ಉಸಿರುಗಟ್ಟಿ ಒದ್ದಾಡುತ್ತಿದೆ ದೆಹಲಿ…

Kannada News

08-11-2017 520

ದೇಶದ ರಾಜಧಾನಿ ದೆಹಲಿಯಲ್ಲಿನ ವಾಯುಮಾಲಿನ್ಯ ತೀರಾ ಹೆಚ್ಚಾಗಿದ್ದು ಭಯಂಕರ ಪರಿಸ್ಥಿತಿಗೆ ತಲುಪಿದೆ. ಎಷ್ಟರಮಟ್ಟಿಗೆ ಎಂದರೆ, ದೆಹಲಿಯ ಜನರಿಗೆ ಸರಿಯಾಗಿ ಉಸಿರಾಡುವುದೇ ಸಾಧ್ಯವಾಗುತ್ತಿಲ್ಲ, ಬಹುತೇಕ ಜನರಿಗೆ ಕಣ್ಣುರಿ, ಗಂಟಲು ಉರಿ, ಮೂಗಿನ ಉರಿ ಕಾಣಿಸಿಕೊಂಡಿದೆ. ಕೆಲವರು ತಲೆನೋವಿನಿಂದ ಕಿರಿಕಿರಿ ಅನುಭವಿಸುತ್ತಿದ್ದರೆ, ಇನ್ನೂ ಕೆಲವರಿಗಂತೂ ವಾಂತಿ ಬರುವಂಥಾಗುತ್ತಿದ್ದು, ಜನರು ಮನೆಯಿಂದ ಹೊರಗೆ ಬರಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾದ ಜನರು ಮಾಸ್ಕ್ ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಉಸಿರಾಟದ ಸಮಸ್ಯೆಗಳಿಂದ ನಗರದ ಹಲವಾರು ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.

ಇಡೀ ದೆಹಲಿ ಮಹಾನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳನ್ನು ಮಂಜು ಮತ್ತು ವಿಷಕಾರಿ ಹೊಗೆ ಆವರಿಸಿದ್ದು, ನೆಲಕ್ಕೆ ತೀರಾ ಹತ್ತಿರದಲ್ಲಿ ಗೂಡುಕಟ್ಟಿದಂತೆ ನಿಂತಿದೆ. ದೆಹಲಿ ನಗರ ಒಂದು ಗ್ಯಾಸ್ ಚೇಂಬರ್‌ ನಂತಾಗಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಮುಂದಿನ ಸೋಮವಾರದ ವರೆಗೂ ರಜೆ ಮುಂದುವರಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಮಂಜು ಮಿಶ್ರಿತ ಕಂದು ಹೊಗೆಯ ಕಾರಣದಿಂದ ದೆಹಲಿಯಲ್ಲಿ ರಸ್ತೆ ಸಂಚಾರವೂ ಕಷ್ಟಕರವಾಗಿದೆ. ಎಲ್ಲಾ ವಾಹನಗಳ ಚಾಲಕರು, ತಮ್ಮ ವಾಹನಗಳ ಹೆಡ್ ಲೈಟ್ ಹಾಕಿಕೊಂಡು ನಿಧಾನವಾಗಿ ವಾಹನ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲೂ ಹೊಗೆಯಿಂದ ಕೂಡಿದ ವಾತಾವರಣವಿದ್ದು, ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ಭಾರತೀಯ ವೈದ್ಯಕೀಯ ಸಂಸ್ಥೆಯವರು ದೆಹಲಿಯಲ್ಲಿ ‘ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ’ ಘೋಷಿಸಿದ್ದಾರೆ. ಇದೇ 19ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಹಾಪ್ ಮ್ಯಾರಾಥಾನ್ ಅಂದರೆ ದೂರ ನಡಿಗೆ ಸ್ಪರ್ಧೆಯನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.

ಹರಿಯಾಣ ಮತ್ತು ಪಂಜಾಬ್‌ ಗಳಲ್ಲಿ ರೈತರು ಗೋಧಿ, ಭತ್ತ ಇತ್ಯಾದಿ ಬೆಳೆಗಳ ಕಟಾವಿನ ನಂತರ ಉಳಿಯುವ ಕೂಳೆಗೆ ಬೆಂಕಿಯಿಡುತ್ತಾರೆ. ಅಲ್ಲಿಂದ ತೇಲಿ ಬರುವ ಹೊಗೆಯ ಮೋಡಗಳು ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಕಾರಣವಾಗಿವೆ. ಈ ರೀತಿ ಹೊಲ ಗದ್ದೆಗಳಲ್ಲಿನ ತ್ಯಾಜ್ಯಕ್ಕೆ ಬೆಂಕಿಯಿಡುವುದನ್ನು ತಪ್ಪಿಸಲು, ಶೀಘ್ರವೇ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲು ದೆಹಲಿ ಸಿಎಂ ಕೇಜ್ರಿವಾಲ್ ನಿರ್ಧರಿಸಿದ್ದಾರೆ.

ಈ ನಡುವೆ ದೆಹಲಿಯಲ್ಲಿನ ಹದಗೆಟ್ಟ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಸುಪ್ರೀಂಕೋರ್ಟಿನ ಹಸಿರು ಪೀಠ, ತನ್ನ ಸೂಚನೆಯಂತೆ ಹೆಲಿಕಾಪ್ಟರ್ ಬಳಸಿ ನೀರು ಸಿಂಪಡಿಸುವ ಕಾರ್ಯ ಏಕೆ ಮಾಡುತ್ತಿಲ್ಲ ಎಂದು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳನ್ನು ಪ್ರಶ್ನಿಸಿದೆ.

ಇಷ್ಟೆಲ್ಲಾ ಆಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಕುಳಿತಿದ್ದ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ತುಂಬಾ ತಡವಾಗಿ ಎಚ್ಚೆತ್ತ ಕೇಂದ್ರದ ಪರಿಸರ ಖಾತೆ ಸಚಿವ ಹರ್ಷವರ್ಧನ್,  ದೆಹಲಿಯಲ್ಲಿನ ಪರಿಸ್ಥಿತಿ ನಿಭಾಯಿಸಲು ಏನೆಲ್ಲಾ ಮಾಡಬೇಕು ಎಂಬುದನ್ನು ನಿರ್ಧರಿಸಿದ್ದು, ಆ ಕ್ರಮಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಹೇಳಿಕೆ ನೀಡಿದ್ದಾರೆ.  ದೆಹಲಿಯಲ್ಲಿನ ಪರಿಸ್ಥಿತಿ ಹೀಗೇ ಮುಂದುವರಿದರೆ, ಮಹಾನಗರದಲ್ಲಿ ಕಟ್ಟಡ ನಿರ್ಮಾಣ ಇತ್ಯಾದಿ ಧೂಳು ಉಂಟುಮಾಡುವ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಒಟ್ಟಿನಲ್ಲಿ, ದೇಶದ ರಾಜಧಾನಿಯ ಆರೋಗ್ಯ ಅನ್ನುವುದು, ಇಡೀ ದೇಶದ ಆರೋಗ್ಯವಿದ್ದಂತೆ. ಅಲ್ಲಿನ ಪರಿಸ್ಥಿತಿಯೇ ಹದಗೆಟ್ಟರೆ, ಅದು ಇಡೀ ದೇಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ, ಈ ವಿಚಾರವನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ದೇಶದ ಜನರ ದೌರ್ಭಾಗ್ಯ.ಸಂಬಂಧಿತ ಟ್ಯಾಗ್ಗಳು

Kannada News Karnataka ದೆಹಲಿ ಮಾಸ್ಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ