ನಾಯಕ ಸಮುದಾಯ: ಕಾಂಗ್ರೆಸ್-ಜೆಡಿಎಸ್ ಗಾಳ..

Kannada News

09-11-2017

ಬೆಂಗಳೂರು: ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಸೇರಿದಂತೆ ಹದಿನೈದು ವಿಧಾನಸಭಾ ಕ್ಷೇತ್ರಗಳ ಮೇಲೆ ಪಾರಮ್ಯ ಸಾಧಿಸಲು ಆಡಳಿತಾರೂಢ ಕಾಂಗ್ರೆಸ್, ಇದೀಗ ನಾಯಕ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದು ಇದೇ ಕಾರಣಕ್ಕಾಗಿ ಹಿರಿಯ ಧುರೀಣ ಅಪ್ಪಣ್ಣ ಅವರನ್ನು ಸೆಳೆಯಲು ಮುಂದಾಗಿದೆ.

ಇದೇ ಕಾಲಕ್ಕೆ ಶಾಸಕ ಚಿಕ್ಕಮಾದು ಅವರ ನಿಧನದಿಂದಾಗಿ ನಾಯಕ ಮತಬ್ಯಾಂಕ್ ಕೋಟೆಯ ಮೇಲಿನ ಹಿಡಿತ ಕಳೆದುಕೊಳ್ಳುವ ಚಿಂತೆಯಲ್ಲಿರುವ ಜೆಡಿಎಸ್ ಕೂಡಾ ಅಪ್ಪಣ್ಣ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ. ಉನ್ನತ ಮೂಲಗಳ ಪ್ರಕಾರ ಉಭಯ ಪಕ್ಷಗಳ ನಾಯಕರೂ ಅಪ್ಪಣ್ಣ ಅವರ ಜತೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ.?ಅಥವಾ ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಯಶಸ್ವಿಯಾಗುತ್ತಾರೋ..?ಕಾದು ನೋಡಬೇಕಿದೆ.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು, ಈ ಸಮುದಾಯದ ಪಾಲಿಗೀಗ ಅಪ್ಪಣ್ಣ ಅವರೇ ಪ್ರಮುಖ ನಾಯಕರು. ಚಿಕ್ಕಮಾದು ನಿಧನರಾಗಿದ್ದರೆ, ಉಳಿದಂತೆ ಇರುವ ಹಲ ನಾಯಕ ಸಮುದಾಯದ ಧುರೀಣರು ವಯಸ್ಸಿನ ಕಾರಣದಿಂದ ಹಿಂದೆ ಸರಿದಿದ್ದು, ಈ ಅಂಶವೂ ಅಪ್ಪಣ್ಣ ಅವರ ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗಮನ ಹರಿಸಲು ಕಾರಣವಾಗಿದೆ.

ಸಿದ್ದರಾಮಯ್ಯ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಚಾಮುಂಡೇಶ್ವರಿ, ಅವರ ಮಗ ಯತೀಂದ್ರ ಅವರು ಸ್ಪರ್ಧಿಸಲಿರುವ ವರುಣಾ, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಕೈ ಪಾಳೆಯದ ಹಲವರಿಗೆ ಅಪ್ಪಣ್ಣ ಈಗ ಸಂಜೀವಿನಿಯಂತೆ ಕಾಣುತ್ತಿದ್ದಾರೆ. ಉಭಯ ಜಿಲ್ಲೆಗಳಲ್ಲಿ ನಾಲ್ಕರಿಂದ ನಾಲ್ಕೂವರೆ ಲಕ್ಷದಷ್ಟಿರುವ ನಾಯಕ ಮತಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲೂ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ. ಅಂದ ಹಾಗೆ ಅಪ್ಪಣ್ಣ ಅವರು ಈ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಸಿದ್ದರಾಮಯ್ಯ ಅವರೆದುರು ಸ್ಪರ್ದಿಸಿ ಸೋತವರು.

ಆದರೆ ತೊಂಭತ್ತೊಂಭತ್ತರಲ್ಲಿ ಅವರ ಸ್ಪರ್ಧೆಯಿಂದಾಗಿ ಸಿದ್ದರಾಮಯ್ಯ ಅವರು ಸೋಲು ಅನುಭವಿಸಬೇಕಾಯಿತಲ್ಲದೆ, ಕಾಂಗ್ರೆಸ್ ಪಕ್ಷದ ವತಿಯಿಂದ ಗುರುಸ್ವಾಮಿಯವರು ಗೆಲುವು ಸಾಧಿಸಿದ್ದರು. ಚಿಕ್ಕಮಾದು ಅವರ ನಿಧನದಿಂದ ಶೂನ್ಯವಾಗಿರುವ ಸಮುದಾಯದ ನಾಯಕತ್ವಕ್ಕೆ ಅಪ್ಪಣ್ಣ ಅವರೇ ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಇದೇ ರೀತಿ ಪಕ್ಷದ ಹಿರಿಯ ನಾಯಕರಾಗಿದ್ದ ಚಿಕ್ಕಮಾದು ಅವರ ನಿಧನದಿಂದ ನಾಯಕ ಮತಬ್ಯಾಂಕ್ ಮೇಲಿನ ಹಿಡಿತ ಸಡಿಲವಾಗಬಹುದು ಎಂಬ ಲೆಕ್ಕಾಚಾರದಲ್ಲಿರುವ ಜೆಡಿಎಸ್ ಕೂಡಾ ಅಪ್ಪಣ್ಣ ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ. ಅಂದ ಹಾಗೆ ಈ ಹಿಂದೆ ಇಡೀ ರಾಜ್ಯದಲ್ಲಿ ಒಂದು ಸಮುದಾಯವನ್ನು ಪ್ರತಿನಿಧಿಸುವ ಒಬ್ಬ ಪ್ರಬಲ ಧುರೀಣರು ಇರುತ್ತಿದ್ದರಾದರೂ ಅವರ ಸಂಖ್ಯೆ ಈಗ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿ ಹೋಗಿದೆ.

ಇದ್ದುದರಲ್ಲೇ ಹಿರಿಯ ನಾಯಕರೆನ್ನಿಸಿಕೊಂಡ ದೇವೇಗೌಡ,ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ತಮ್ಮ ತಮ್ಮ ಸಮುದಾಯಗಳ ಗಣನೀಯ ಮತಗಳನ್ನು ಹಿಡಿದಿಟ್ಟುಕೊಂಡಿದ್ದಾರಾದರೂ ಉಳಿದಂತೆ ಪ್ರತಿಯೊಂದು ಸಮುದಾಯಗಳೂ ಜಿಲ್ಲಾ ಮಟ್ಟದಲ್ಲಿ ತಮ್ಮ ನಾಯಕರನ್ನು ಗುರುತಿಸತೊಡಗಿವೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲೀಗ ಅಪ್ಪಣ್ಣ ಅವರು ನಾಯಕ ಸಮುದಾಯದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದು, ಪರಿಣಾಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೆರಡರ ಪಾಲಿಗೂ ಅವರು ಸಂಜೀವಿನಿಯಂತೆ ಕಾಣುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಆಡಳಿತಾರೂಢ ನಾಯಕ ಸಮುದಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ