'ಜನ ನಿದ್ರೆ ಮಾಡಿದ್ರೆ ಪ್ರಜಾಪ್ರಭುತ್ವ ಉಳಿಯಲ್ಲ’

Kannada News

09-11-2017

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಪ್ರಜೆಗಳು ಚಳವಳಿ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಇಂದಿಲ್ಲಿ ಅಭಿಪ್ರಾಯಪಟ್ಟರು.  ದೇಶದಲ್ಲಿ ಇಂದು ಧರ್ಮ ಮತ್ತು ಇಸಂಗಳ ಮೇಲೆ ಪ್ರಭುತ್ವ ಹೇರಲಾಗಿದೆ. ವ್ಯವಸ್ಥೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಲವಂತದ ಹೇರಿಕೆಗಳನ್ನು ಕಾಣುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವಲ್ಲ. ಇಂತಹ ಪ್ರಭುತ್ವದ ವಿರುದ್ಧ ಹಿಂದೆಯೂ ಹೋರಾಟ ನಡೆಸಲಾಗಿತ್ತು. ಈಗಲೂ ಹೋರಾಡುವ ಪರಿಸ್ಥಿತಿ ಇದೆ ಎಂದರು.

ಬೆಂಗಳೂರು ಪ್ರೆಸ್‍ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಜನ ನಿದ್ರೆ ಮಾಡಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರು, ದೇಶಬಿಟ್ಟು ಹೋಗಬೇಕು ಎಂಬ ಕೂಗು ಎದ್ದಿತ್ತು. ಆದರೆ ಯಾರೂ ದೇಶಬಿಟ್ಟು ಹೋಗಬಾರದು. ಹೊರಗಿನಿಂದ ಬಂದವರು ದೇಶಬಿಟ್ಟು ಹೋಗಬೇಕು ಎಂದರೆ ಅದರ ದೊಡ್ಡ ಪಟ್ಟಿಯನ್ನೇ ಮಾಡಬೇಕಾಗುತ್ತದೆ, ಬಿಟ್ಟು ಹೋಗು ಎನ್ನುವ ದೇಶ ನಮ್ಮದಲ್ಲ ಎಂದರು.

ಭಾಷೆ, ಗಡಿ, ನೆಲ, ಜಲದಲ್ಲಿ ನಾಡಿಗೆ ಯಾವುದರಲ್ಲೂ ನ್ಯಾಯ ಸಿಗುತ್ತಿಲ್ಲ. ಶಿಕ್ಷಣದಲ್ಲಿ ಕನ್ನಡ ಒಂದು ಭಾಷೆ ಕುರಿತ ಸಮಸ್ಯೆಗೆ ಸಂವಿಧಾನದ ತಿದ್ದುಪಡಿ ಮಾಡಬೇಕು. ಅದಕ್ಕಿಂತ ಕರ್ನಾಟಕ ಒಂದು ಹೆಜ್ಜೆ ಮುಂದಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಒಕ್ಕೂಟದ ವ್ಯವಸ್ಥೆಯಲ್ಲಿ ಇಂತಹ ವಿಷಯಗಳಲ್ಲಿ ಎಲ್ಲರೂ ಒಂದಾಗಿ ಹೋರಾಡುವ ಅಗತ್ಯವಿದೆ. ನಮ್ಮ, ನಮ್ಮ ರಾಜ್ಯ ಭಾಷೆಯಲ್ಲಿ ಒಂದು ವಿಷಯ ಶಿಕ್ಷಣದಲ್ಲಿರಬೇಕು ಎಂದು ವಿವರಿಸಿದ್ದಾರೆ, ಹಾಗಾಗಿ ನಾನು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು `ಕನ್ನಡ ಸ್ನೇಹಿ ಸರ್ಕಾರ ಎಂದು ಕರೆಯುತ್ತೇನೆ ಎಂದು ಪ್ರತಿಪಾದಿಸಿದರು.

ಬರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಡಿಮೆ ಅಂಶಗಳುಳ್ಳ ನಿರ್ಣಯಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು. ನಂತರ ಬರುವ ಅಧಿವೇಶನದೊಳಗೆ ಅದು ಅನುಷ್ಠಾನಗೊಳ್ಳಬೇಕು ಮತ್ತು ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಹಕ್ಕೊತ್ತಾಯ ಮಾಡುತ್ತಲೇ ಬರಬೇಕು ಎಂದರು.

ಬ್ರಿಟಿಷರ ವಿರುದ್ಧ ಅನೇಕರು ಹೋರಾಟ ಮಾಡಿದರು ಅಂಥವರ ಜಯಂತಿ ಆಚರಣೆ ಮಾಡುವುದು ತಪ್ಪಲ್ಲ. ಟಿಪ್ಪು ಬಗ್ಗೆ ಪರ-ವಿರೋಧ ಎರಡೂ ಇವೆ. ನಾನು ಇತಿಹಾಸದ ಪ್ರಾಧ್ಯಾಪಕನಲ್ಲ ಹಾಗಾಗಿ ಇದರ ಬಗ್ಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸಲು ಆಗುವುದಿಲ್ಲ ಎಂದು ಚಂಪಾ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಪ್ರಜಾಪ್ರಭುತ್ವ ಪರ-ವಿರೋಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ