‘ರಾಜ್ಯದಲ್ಲಿ ಚೆಕ್ ಪೋಸ್ಟ್ ಮುಚ್ಚಿಲ್ಲ ಯಾಕೆ’..?

Kannada News

07-11-2017

ಬೆಂಗಳೂರು: ವಾಹನಗಳಿಗೆ ವೇಗವರ್ಧಕವನ್ನು ಅಳವಡಿಸುವಂತೆ ಸರ್ಕಾರ ನೀಡಿದ ಆದೇಶದ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಇಂದು ಸಾರಿಗೆ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕಿ ಬಂದ್ ಮಾಡಿದ ಬೆಳವಣಿಗೆ ನಡೆದಿದೆ.

ವಾಹನ ಮಾಲೀಕರ ಸಂಘಟನೆಗಳ ಪ್ರಮುಖ ಷಣ್ಮುಗಪ್ಪ ಸೇರಿದಂತೆ ಹಲ ಸಂಘಟನೆಗಳ ನೂರಾರು ಮಂದಿ ಸಾರಿಗೆ ಆಯುಕ್ತರ ಕಛೇರಿಯನ್ನು ಬಂದ್ ಮಾಡಿದ್ದಲ್ಲದೆ, ವೇಗವರ್ಧಕ ಅಳವಡಿಸಬೇಕು ಎಂಬ ಸರ್ಕಾರದ ನಿರ್ಧಾರದ ಹಿಂದಿರುವ ಸಂಚನ್ನು ವಿರೋಧಿಸಿದರು.

ಇದೇ ರೀತಿ ಅತ್ತಿಬೆಲೆ, ಝಳಕಿ, ಹುಮ್ನಾಬಾದ್ ಸೇರಿದಂತೆ ರಾಜ್ಯದ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದರು. ಹಳೆ ವಾಹನಗಳಿಗೆ ವೇಗವರ್ಧಕ ಅಳವಡಿಸಬೇಕು ಎಂದು ಸರ್ಕಾರ ಹೇಳಿದ್ದರೆ ಸಾಕಿತ್ತು. ಆದರೆ ನಿರ್ದಿಷ್ಟ ಸಂಸ್ಥೆಗಳಿಂದಲೇ ವೇಗ ವರ್ಧಕವನ್ನು ಖರೀದಿ ಮಾಡಬೇಕು ಎಂದು ಹೇಳುತ್ತಿದೆ. ಸರ್ಕಾರ ಹೇಳಿದ ಸಂಸ್ಥೆಗಳಿಂದ ವೇಗ ವರ್ದಕವನ್ನು ಖರೀದಿ ಮಾಡಿದರೆ ಹದಿನೈದು ಸಾವಿರ ರೂಪಾಯಿ ತೆರಬೇಕು. ಆದರೆ ಅದೇ ಉಪಕರಣ ಹೊರಗೆ ಖರೀದಿ ಮಾಡಿದರೆ ಕೇವಲ ಮೂರು ಸಾವಿರ ರೂಪಾಯಿಗಳಿಗೆ ಲಭ್ಯವಾಗುತ್ತದೆ. ಆದರೆ ಹಾಗೆ ಹೊರಗೆ ಖರೀದಿ ಮಾಡಲು ಬಿಡದ ಸರ್ಕಾರದ ನಿಲುವಿಗೆ ಕಾರಣವೇನು..? ಎಂದು ಪ್ರಶ್ನಿಸಿದ್ದಾರೆ.

ವ್ಯಾಪಕ ಪ್ರಮಾಣದ ಕಿಕ್ ಬ್ಯಾಕ್ ಸಿಗುತ್ತಿರುವುದೇ ಇದಕ್ಕೆ ಕಾರಣ ಎಂದು ಕೂಗಾಡಿದ ಪ್ರತಿಭಟನಾಕಾರರು, ತಕ್ಷಣವೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಹಾಗೆಯೇ ದೇಶಾದ್ಯಂತ ಇರುವ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿದ್ದರೂ ಕರ್ನಾಟಕದಲ್ಲಿ ವಿವಿಧ ಚೆಕ್ ಪೋಸ್ಟ್ ಗಳು ಇನ್ನೂ ಮುಂದುವರಿದಿವೆ. ಅಷ್ಟೇ ಅಲ್ಲ, ನಿರಂತರವಾಗಿ ಸುಲಿಗೆ ಮಾಡುತ್ತಿವೆ ಎಂದರು.

ಇವುಗಳ ಸುಲಿಗೆಯಿಂದ ವಾಹನ ಮಾಲೀಕರು ಸುಸ್ತಾಗಿ ಹೋಗಿದ್ದಾರೆ. ದೇಶದ ಹಲವು ರಾಜ್ಯಗಳು ಚೆಕ್ ಪೊಸ್ಟ್ ಗಳನ್ನು ಬಂದ್ ಮಾಡಿರುವಾಗ ಕರ್ನಾಟಕದಲ್ಲಿ ಏಕೆ ಅದನ್ನು ಉಳಿಸಿಕೊಳ್ಳಲಾಗಿದೆ..?ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದರು. ಈ ಮಧ್ಯೆ ರಾಜ್ಯದ ಎಲ್ಲೆಡೆ ವಿಭಾಗೀಯ ಸಾರಿಗೆ ಕಛೇರಿಗಳಿಗೆ ವಾಹನ ಮಾಲೀಕರು,ನೌಕರರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವಲ್ಲದೆ ಸರ್ಕಾರದ ನೀತಿಯನ್ನು ಖಂಡಿಸಿದವು.


ಸಂಬಂಧಿತ ಟ್ಯಾಗ್ಗಳು

Kannada News Karnataka ಚೆಕ್ ಪೊಸ್ಟ್ ವೇಗವರ್ಧಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ