ಪ್ಲಾಸ್ಟಿಕ್ ತಿನ್ನುವ ಕಂಬಳಿ ಹುಳು..?

Kannada News

09-11-2017

ನೀವೆಲ್ಲರೂ ಕಂಬಳಿ ಹುಳುಗಳನ್ನು ನೋಡಿಯೇ ಇದ್ದೀರಿ ಅಲ್ಲವೇ? ಒಂದು ರೀತಿಯಲ್ಲಿ ರೇಷ್ಮೆ ಹುಳುವಿನಂತೆ ಕಾಣುವ ಮತ್ತು ಕೈ ಮೈಗೆ ತಗುಲಿದರೆ ಕೆರೆತ ಉಂಟುಮಾಡುವ ಕಂಬಳಿ ಹುಳುಗಳನ್ನು ಮನೆಯೊಳಗೇನಾದರೂ ಕಂಡರೆ ಚೀರಾಡುತ್ತಾ ಅದನ್ನು ಆಚೆಗೆ ಎಸೆಯುತ್ತೀರಿ ತಾನೇ..?  ನಿಲ್ಲಿ… ಅದೇ ರೀತಿಯ ಕಂಬಳಿ ಹುಳುಗಳು ಇದೀಗ ಇಡೀ ಜಗತ್ತಿಗೆ ಲಾಭದಾಯಕವಾಗುವ ಒಂದು ಕೆಲಸವನ್ನು ಮಾಡಬಲ್ಲವು ಎಂಬುದು ಗೊತ್ತಾಗಿದೆ.

ಸ್ಪೇನ್ ದೇಶದ ಕ್ಯಾಂಟಾಬ್ರಿಯ ವಿಶ್ವವಿದ್ಯಾಲಯದ ಡಾ.ಫೆಡೆರಿಕ ಬರ್ಟೋಕಿನಿ ಎಂಬ ಬಯೋಲಜಿಸ್ಟ್ ಅಂದರೆ ಜೀವಶಾಸ್ತ್ರಜ್ಞೆ ಅಕಸ್ಮಾತ್ ಆಗಿ ಕಂಡುಕೊಂಡ ಒಂದು ಬೆಳವಣಿಗೆ ಈ ವಿಚಾರಕ್ಕೆ ಪುಷ್ಟಿಕೊಡುತ್ತಿದೆ. ಹವ್ಯಾಸಕ್ಕಾಗಿ ಜೇನು ಸಾಕಣೆಯನ್ನೂ ಮಾಡುವ ಫೆಡೆರಿಕ ಬರ್ಟೋಕಿನಿ, ಕೆಲವು ಜೇನುಗೂಡುಗಳ ಒಳಗೆ ನುಸುಳುವ ಒಂದು ರೀತಿಯ ಕಂಬಳಿ ಹುಳುಗಳು ಜೇನುತುಪ್ಪ ಕಬಳಿಸಿರುವುದನ್ನು ಗಮನಿಸಿದರು. ಮೊದಲೇ ಜೀವವಿಜ್ಞಾನಿಯಾಗಿರುವ  ಬರ್ಟೋಕಿನಿ, ಇವು ಯಾವ ರೀತಿಯ ಹುಳುಗಳು ಎಂಬುದನ್ನು ಪತ್ತೆಹಚ್ಚುವ ಸಲುವಾಗಿ, ಕೆಲವು ಹುಳುಗಳನ್ನು ಒಂದು ಪ್ಲಾಸ್ಟಿಕ್ ಕವರ್‌ ನಲ್ಲಿ ಹಾಕಿಕೊಂಡು ಮನೆಗೆ ತಂದರು. ಮನೆಗೆ ಬಂದು ಒಂದೆರಡು ಗಂಟೆಗಳ ನಂತರ ಆ ಕವರ್ ತೆಗೆದು ನೋಡಿದರೆ ಅದರೊಳಗೆ ಒಂದೂ ಹುಳು ಇರಲಿಲ್ಲ, ಬದಲಿಗೆ ಆ ಹುಳುಗಳು ಕವರ್ ಕೊರೆದುಕೊಂಡು ಈಚೆಗೆ ಬಂದು, ಮನೆಯ ತುಂಬಾ ಓಡಾಡತೊಡಗಿದ್ದವು. ಇದನ್ನು ಕಂಡ ಬರ್ಟೋಕಿನಿಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು.  ಏಕೆಂದರೆ, ಪ್ಲಾಸ್ಟಿಕ್ ಅನ್ನೇ ಕಬಳಿಸಬಲ್ಲ ಈ ಹುಳುಗಳನ್ನೇನಾದರೂ ಬಳಸಿಕೊಂಡು ಪ್ಲಾಸ್ಟಿಕ್ ಕಸಕ್ಕೆ ಮುಕ್ತಿ ನೀಡಬಹುದೇ ಅನ್ನುವುದು ಅವರ ಚಿಂತನೆಯಾಗಿತ್ತು. ಹೀಗಾಗಿ, ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ ಈ ಬಗ್ಗೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರಂತೆ.

ಪ್ಲಾಸ್ಟಿಕ್ ತ್ಯಾಜ್ಯ ಅನ್ನುವುದು ವರ್ಷಗಟ್ಟಲೆ ಕೊಳೆಯದೆ ವಾತಾವರಣದಲ್ಲೇ ಉಳಿದು ಸಮಸ್ಯೆ ಸೃಷ್ಟಿಸುತ್ತಿದೆ. ನಮ್ಮ ಜಗತ್ತನ್ನು ಕಾಡುತ್ತಿರುವ ಈ ಸಮಸ್ಯೆ ಪರಿಹರಿಸಲು ಈ ಕಂಬಳಿ ಹುಳುಗಳನ್ನು ಬಳಸಿಕೊಳ್ಳಬಹುದೇ? ಹಾಗೆ ಮಾಡುವುದು ಸರಿಯಾದ ಕ್ರಮವೇ? ಅದರಿಂದ ಬೇರೆ ಯಾವ  ಪರಿಣಾಮ ಉಂಟಾಗಬಹುದು..? ಎಂಬೆಲ್ಲಾ ವಿಚಾರಗಳ ಬಗ್ಗೆ ಸಂಶೋಧನೆ ಮತ್ತು ವಿಚಾರ ವಿನಿಮಯ ನಡೆಯುತ್ತಿದೆ. 

ಇದೆಲ್ಲಾ ಏನಾದರೂ ಇರಲಿ, ಈ ಹುಳುಗಳು ಸೂಕ್ತವಲ್ಲವಾದರೆ, ಪ್ರಕೃತಿಯಲ್ಲಿ ಬೇರೆ ಯಾವುದಾದರೂ ಹುಳು ಹುಪ್ಪಟೆಯೋ, ಪ್ರಾಣಿಯೋ ಇಂಥ ಪ್ಲಾಸ್ಟಿಕ್ ಅನ್ನು ತಿಂದು ಅರಗಿಸಿಕೊಳ್ಳಬಲ್ಲ ಶಕ್ತಿ ಪಡೆದಿರಬಹುದು. ಒಂದು ದಿವಸ, ಅದೂ ಕೂಡ ಗೊತ್ತಾಗಿ, ನಮ್ಮ ಜಗತ್ತಿಗೆ ಲಾಭ ಆಗಬಹುದು. ಆ ನಿಟ್ಟಿನಲ್ಲಿ ಅಕಸ್ಮಾತ್ ಆಗಿ ಕಂಡುಬರುವ ಇಂಥ ಕುತೂಹಲಕಾರಿ ಬೆಳವಣಿಗೆಗಳು ಮಾನವವರಿಗೆ ನೆರವಾಗಬಲ್ಲವು ಅಲ್ಲವೇ.?


ಸಂಬಂಧಿತ ಟ್ಯಾಗ್ಗಳು

Kannada News Karnataka ಕಂಬಳಿ ಹುಳು ಬಯೋಲಜಿಸ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ