ಕುಖ್ಯಾತ ಭವಾರಿಯಾ ಗ್ಯಾಂಗ್ ಬಂಧನ

Kannada News

09-11-2017

ಬೆಂಗಳೂರು: ಪಲ್ಸರ್ ಬೈಕ್‍ ನಲ್ಲಿ ಬಂದು, ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಕುಖ್ಯಾತ ಭವಾರಿಯಾ ಗ್ಯಾಂಗ್ ಅನ್ನು ಪತ್ತೆ ಹಚ್ಚಿರುವ ಆಗ್ನೇಯ ವಿಭಾಗದ ಪೊಲೀಸರು ಐವರನ್ನು ಬಂಧಿಸಿ 20 ಲಕ್ಷ ಮೌಲ್ಯದ  678 ಗ್ರಾಂ. ತೂಕದ 15 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದ ಶ್ಯಾಮಲಿ ಜಿಲ್ಲೆಯ ಅಲ್ಲಾವುದ್ದೀನ್ ಪುರದ ಜೈಪ್ರಕಾಶ್ ಅಲಿಯಾಸ್ ಜಯ (22), ನಿತಿನ್ ಕುಮಾರ್ ಅಲಿಯಾಸ್ ನಿತೀನ್ (21), ಜಿತೇಂದ್ರ ಅಲಿಯಾಸ್ ಜಿತೇಂದ್ರ ಕುಮಾರ್ (22), ಕಪಿಲ್ ಕುಮಾರ್ (25), ನಂದ ಕಿಶೋರ್ ಅಲಿಯಾಸ್ ನಂದ (32)ಬಂಧಿತರು.

ಗ್ಯಾಂಗ್‍ ನಲ್ಲಿದ್ದು  ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಭವಾರಿಯಾ ಗ್ಯಾಂಗ್ ಬಂಧನದಿಂದ ಉತ್ತರ ಪ್ರದೇಶದ ಶ್ಯಾಮಲಿ ಜಿಲ್ಲೆಯ ಜಠಾಣ್, ಮಸ್ತ್‍ ಘಡ್, ಖೂಬ್ಸಾ, ಖೇಡಿ, ಅಹಮದ್ ಘಡ್, ಚೋಟಾ ಖಾನ್‍ ಪುರ್, ಬಡಾ ಖಾನ್‍ಪುರ್, ರಾಮ್‍ಪುರ್, ಅಲ್ಲಾವುದೀನ್‍ಪುರ್, ಬ್ರಹ್ಮಾಯಣ್ (ಬಿರಾಲಿಯನ್), ನಯಾಬಾನ್, ದೂಡ್ಲಿ ಸೇರಿ 12 ಗ್ರಾಮಗಳಲ್ಲಿ ಬಹುತೇಕ ಸರಗಳ್ಳರು, ಅಪರಾಧಿಗಳೇ ಇರುವುದು ಪತ್ತೆಯಾಗಿದೆ ಎಂದರು.

ಸುಮಾರು 10 ಚ.ಕೀ ವ್ಯಾಪ್ತಿಯಲ್ಲಿರುವ ಈ 12 ಗ್ರಾಮಗಳಲ್ಲಿ ಇರುವವರೆಲ್ಲರೂ ಬಹುತೇಕ ಭವಾರಿಯಾ ಜಾತಿಗೆ ಸೇರಿದವರಾಗಿದ್ದು, ಇಲ್ಲಿ ಗ್ಯಾಂಗ್ ಕಟ್ಟಿಕೊಂಡು ಉತ್ತರ ಭಾರತದಲ್ಲಿ ಕಳ್ಳಭಟ್ಟಿ ತಯಾರಿಕೆ, ರೈಲಿನಲ್ಲಿ ಕಳ್ಳತನ, ದ್ವಿಚಕ್ರ ವಾಹನ ಕಳವು, ಮನೆ ಕಳವು, ಢಕಾಯಿತಿ ಕೃತ್ಯಗಳನ್ನು ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಹಳ್ಳಿಗಳ ಗ್ಯಾಂಗ್‍ನ ಸದಸ್ಯರು ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮುಂತಾದ ಮಹಾನಗರಗಳಿಗೆ ವಿಮಾನ ಇಲ್ಲವೆ ರೈಲಿನಲ್ಲಿ ಬಂದು ಒಂಟಿ ಮಹಿಳೆಯರ ಸರಗಳ್ಳತನ ಮಾಡಿ ತಮ್ಮ ಹಳ್ಳಿಗಳಿಗೆ ಸೇರಿಕೊಳ್ಳುತ್ತಿದ್ದರು.

ಜಠಾಣ್ ಸೇರಿ 12 ಹಳ್ಳಿಗಳಲ್ಲಿ ಗ್ಯಾಂಗ್‍ನ ಸದಸ್ಯರಿಗೆ ಗ್ರಾಮಸ್ಥರೇ ರಕ್ಷಣೆ ನೀಡುತ್ತಿದ್ದು, ಅವರನ್ನು ಬಂಧಿಸಿ ಕರೆತರುವುದು ಪೊಲೀಸರಿಗೆ ಸವಾಲಾಗಿ ಪರಿಣಿಮಿಸಿತ್ತು. ಕಳೆದ ಕೆಲ ದಿನಗಳಿಂದ ಸಂಘಟಿತ ಪ್ರಯತ್ನ ಮಾಡಿ ಆರೋಪಿಗಳನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.

ಭವಾರಿ ಗ್ಯಾಂಗ್‍ನ ಓರ್ವ ನಗರಕ್ಕೆ ಬಂದು ಕೆಳ ಮಧ್ಯಮವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಬಾಡಿಗೆಗೆ ಮನೆ ಪಡೆದುಕೊಂಡು, ಬೈಕ್ ಇಟ್ಟುಕೊಂಡು ಸಭ್ಯಸ್ಥನಂತೆ 2 ತಿಂಗಳು ವಾಸ್ತವ್ಯ ನಡೆಸಿದ ನಂತರ ತಮ್ಮ ಗ್ಯಾಂಗ್‍ನ ಸದಸ್ಯರನ್ನು ಮನೆಗೆ ಕರೆಸಿಕೊಂಡು ಅವರ ಮೂಲಕ ಸರಗಳ್ಳತನಕ್ಕೆ ಇಳಿಯುತ್ತಿದ್ದರು.

ಒಂದೆರೆಡು ದಿನ ಸರಗಳ್ಳತನ ಮಾಡುತ್ತಿದ್ದ ಸದಸ್ಯರು, ತಮ್ಮ ಹಳ್ಳಿಗಳಿಗೆ ಪರಾರಿಯಾಗಿ ಮೂರ್ನಾಲ್ಕು ತಿಂಗಳುಗಳ ಕಾಲ ಮತ್ತೆ ಬಾರದೆ ಮತ್ತೊಂದು ಗ್ಯಾಂಗ್‍ನ್ನು ಕೃತ್ಯಕ್ಕೆ ಕಳುಹಿಸುತ್ತಿದ್ದರು. ಬೇರೆ ಬೇರೆ ತಂಡಗಳಾಗಿ ಬಂದು ಸರಣಿ ಸರಗಳ್ಳತನ ಕೃತ್ಯ ನಡೆಸಿ ಚಿನ್ನಾಭರಣಗಳನ್ನು ಉತ್ತರ ಪ್ರದೇಶಕ್ಕೆ ತೆರಳಿ ವಿಲೇವಾರಿ ಮಾಡುತ್ತಿದ್ದರು.

ಗ್ಯಾಂಗ್‍ನ ಪ್ರಮುಖ ಆರೋಪಿ ಜಯಪ್ರಕಾಶ್ ಮಹಿಳೆಯರ ಸರ ಕೀಳುವುದರಲ್ಲಿ ನಿಪುಣನಾಗಿದ್ದ. ಕಳೆದ ಮೂರು ತಿಂಗಳಲ್ಲಿ ಇಲ್ಲಿಯವರೆಗೆ ನಗರದಲ್ಲಿ ನಡೆದ ಬಹುತೇಕ ಸರಗಳ್ಳತನದಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಬೈಕ್‍ನ ಹಿಂಬದಿಯಲ್ಲಿ ಕುಳಿತು ಮಹಿಳೆಯರ ಕುತ್ತಿಗೆಗೆ ಕೈಹಾಕಿ ಕ್ಷಣಾರ್ಧದಲ್ಲೇ ಸರ ಕೀಳುವುದರಲ್ಲಿ ಈತ ಕುಖ್ಯಾತಿ ಪಡೆದಿದ್ದಾನೆ ಎಂದು ತಿಳಿಸಿದರು.

ಜಯ್ ಹರಿಯಾಣದ ಕರ್ನಾಲ್‍ನಲ್ಲಿ ನಡೆದ 8 ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾನೆ. ದೆಹಲಿ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿರುವ ಸರಗಳ್ಳತನ ಪ್ರಕರಣಗಳಲ್ಲಿ ಜಯ್ ಭಾಗಿಯಾಗಿರುವುದು ವಿಚಾರಣೆಯಲ್ಲಿ ಕಂಡು ಬಂದಿದೆ ಎಂದರು.

ಗ್ಯಾಂಗ್ ಪತ್ತೆಯಿಂದ ಮೈಕೋ ಲೇಔಟ್, ತಿಲಕ್ ನಗರ, ಜೆಪಿ ನಗರ, ಕೆಂಗೇರಿ, ಆರ್.ಎಂ.ಸಿ ಯಾರ್ಡ್, ಜಯನಗರ ಕೆಎಸ್ ಲೇಔಟ್, ಸುಬ್ರಮಣ್ಯಪುರ, ಜ್ಞಾನಭಾರತಿ ಪೆÇಲೀಸ್ ಠಾಣೆಗಳ 30ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಬಂಧಿತ ಗ್ಯಾಂಗ್‍ನಿಂದ 20 ಲಕ್ಷ ಮೌಲ್ಯದ 678 ಗ್ರಾಂ ತೂಕದ 15 ಚಿನ್ನದ ಸರಗಳು, ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಂಗ್ ಕಸಿದಿದ್ದ ಚಿನ್ನದ ಸರಗಳನ್ನು ಮಹಿಳೆಯರಿಗೆ ನೀಡಿದ ಸುನೀಲ್ ಕುಮಾರ್ ಅವರು ಗ್ಯಾಂಗ್‍ನ್ನು ಪತ್ತೆ ಹಚ್ಚಿದ ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ನೇತೃತ್ವದ ಮೈಕೋ ಲೇಔಟ್ ಇನ್ಸ್ ಪೆಕ್ಟರ್ ಅಜಯ್ ಮತ್ತವರ ಸಿಬ್ಬಂದಿಯನ್ನು ಅಭಿನಂದಿಸಿ ನಗದು ಬಹುಮಾನ ನೀಡಿ ಗೌರವಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ