ಫೋನ್ ಕದ್ದಾಲಿಕೆ: ಯಾರು,ಎಲ್ಲಿ..?

Kannada News

07-11-2017

ಬೆಂಗಳೂರು: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು ಹಾಗೂ ಪತ್ರಕರ್ತರ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂಬ ವಿಷಯ ಇದೀಗ ವ್ಯಾಪಕ ಕೋಲಾಹಲಕ್ಕೆ ಕಾರಣವಾಗಿದೆ.

ಉನ್ನತ ಮೂಲಗಳ ಪ್ರಕಾರ, ತಮ್ಮ ದೂರವಾಣಿ ಕದ್ದಾಲಿಕೆಯಾಗುತ್ತಿದೆಯೇ ಎಂಬ ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ತಂತ್ರಜ್ಞರನ್ನು ಕರೆಸಿ ಪರಿಶೀಲಿಸಿದಾಗ, ನಿಮ್ಮ ಟೆಲಿಫೋನ್ ಟ್ಯಾಪ್ ಆಗುತ್ತಿರುವುದು ನಿಜ ಎಂದು ಅವರು ಎಂ.ಬಿ.ಪಾಟೀಲ್  ಅವರಿಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಪಕ್ಷಾತೀತವಾಗಿ ಹಲವು ನಾಯಕರು ಮಾತ್ರವಲ್ಲದೆ, ಉದ್ಯಮಿಗಳು ಹಾಗೂ ಪತ್ರಕರ್ತರ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿದೆ.

ಸಚಿವ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಬೇಕು ಎಂಬ ಹೋರಾಟದ ಮುಂಚೂಣಿಯಲ್ಲಿರುವುದರಿಂದ ಹಲವರು, ಈ ವಿಷಯದಲ್ಲಿ ಆತಂಕಿತರಾಗಿದ್ದಾರೆ ಎಂಬುದು ರಹಸ್ಯವೇನೂ ಆಗಿ ಉಳಿದಿಲ್ಲ. ಹೀಗೆ ಆತಂಕಗೊಂಡವರು ತಾವು ಅಧಿಕಾರದಲ್ಲಿದ್ದಾಗ ಚೈನಾ ಮೂಲದ ಕಂಪನಿಯೊಂದರ ಮೂಲಕ ಟೆಲಿಫೋನ್ ಕದ್ದಾಲಿಸುವ ವ್ಯವಸ್ಥೆ ಇರುವ ಎರಡು ವಾಹನಗಳನ್ನು ತರಿಸಿಕೊಂಡಿದ್ದರು ಎಂದು ಆಗ ಭಾರೀ ಸುದ್ದಿಯಾಗಿತ್ತು.

ಆದರೆ ಅವರು ಅಧಿಕಾರದಿಂದ ಕೆಳಗಿಳಿದ ನಂತರ ಈ ವಿಷಯದಲ್ಲಿ ಎದ್ದಿದ್ದ ದೂರುಗಳು ಕ್ಷೀಣವಾಗಿದ್ದವು. ಆದರೆ ಇದೀಗ ಅವರೇ ಎಂ.ಬಿ.ಪಾಟೀಲರ ದೂರವಾಣಿ ಕರೆಗಳನ್ನಲ್ಲದೆ ಉದ್ಯಮಿಗಳು ಹಾಗೂ ಅನೇಕ ಪತ್ರಕರ್ತರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ ಎಂಬ ಅನುಮಾನ ವ್ಯಾಪಕವಾಗಿದೆ. ಈ ಮಧ್ಯೆ ರಾಜ್ಯ ಸಚಿವ ಸಂಪುಟದ ಹಲವು ಸಚಿವರು ಮಾತ್ರವಲ್ಲದೇ ವಿರೋಧ ಪಕ್ಷದ ಹಲವು ನಾಯಕರು ಕೂಡಾ ತಮ್ಮ ದೂರವಾಣಿ ಕರೆಗಳು ಕದ್ದಾಲಿಸಲ್ಪಡುತ್ತಿವೆ ಎಂದು ದೂರತೊಡಗಿದ್ದು ಇದರಿಂದಾಗಿ ಪರಿಸ್ಥಿತಿ ಆಯೋಮಯವಾಗಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕರೆಗಳು, ಹಾಗೂ ಆಯ್ದ ಉದ್ಯಮಿಗಳು, ಪತ್ರಕರ್ತರ ದೂರವಾಣಿ ಕರೆಗಳು ಕದ್ದಾಲಿಕೆಯಗುತ್ತಿರುವ ಕುರಿತು ದೂರು ಕೇಳಿ ಬರತೊಡಗಿದ್ದರು ಇದನ್ನು ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಸಂಸ್ಥಗಳ ಮೂಲಕ ಮಾಡಿಸುತ್ತಿದೆಯೋ?ರಾಜ್ಯ ಸರ್ಕಾರ ತನ್ನ ಅದೀನ ಸಂಸ್ಥೆಗಳಿಂದ ಮಾಡಿಸುತ್ತಿದೆಯೋ?ಎಂಬ ಬಗ್ಗೆ ಅನುಮಾನಗಳು ಕೇಳಿ ಬರತೊಡಗಿವೆ. ಹಿರಿಯ ನಾಯಕರೊಬ್ಬರ ಬಳಿ ಈ ಹಿಂದಿದ್ದ ಚೈನಾದ ವಾಹನದಿಂದ ಕೆಲವರು ದೂರವಣಿ ಕರೆಗಳು ಕದ್ದಾಲಿಸಲ್ಪಡುತ್ತಿವೆ ಎಂಬ ಮಾತು ಕೂಡಾ ಇದರ ಮಧ್ಯೆ  ಸೇರಿಕೊಂಡು ಭಾರೀ ಕೋಲಾಹಲ ಸೃಷ್ಟಿ ಆಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕದ್ದಾಲಿಕೆ ತಂತ್ರಜ್ಞ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ