ನೇಕಾರರಿಗೂ ಸಾಲ ಮನ್ನಾ ಭಾಗ್ಯ

Kannada News

08-11-2017 351

ಬೆಂಗಳೂರು: ರೈತರಿಗೆ ಬೆಳೆ ಸಾಲ ಮನ್ನಾ ಮಾಡಿದ ಮಾದರಿಯಲ್ಲೇ, ನೇಕಾರರಿಗೂ 50,000 ರೂ. ವರೆಗಿನ ಸಾಲ ಮನ್ನಾ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮ್ಮೇಳನದ ನಂತರ, ಮಾತನಾಡಿದ ಸಿಎಂ, ಸರ್ಕಾರದ ಈ ತೀರ್ಮಾನದಿಂದ ಒಂಭತ್ತು ಸಾವಿರಕ್ಕೂ ಹೆಚ್ಚು ನೇಕಾರರಿಗೆ ಲಾಭವಾಗಲಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ 52 ಕೋಟಿ ರೂ ಹೊರೆ ಬೀಳಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಇನ್ನು ಕ್ಷೀರಭಾಗ್ಯ ಯೋಜನೆಯಲ್ಲಿ ಮೈಸೂರು ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ವಿತರಿಸುತ್ತಿರುವ ಚಾಕೋಲೇಟ್ ಹಾಗೂ ಏಲಕ್ಕಿ ಸ್ವಾದದ ಸುವಾಸಿತ ಹಾಲು ಕುರಿತ ಮಕ್ಕಳ ಅಭಿಪ್ರಾಯ ಪಡೆದು ಮುಂದೆ ವಾರಕ್ಕೆ ಐದು ದಿನ ವಿತರಿಸುತ್ತಿರುವ ಈ ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದರು.

ಅದಲ್ಲದೇ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 400 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಈವರೆಗೆ 320 ಕೋಟಿ ರೂ ವೆಚ್ಚವಾಗಿದೆ. ಶಾಸಕರ ಕಾರ್ಯಪಡೆ, ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ನಗರಾಭಿವೃದ್ಧಿ ಇಲಾಖೆಗೆ ಬಿಡುಗಡೆ ಮಾಡಿರುವ 110 ಕೋಟಿ ರೂ ಗಳ ಪೈಕಿ 59 ಕೋಟಿ ರೂ ವೆಚ್ಚವಾಗಿದೆ. ಉಳಿಕೆ ಮೊತ್ತದ ಸದ್ಬಳಕೆಗೆ ರೂಪು-ರೇಷೆ ಸಿದ್ಧಗೊಳ್ಳುತ್ತಿದೆ. ರಾಜ್ಯದಲ್ಲಿ ಮಳೆಯಾಗುವ ಮುನ್ನ ಅಂದರೆ ಆಗಸ್ಟ್ 14 ರ ಮುನ್ನ, 2000 ಟ್ಯಾಂಕರ್‍ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದೀಗ 87 ಟ್ಯಾಂಕರ್‍ ಗಳಲ್ಲಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಹಾಹಾಕಾರ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಬಣ್ಣಸಿದರು.

 ಸಂಬಂಧಿತ ಟ್ಯಾಗ್ಗಳು

Kannada News Karnataka ನೇಕಾರ ಕಂದಾಯ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ