ಅಜ್ಜಿಯನ್ನೂ ಬಿಡದ ಸರಗಳ್ಳರು..

Kannada News

08-11-2017

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೊಲದೇವನಹಳ್ಳಿಯ ಕೆರೆಗುಡ್ಡದಮ್ಮ ಲೇಕ್ ವ್ಯೂ ಲೇಔಟ್‍ ನಲ್ಲಿ, ಬೈಕ್‍ ನಲ್ಲಿ ಬಂದ ಸರಗಳ್ಳರು ಮನೆಯ ಮುಂಭಾಗ ಕಸಗುಡಿಸುತ್ತಿದ್ದ ವೃದ್ಧೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.

ಪರಾರಿಯಾಗುವ ವೇಳೆ ಸರ ಕಳೆದುಕೊಂಡ ಮಹಿಳೆ ಸಿದ್ದಗಂಗಮ್ಮ ತನ್ನ ಕೈಯಲ್ಲಿದ್ದ ಪೊರೆಕೆಯಿಂದಲೇ ಬಾರಿಸಿದರಾದರೂ ಕ್ಷಣಾರ್ಧದಲ್ಲಿ ಕಳ್ಳರಿಬ್ಬರು ಬೈಕಿನಲ್ಲಿ ಎಸ್ಕೇಪ್ ಆಗಿದ್ದಾರೆ. ಕೆರೆಗುಡ್ಡದಹಳ್ಳಿಯ ಲೇಕ್ ವ್ಯೂವ್ ಲೇಔಟ್‍ನಲ್ಲಿ ಕಳೆದ ಗುರುವಾರ ನಡೆದಿರುವ ಸರಗಳ್ಳತನ ನಡೆದ ಈ ಸರಗಳವು ದೃಶ್ಯಾವಳಿಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿದ್ದಗಂಗಮ್ಮ ಅವರು ಬೆಳಗಿನ ಜಾವ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಸರಗಳ್ಳತನ ನಡೆದಿದೆ.

ಎಂದಿನಂತೆ ಬೆಳಗಿನ ಜಾವ ಸಿದ್ದಗಂಗಮ್ಮ ಅವರು ಮನೆಯ ಮುಂದೆ ಕಸ ಗುಡಿತ್ತಿದ್ದ ವೇಳೆ, ಬೈಕಿನಲ್ಲಿ ಬಂದ ಇಬ್ಬರು, ಸ್ವಲ್ಪ ಸಮಯ ನಿಂತು ಸುತ್ತಮುತ್ತ ನೋಡಿದ್ದಾರೆ. ಒಬ್ಬ ಬೈಕಿನಲ್ಲಿಯೇ ಕೂತಿದ್ದು, ಹಿಂಬದಿ ಸವಾರ ಕೆಳಗಡೆ ಇಳಿದಿದ್ದಾನೆ. ಇನ್ನೇನು ಸಿದ್ದಗಂಗಮ್ಮರ ಸರ ಕಿತ್ತುಕೊಳ್ಳುವಷ್ಟರಲ್ಲಿ ಅಲ್ಲಿಗೆ ಇನ್ನೊಬ್ಬ ಮಹಿಳೆ ಬಂದಿದ್ದಾರೆ. ಕೂಡಲೇ ಸರಗಳ್ಳ ತನ್ನ ಹಿಂದೆ ಸರಿದಿದ್ದಾನೆ. ಬಂದ ಮಹಿಳೆ ತಮ್ಮ ಮನೆಯತ್ತ ಸಾಗಿದ ತಕ್ಷಣ, ಹಿಂಬದಿ ಸವಾರ ಏನೋ ಕೇಳುವ ನೆಪದಲ್ಲಿ ಸಿದ್ದಗಂಗಮ್ಮರ ಹತ್ತಿರ ಬಂದಿದ್ದಾನೆ. ಮಾತನಾಡುತ್ತಾ ಕ್ಷಣಾರ್ಧದಲ್ಲಿ ಕತ್ತಿನಿಂದ ಸರ ಕಿತ್ತುಕೊಂಡು ಬೈಕಿನಲ್ಲಿ ಮಿಂಚಿನಂತೆ ಇಬ್ಬರೂ ಮಾಯವಾಗಿದ್ದಾರೆ.

ಸಿದ್ದಗಂಗಮ್ಮ ತಮ್ಮ ಕೈಯಲ್ಲಿದ್ದ ಪೊರಕೆಯಿಂದ ಕಳ್ಳನತ್ತ ಎಸೆದಿದ್ದಾರೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು, ಹಿಂಬದಿ ಸವಾರ ಹೆಲ್ಮೆಟ್ ಹಾಕಿಲ್ಲ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಸರಗಳ್ಳತನ ಸಿಸಿಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ