್ಥ. ಭಾರತದಂಥ ದೇಶದ ವಿಚಾರಕ್ಕೆ ಬಂದಾಗ, ವೈದ್ಯರು ಮತ್ತು ಕನಿಷ್ಟ ಆರೋಗ್ಯ ಸೌಲಭ್ಯಗಳ  ಕೊರತೆಯೇ ಪ್ರಮುಖ ಕಾರಣವಾಗಿ ಕಂಡುಬರುತ್ತದೆ.

ನಮ್ಮ ದೇಶದ ಜಿಲ್ಲಾ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಮತ್ತು ಬಹುತೇಕ ತಾಲೂಕುಗಳು ಮತ್ತು ಹೋಬಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವ ಮಟ್ಟಿಗಿನ ನೂಕು ನುಗ್ಗಲಿರುತ್ತದೆ ಎಂದರೆ, ಹತ್ತಿಪ್ಪತ್ತು ರೋಗಿಗಳು ಒಂದೇ ಗುಂಪಿನಲ್ಲಿ ನಿಂತು, ವೈದ್ಯರ ಮೈಮೇಲೆ ಬಿದ್ದು ತಮ್ಮ ಸಮಸ್ಯೆಯನ್ನು ಸಾಮೂಹಿಕವಾಗಿ ಹೇಳುತ್ತಾ ಹೋಗುತ್ತಾರೆ.

ಆ ವೈದ್ಯರು, ಅವರೆಲ್ಲಾ ಹೇಳುತ್ತಾ ಹೋಗುವುದನ್ನು ಕೇಳಿಸಿಕೊಳ್ಳುತ್ತಾ ಒಬ್ಬ ರೋಗಿಯ ಕಾಯಿಲೆಗೆ ಬರೆಯಬೇಕಾದ ಔಷಧಿಯನ್ನು ಮತ್ತೊಬ್ಬ ರೋಗಿಗೂ, ಮತ್ತೊಬ್ಬನಿಗೆ ಕೊಡಬೇಕಾದ ಔಷಧಿಯನ್ನು ಮಗದೊಬ್ಬನಿಗೆ ಕೊಡುವ ಸಾಧ್ಯತೆಗಳೇ ಅಲ್ಲಿ ಹೆಚ್ಚಾಗಿರುತ್ತವೆ. ಮಾತೆತ್ತಿದರೆ ಸಾಕು, ಆರೋಗ್ಯವೇ ಭಾಗ್ಯ ಎಂದು ಎಲ್ಲರೂ ಹೇಳುವ ನಮ್ಮ ದೇಶದಲ್ಲಿ, ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲದಿರುವುದು ಮಾತ್ರ ದುರ್ಭಾಗ್ಯ.

 


 

 


ಸಂಬಂಧಿತ ಟ್ಯಾಗ್ಗಳು

Kannada News Karnataka ರೋಗಿ ಸರಾಸರಿ ಸಮಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ