'ಆರ್ಥಿಕ ಅರಾಜಕತೆಗೆ ಮೋದಿ ಕಾರಣ'

Kannada News

08-11-2017

ಬೆಂಗಳೂರು: ಗರಿಷ್ಟ ಮುಖ ಬೆಲೆಯ 1000 ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಅಪಮೌಲ್ಯಗೊಳಿಸಿದ್ದರಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆ ಮುಂಭಾಗದಿಂದ ಸ್ವತಂತ್ರ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಯಕರು ಮತ್ತು ಕಾರ್ಯಕರ್ತರು ನೋಟು ಅಮಾನ್ಯಗೊಳಿಸಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರಮೋದಿ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಸ್ವತಂತ್ರ ಉದ್ಯಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿ,ಮೋದಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

ವಿಜಯನಗರ, ಗೋವಿಂದರಾಜನಗರ, ಯಲಹಂಕ, ಸರ್ವಜ್ಞನಗರ, ಪುಲಿಕೇಶಿನಗರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿಯನ್ನು ಚಟ್ಟದ ಮೇಲೆರಿಸಿ ಪ್ರೀಡಂ ಪಾರ್ಕ್‍ವರೆಗೆ ಮೆರವಣಿಗೆಯಲ್ಲಿ  ಕರೆ ತರುವ ಮೂಲಕ ಪ್ರತಿಭಟನೆ ನಡೆಸಿದರು. ಸ್ವತಂತ್ರ ಉದ್ಯಾನವನದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ನಾಯಕರು, ಪ್ರಧಾನಿ ಮೋದಿ ಅವರು ನೋಟು ನಿಷೇಧದ ವಿಚಾರದಲ್ಲಿ ಕೈಗೊಂಡ ನಿರ್ಧಾರದಿಂದ ಇಡೀ ಆರ್ಥಿಕ ವ್ಯವಸ್ಥೆ ಹದಗೆಡಲು ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಆರಂಭದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಕೆ.ಸಿ.ವೇಣುಗೋಪಾಲ್ ಅವರು, ನೋಟು ಅಮಾನ್ಯದಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಅರಾಜಕತೆಗೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ದೂರಿದರು.

ಇಡೀ ದೇಶದಲ್ಲಿ ಜಿಡಿಸಿ ದರ ಇಳಿಮುಖವಾಗಿದೆ. ಆದರೆ, ಬಿಜೆಪಿ ಮಾತ್ರ ನೋಟು ಅಮಾನೀಕರಣದ ಒಂದು ವರ್ಷದ ಸಾಧನೆಯನ್ನು ದೊಡ್ಡ ಸಾಧನೆ ಎಂದು ಬಣ್ಣಿಸುತ್ತಿದೆ, ನೋಟು ಅಮಾನ್ಯೀಕರಣ ಸರ್ಜಿಕಲ್ ಸ್ಟ್ರೈಕ್ ಎಂದು ಮೋದಿ ಅವರೇ ಬಣ್ಣಿಸಿದರು. ಆದರೆ ಕಪ್ಪುಹಣ ವಿದೇಶದಿಂದ ವಾಪಸ್ ಬರಲಿಲ್ಲ. ಭಯೋತ್ಪಾದನೆ ತಗ್ಗಲಿಲ್ಲ ಎಂದು ಟೀಕಿಸಿದರು. ನೋಟು ನಿಷೇಧದ ಕ್ರಮದಿಂದಾಗಿ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾದರು. ಎಟಿಎಂಗಳ ಮುಂದೆ ಉದ್ದನೆ ಕ್ಯೂನಲ್ಲಿ ನಿಂತು ತಮ್ಮ ಹಣ ಪಡೆಯಲು ಪರದಾಡುವಂತಾಯಿತು ಎಂದು ಹೇಳಿದ ವೇಣುಗೋಪಾಲ್ ಅವರು, ನೋಟು ಅಮಾನ್ಯೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಕಪ್ಪುಹಣದ ದಂಧೆ ನಿಲ್ಲಿಸಲು ಮೋದಿ ಅವರಿಗೆ ಸಾಧ್ಯವಾಗಲಿಲ್ಲ. ಭಯೋತ್ಪಾದನೆಯನ್ನು ನಿಯಂತ್ರಿಸಲು ಮೋದಿ ಸರ್ಕಾರ ವಿಫಲವಾಯಿತು ಎಂದು ಆರೋಪಿಸಿದರು. 15,44 ಲಕ್ಷ ಕೋಟಿ ರೂ.ರದ್ದುಗೊಳಿಸಲಾಯಿತು. ಶೇ. 99 ರಷ್ಟು ಈ ಹಣ ಬ್ಯಾಂಕ್‍ಗೆ ಬಂದರೂ ಕೂಡಾ ಮೋದಿ ಅವರ ಉದ್ದೇಶ ಈಡೇರಲಿಲ್ಲ ಎಂದು ಆರೋಪಿಸಿದರು. ಕಪ್ಪು ಹಣವನ್ನು ಮಾಡುವವರಿಗೆ ಪ್ರಯೋಜನವಾಯಿತು ಎಂದ ಅವರು, ಕಳೆದ ವರ್ಷ ಶೇ. 2 ರಷ್ಟು ಜಿಡಿಪಿ ಕುಸಿತದಿಂದ ಮೂರು ಲಕ್ಷ ಕೋಟಿ ರೂ. ನಷ್ಟ ಉಂಟಾಯಿತು ಎಂದು ಹೇಳಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇಶ ಜಾಗತೀಕ ಮಟ್ಟದಲ್ಲಿ ಕೊನೆಯ ಸ್ಥಾನ ತಲುಪಬೇಕಾಗುತ್ತದೆ ಎಂದು ಎಚ್ಚರಿಸಿದರು. ಮೋದಿ ಅವರು ಹಿಟ್ಲರ್ ನಂತೆ  ವರ್ತಿಸುತ್ತಿದ್ದಾರೆ, ಅವರ ಸಂಪುಟದಲ್ಲಿರುವ ಸಚಿವರಿಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ಟೀಕಿಸಿದರು.

ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿದ್ದಕ್ಕಾಗಿ ನೋಬೆಲ್ ಪ್ರಶಸ್ತಿ ಏನಾದರೂ ನೀಡಿದ್ದೇ ಆದಲ್ಲಿ ಮೋದಿ ಅವರಿಗೆ ನೀಡಬೇಕು ಎಂದು ವ್ಯಂಗ್ಯವಾಡಿದರು. ನಾಗಪುರದ ಆರ್‍ಎಸ್‍ಎಸ್ ಕಛೇರಿಯಲ್ಲಿ ಪ್ರತಿವರ್ಷ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಎಷ್ಟು ಲಕ್ಷ ರೂ.ಗಳನ್ನು ಗುರುದಕ್ಷಿಣೆಯಾಗಿ ನೀಡಲಾಗುತ್ತಿದೆ ಎಂಬುದನ್ನು ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು. ಮೋದಿ ಆಡಳಿತ ಮುಂದುವರೆದರೆ ದೇಶದ ಏಕತೆ, ಸಮಗ್ರತೆ ಹಾಗೂ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ, ವಸತಿ ಸಚಿವ ಕೃಷ್ಣಪ್ಪ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಅಪಮೌಲ್ಯ ಗಾಂಧೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • viudqqugxe
  • hzikclvlzq