ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ

Kannada News

08-11-2017

ಬೆಂಗಳೂರು: ಐನೂರು ಮತ್ತು ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವುದನ್ನು ಖಂಡಿಸಿ ಜೆಡಿಯು ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ನಾಡಗೌಡ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು, ನೋಟುಗಳನ್ನು ಅಮಾನ್ಯಗೊಳಿಸಿ ದೇಶದ ಆರ್ಥಿಕತೆ ಕುಸಿಯಲು ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ ಎಂದು ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಾ.ಎಂ.ನಾಡಗೌಡ, ನೋಟು ಅಮಾನ್ಯೀಕರಣ ಆರ್ಥಿಕತೆಗೆ ಅಪ್ಪಳಿಸಿದ ಅತಿ ದೊಡ್ಡ ಸುನಾಮಿ. ಈ ಕ್ರಮ ಅತ್ಯಂತ ಕೆಟ್ಟ ತೀರ್ಮಾನ ಎಂದು ಆರೋಪಿಸಿದರು. ನೋಟು ಅಮಾನ್ಯೀಕರಣದ ನಂತರ ದೇಶದೆಲ್ಲೆಡೆ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು. ಹಲವು ಕೆಟ್ಟ ಬೆಳವಣಿಗೆಗೂ ಕಾರಣವಾಯಿತು. ಆದರೂ ತಾವೇ ಈ ದೇಶದ ಪ್ರಧಾನ ಸೇವಕರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಮೋದಿ ವಿರುದ್ಧ ಕಿಡಿಕಾರಿದರು.

ಪ್ರಧಾನಿ ಅವರು ಹೇಳಿದಂತೆ ಕಪ್ಪು ಹಣ, ಭಯೋತ್ಪಾದನೆ, ಕೋಟಾ ನೋಟಿನ ಹಾವಳಿ ಯಾವುದೂ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಪೂರ್ವ ತಯಾರಿ ಇಲ್ಲದ ಈ ಕ್ರಮ ತುಘಲಕ್ ಆಡಳಿತದ ನೀತಿಯಂತೆ ಎಂದು ಆರೋಪಿಸಿದರು. ಒಂದೆಡೆ ಕೃಷಿ ಉತ್ಪನ್ನ ಇಳಿಮುಖವಾಗಿದ್ದರೆ ಮತ್ತೊಂದೆಡೆ ಸಣ್ಣ ಕೈಗಾರಿಕೆಗಳು ಬೀದಿ ಪಾಲಾಗಿವೆ. ಸೇವಾವಲಯ ಸುಧಾರಿಸಿಕೊಳ್ಳಲಾಗದಷ್ಟು ಹಳ್ಳ ಹಿಡಿದಿದೆ ಎಂದು ಆಪಾದಿಸಿದರು. ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್, ಬೆಂಗಳೂರು ನಗರ ಸಂಚಾಲಕ ಕೆ.ಎಂ. ಪಾಲಾಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‍ ನಾರಾಯಣ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಜೆಡಿಯು ಡಾ.ಎಂ.ನಾಡಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ