‘ರಾಜ್ಯದ 10 ಸಾವಿರ ಕೆರೆಗಳು ಕಣ್ಮರೆ’

Kannada News

09-11-2017

ಬೆಂಗಳೂರು: ಜಲಸಂಪನ್ಮೂಲಗಳೆಂದರೆ ಕೇವಲ ನದಿಗಳ ಬಗ್ಗೆ ಮಾತ್ರ ಯೋಚಿಸುವುದಲ್ಲ. ಬದಲಿಗೆ, ನಮ್ಮ ಕೆರೆಕಟ್ಟೆಗಳಿಗೂ ಇರುವ ಮೌಲ್ಯವನ್ನು ನಾವು ಅರಿಯಬೇಕಾಗಿದೆ ಎಂದು ಹಿರಿಯ ಕೃಷಿ ವಿಜ್ಞಾನಿ ಮತ್ತು ಖ್ಯಾತ ವಿಜ್ಞಾನ ಸಂವಹನಕಾರ ಡಾ.ಟಿ.ಎಸ್.ಚನ್ನೇಶ್ ಹೇಳಿದ್ದಾರೆ.

ಕನ್ನಡ ಗೆಳೆಯರ ಬಳಗ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು `ಕರ್ನಾಟಕದ ಜಲ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯ' ಕುರಿತು ವಿಶೇಷ ಉಪನ್ಯಾಸ ನೀಡಿದರು. ದಕ್ಷಿಣ ಭಾರತದಲ್ಲಿ ಜಲಸಂರಕ್ಷಣೆಯ ವಿಜ್ಞಾನ ಆರಂಭವಾಗಿದ್ದೇ ಕೆರೆಗಳ ಮೂಲಕ. ಈ ಭಾಗದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಅವಿಭಜಿತ ಆಂಧ್ರಪ್ರದೇಶಗಳಲ್ಲಿ ಈಗಲೂ 1.27 ಲಕ್ಷ ಕೆರೆಗಳು ಜೀವಂತವಾಗಿವೆ. ಇವುಗಳಿಗಿರುವ ಪಾರಂಪರಿಕ ಮತ್ತು ವೈಜ್ಞಾನಿಕ ಮಹತ್ವವನ್ನು ನಾವು ಮನಗಾಣಬೇಕಾದ ಜರೂರು ಈಗ ಸೃಷ್ಟಿಯಾಗಿದೆ, ಎಂದು ಅವರು ನುಡಿದರು.

ರಾಜ್ಯದಲ್ಲಿ 1991ರವರೆಗೂ ಕೆರೆಗಳ ಸ್ಥಿತಿಗತಿ ಚೆನ್ನಾಗಿಯೇ ಇತ್ತು. ಆದರೆ, ಕಳೆದ 25 ವರ್ಷಗಳಲ್ಲಿ ಮೇಲ್ಮೈ ನೀರನ್ನು ಎಳೆದು, ಬಳಸುವ ಅಪಾಯಕಾರಿ ಪ್ರವೃತ್ತಿ ಬೇರುಬಿಟ್ಟಿದೆ. ಹೀಗಾಗಿ, ಕಳೆದ ಕಾಲು ಶತಮಾನದಲ್ಲಿ ರಾಜ್ಯದ 10 ಸಾವಿರ ಕೆರೆಗಳು ಕಣ್ಮರೆಯಾಗಿವೆ,'' ಎಂದು ಚನ್ನೇಶ್ ಆತಂಕ ವ್ಯಕ್ಯಪಡಿಸಿದರು.

ಚಿತ್ರದುರ್ಗದ ‘ಚಂದವಳ್ಳಿಯ ಕೆರೆ'ಯೇ ಕರ್ನಾಟಕದ ಅತ್ಯಂತ ಪ್ರಾಚೀನ ಕೆರೆಯಾಗಿದೆ. ಇದನ್ನು ಕಟ್ಟಿಸಿದ್ದು ಕದಂಬ ಸಾಮ್ರಾಜ್ಯ ಸ್ಥಾಪಕನಾದ ಮಯೂರಶರ್ಮ. ಇನ್ನೊಂದೆಡೆ, ಇಡೀ ಏಷ್ಯಾದಲ್ಲೇ ಎರಡನೇ ಅತ್ಯಂತ ದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ 'ಸೂಳೆಕೆರೆ' ಕೂಡ ನಮ್ಮ ರಾಜ್ಯದಲ್ಲಿದೆ. 44 ಕಿ.ಮೀ.ಸುತ್ತಳತೆಯುಳ್ಳ ಈ ಕೆರೆಯು ಇಂದಿಗೂ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರನ್ನು ಒದಗಿಸುತ್ತಿದೆ'' ಎಂದು ಅವರು ವಿವರಿಸಿದರು.

ನಮ್ಮಲ್ಲಿ ಯಥೇಚ್ಛವಾದ ನೀರಿನ ಸಂಪನ್ಮೂಲವಿದೆ. ಆದರೆ ಅದನ್ನು ನಾವು ಸರಿಯಾಗಿ ಬಳಸುತ್ತಿಲ್ಲ. ಜೊತೆಗೆ ಜಲಾನಯನ ಪ್ರದೇಶಗಳಲ್ಲಿ ಒಂದೇ ಸಮನೆ ಒತ್ತುವರಿ ನಡೆಯುತ್ತಿದೆ. ಜಲಸಂರಕ್ಷಣೆಯ ಬಗ್ಗೆ ಇರುವ ನಮ್ಮ ಪಾರಂಪರಿಕ ತಂತ್ರಜ್ಞಾನದಲ್ಲಿ ಸಮರ್ಪಕತೆ ಇದೆ. ಒಟ್ಟಿನಲ್ಲಿ ನಾವು ನೀರಿಗೆ ಬೆಲೆ ಕೊಡುವುದನ್ನು ಕಲಿಯಬೇಕಾಗಿದೆ'' ಎಂದು ಅವರು ಗಮನ ಸೆಳೆದರು.

ರಾಜ್ಯವು ಕೃಷ್ಣಾ, ಕಾವೇರಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಹೀಗೆ ಒಟ್ಟು ಆರು ನದಿಗಳ ಮುಖಜಭೂಮಿಯಾಗಿ ಹಂಚಿಕೆಯಾಗಿದೆ. ಕೇವಲ ಬೃಹತ್ ಜಲಾಶಯಗಳ ಬಗ್ಗೆ ಮಾತ್ರ ಚಿಂತಿಸುವ ನಾವು, ಕೆರೆಗಳನ್ನು ಸಂಪನ್ಮೂಲಗಳೆಂದು ಪರಿಗಣಿಸುವುದನ್ನು ರೂಢಿಸಿಕೊಳ್ಳಬೇಕಾಗಿದೆ,'' ಎಂದು ಚನ್ನೇಶ್ ಪ್ರತಿಪಾದಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ