ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ದಾಳಿ..

Kannada News

09-11-2017 400

ಚೆನ್ನೈ: ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಪ್ರಧಾನಿ ನರೇಂದ್ರಮೋದಿ ಅವರು ಭೇಟಿ ಮಾಡಿದ ಬೆನ್ನಲ್ಲೆ, ತೆರಿಗೆ ವಂಚನೆ ಸಂಬಂಧ ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ನಟರಾಜನ್ ಒಡೆತನದ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯ ಇಲಾಖೆಯ 700ಕ್ಕೂ ಹೆಚ್ಚು ಅಧಿಕಾರಿಗಳಿದ್ದ ತಂಡಗಳು, ಚೆನ್ನೈ, ತಿರುವನ್ನೂರ್, ತಂಜಾವೂರ್ ಸೇರಿದಂತೆ ತಮಿಳುನಾಡಿನ 150 ಕಡೆ, ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಸೇರಿದಂತೆ ಒಟ್ಟು 187 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಶಶಿಕಲಾ ಸಾಮ್ರಾಜ್ಯದ ತೆರಿಗೆ ವಂಚನೆಯ ಅಕ್ರಮ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಶಶಿಕಲಾ ಅವರಲ್ಲದೆ ಅವರ ಸಹೋದರರು, ಪತಿ ನಟರಾಜನ್ ಸಹೋದರರು ಮತ್ತು ಕುಟುಂಬಸ್ಥರು, ಇಳವರಸಿಯ ಪುತ್ರಿಯರಾದ ಶಕೀಲಾ, ಕೃಷ್ಣಪ್ರಿಯ, ಸಂಬಂಧಿಕರಾದ ಭಾಸ್ಕರನ್, ಸುಂದರವದನ್, ಜಯಾ ಟಿವಿಯ ಎಂಡಿ ವಿವೇಕ್ ಜಯರಾಮನ್, ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸೇರಿದ 20 ಕಡೆ ಹಾಗೂ ದೆಹಲಿ, ಚೆನ್ನೈ ಹಾಗೂ ಹೈದರಾಬಾದ್‍ನಲ್ಲಿ ಶಶಿಕಲಾ ಕಂಪನಿ ಬಂಡವಾಳ  ಹೂಡಿರುವ 187 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ 6 ಗಂಟೆಯ ವೇಳೆಗೆ ಚೆನ್ನೈನಲ್ಲಿರುವ ಜಯಾ ಟಿವಿಯ ಕಚೇರಿಯ ಮೇಲೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ, ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಈ ನಡುವೆಯೇ ಮನ್ನಾರ್‍ ಗಡಿಯ ಮನ್ನೈ ನಗರದಲ್ಲಿರುವ ಟಿಟಿವಿ ದಿನಕರನ್ ಅವರ ಕಚೇರಿ, ನಿವಾಸ, ಶಶಿಕಲಾ ಸಹೋದರ ದಿವಾಕರನ್ ಮನೆ, ಕಚೇರಿ ಹಾಗೂ ಅವರ ಬೆಂಬಲಿಗರ ನಿವಾಸಗಳ ಮೇಲೂ ಏಕಕಾಲಕ್ಕೆ ದಾಳಿ ಮುಂದುವರೆದಿದೆ.

ಶಶಿಕಲಾ ಕುಟುಂಬದ ಒಡೆತನದಲ್ಲಿರುವ ಜಾಝ್ ಸಿನಿಮಾ, ಫಿನೀಕ್ಸ್ ಮಾಲ್ ಹಾಗೂ ಬೆಂಗಳೂರಿನದಲ್ಲಿರುವ ಎಐಎಡಿಎಂಕೆ ಕಾರ್ಯದರ್ಶಿ ಪುಗುಳೇಂದಿ, ನಮದ್ ಎಂಜಿಆರ್ ಅವರ ನಿವಾಸ, ಪುದುಕೋಟೈನ ಗಾಂಧಿನಗರದಲ್ಲಿರುವ ಶಶಿಕಲಾ ಅವರ ಹಿರಿಯ ಸಹೋದರ ಸುಂದರವದನಂ ನಿವಾಸ, ಪತಿ ನಟರಾಜನ್ ಅವರ ತಂಜಾವೂರ್ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಂದರ್ಭದಲ್ಲಿ ಎಲ್ಲ ಕಡೆ ಭಾರಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿದ್ದು, ಶಶಿಕಲಾ ಮತ್ತು ಅವರ ಬೆಂಬಲಿಗರು ದಾಳಿಯಿಂದ ಭಯಭೀತರಾಗಿದ್ದಾರೆ.

ಜಯಲಲಿತಾ ನಿಧನದ ನಂತರ ಜಯಾಟಿವಿ ಶಶಿಕಲಾ ನಿಯಂತ್ರಿಸುತ್ತಿದ್ದು, ಹೀಗಾಗಿ ಜಯಾಟಿವಿಯ ದಾಳಿ ನಡೆಸಲಾಗಿದೆ. ಇದಲ್ಲದೆ ಆಪರೇಷನ್ ಕ್ಲೀನ್ ಮನಿ ಹೆಸರಲ್ಲಿ ಶಶಿಕಲಾ ಮತ್ತು ಟಿಟಿವಿ ದಿನಕರನ್ ಮತ್ತು ಅವರ ಕುಟುಂಬದ ಒಡೆತನಕ್ಕೆ ಸೇರಿದ ದೆಹಲಿ, ಮುಂಬೈ, ಚೆನ್ನೈ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.

10ಕ್ಕೂ ಹೆಚ್ಚು ಅಧಿಕಾರಿಗಳ ಹೆಚ್ಚು ಗುಂಪುಗಳು ವಿವಿಧೆಡೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ನಗದು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಅದರ ಮಾಹಿತಿ ತಿಳಿದು ಬಂದಿಲ್ಲ. ವಿವಿಧ ಕಂಪನಿಗಳಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿರುವುದು, ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ಪತ್ತೆಯಾಗಿದೆ.

ಎಲ್ಲ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಟಿಟಿವಿ ದಿನಕರನ್ ಎಐಎಡಿಎಂಕೆ ಪಕ್ಷದ ಎರಡೆಲೆ ಚಿನ್ಹೆ ಪಡೆಯಲು ಚುನಾವಣಾ ಆಯೋಗಕ್ಕೆ ಲಂಚ ನೀಡಲು ಹೋಗಿ ಸಿಕ್ಕಿ ಬಿದ್ದಿದ್ದರು. ಅಕ್ರಮ ಆಸ್ತಿ ಗಳಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kannada News Karnataka ಡಿಎಂಕೆ ಶಶಿಕಲಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ