‘ಕೇಂದ್ರದ ಹಠದಿಂದ ಜನರಿಗೆ ಸಂಕಷ್ಟ’

Kannada News

07-11-2017

ಬೆಂಗಳೂರು: ಕೇಂದ್ರ ಸರ್ಕಾರ ಭಾರೀ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಬೆಳವಣಿಗೆಯಿಂದ ದೇಶ ಬಡ ರಾಷ್ಟ್ರಗಳ ಸಾಲಿಗೆ ಸೇರುತ್ತಿದೆ ಎಂದು ಆರೋಪಿಸಿ ಬುಧವಾರ ರಾಜ್ಯಾದ್ಯಂತ ಕರಾಳ ದಿನ ಆಚರಿಸಲು ಕೆಪಿಸಿಸಿ ನಿರ್ಧರಿಸಿದೆ. ರಾಜಧಾನಿ ಬೆಂಗಳೂರಿನ ಟೌನ್‍ಹಾಲ್ ಮುಂದೆ ಕೆಪಿಸಿಸಿ ಅಧ್ಯಕ್ಷರು,ಮಂತ್ರಿಗಳು,ಶಾಸಕರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟಗಳಲ್ಲಿ ಸಚಿವರು,ಶಾಸಕರು ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಐಸಿಸಿ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಹಮ್ಮಿಕೊಂಡಿರುವ ಈ ಪ್ರತಿಭಟನಾ ರ‍್ಯಾಲಿಯ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆಸಲು ನಿರ್ಧರಿಸಲಾಗಿದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತಿತರರ ಸಭೆಯನ್ನು ಒಂದು ದಿನಕ್ಕೆ ಮೊಟಕುಗೊಳಿಸಲಾಯಿತು. ಬುಧವಾರ ವಿಸ್ತರಣೆಯಾಗಬೇಕಿದ್ದ ಈ ಸಭೆಯನ್ನು ಮಂಗಳವಾರಕ್ಕೇ ಮೊಟಕು ಮಾಡಲಾಗಿದ್ದು, ನೋಟು ಬ್ಯಾನ್ ವಿರುದ್ಧ ಜನಜಾಗೃತಿ ಮೂಡಿಸಲು ಹೆಚ್ಚು ಆದ್ಯತೆ ನೀಡಬೇಕು ಎಂಬ ಹೈಕಮಾಂಡ್ ನಿಲುವಿನಂತೆ ಮುನ್ನಡೆಯಲು ಸರ್ಕಾರ ನಿರ್ಧರಿಸಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ನೋಟು ಬ್ಯಾನ್ ನಂತರ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಇವತ್ತು ದೇಶದ ಜಿಡಿಪಿ (ಒಟ್ಟಾರೆ ಆಂತರಿಕ ಉತ್ಪನ್ನ) ಪ್ರಮಾಣ ಕುಸಿದಿದ್ದು, ನೋಟು ಬ್ಯಾನ್ ಬೇಕಿರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರಿಂದ ಹಿಡಿದು ಹಲವರು ಟೀಕಿಸಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ಹಠಕ್ಕೆ ಬದ್ಧವಾದ ಪರಿಣಾಮವಾಗಿ ಜನ ಸಂಕಷ್ಟಕ್ಕೆ ಗುರಿಯಾಗುವಂತೆ ಆಗಿದೆ ಎಂದು ಆರೋಪಿಸಿದರು.

ಇವತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಭಾರತ ವಿಶ್ವದ ಬಡರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವುದು ಖಚಿತ ಎಂದು ಹೇಳಿದರು. ನೋಟು ಬ್ಯಾನ್ ಮಾಡುವ ಕೇಂದ್ರ ಸರ್ಕಾರದ ಮೂಲಕ ಉದ್ಯಮಗಳು ನೆಲಕಚ್ಚಿವೆ. ಉದ್ಯೋಗಗಳು ಕಡಿಮೆಯಾಗಿವೆ. ಆ ಮೂಲಕ ಜನ ಮಿತಿಮೀರಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸಮರ್ಥ ಆರ್ಥಿಕ ನೀತಿಯಲ್ಲ. ದಿವಾಳಿ ಎದ್ದ ಆರ್ಥಿಕ ನೀತಿ, ದೇಶದ ಉತ್ಪಾದನೆ ಸಾಮರ್ಥ್ಯವನ್ನು ಮತ್ತು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸದೆ ಹೋದರೆ ನಿಶ್ಚಿತವಾಗಿಯೂ ಅದು ಕೆಟ್ಟ ಆರ್ಥಿಕ ನೀತಿ ಎನ್ನದೇ ವಿಧಿಯಿಲ್ಲ ಎಂದರು.

ಇದೇ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನೋಟು ಬ್ಯಾನ್ ನಂತರ ದೇಶದ ಪರಿಸ್ಥಿತಿಯೇ ಕರಾಳವಾಗಿದೆ. ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಪೈಸೆ ಪೈಸೆಗೂ ಜನ ಪರದಾಡುವಂತಾಗಿದೆ ಎಂದು ಟೀಕಿಸಿದರು. ಇವತ್ತು ಯಾರನ್ನೇ ವೈಯಕ್ತಿಕವಾಗಿ ಕೇಳಿ ನೋಡಿ, ತಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ತನ್ನ ಅಜೆಂಡಾ ಪ್ರಕಾರ ತನ್ನನ್ನು ಸಮರ್ಥಿಸಿಕೊಳ್ಳಲು ಸಲ್ಲದ ಮಾರ್ಗ ಹಿಡಿದಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ರಾಜಧಾನಿ ಜನಜಾಗೃತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ