ಭರ್ಜರಿ ಪ್ರಚಾರಕ್ಕೆ ಜೆಡಿಎಸ್ ರಣಕಹಳೆ...

Kannada News

07-11-2017

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಲು ಮುಂದಾಗಿದ್ದು, ಜೆಡಿಎಸ್ ಪರ ಬಿರುಸಿನ ಪ್ರಚಾರ ನಡೆಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ  ಹೈಟೆಕ್ ವ್ಯವಸ್ಥೆಯುಳ್ಳ ‘ಕರ್ನಾಟಕ ವಿಕಾಸ ವಾಹಿನಿ’ ವಾಹನದ ಸಂಚಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ಅವರು, ಅಧಿಕೃತವಾಗಿ ಚಾಲನೆ ನೀಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಈಡೇರಿಸುವ ಭರವಸೆಗಳನ್ನೊಳಗೊಂಡ ಘೋಷ ವಾಕ್ಯಗಳೊಂದಿಗೆ ವಿಕಾಸ ವಾಹಿನಿ ವಾಹನ ರಾರಾಜಿಸುತ್ತಿದೆ. ಬಲೂನ್ ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಜೆಡಿಎಸ್ ವಿಕಾಸ ವಾಹಿನಿ ವಾಹನಕ್ಕೆ ಚಾಲನೆ ನೀಡಿದರು, ಈ ವೇಳೆ ಕುಮಾರಸ್ವಾಮಿಯವರ ಪತ್ನಿ ಅನಿತಾ ಜೊತೆಗಿದ್ದರು.

ಚಾಮುಂಡಿ ಬೆಟ್ಟದಲ್ಲಿ, ಚಾಮುಂಡೇಶ್ವರಿ ಪೂಜೆ ನಂತರ ಮಾತನಾಡಿದ ಕುಮಾರ ಸ್ವಾಮಿ, ಜೆಡಿಎಸ್‌ನದ್ದು ಯಾವುದೇ ಮಿಷನ್ ಇಲ್ಲ, ಈ ಬಾರಿ ಅಧಿಕಾರಕ್ಕೆ ಬರೋದೆ ನಮ್ಮ ಗುರಿ ಎಂದರು. ಕುಮಾರ ಪರ್ವ ಮೂಲಕ ನಾವು ಯಾವುದೇ ಪಕ್ಷಗಳಿಗೆ ಸಂದೇಶ ನೀಡಬೇಕಿಲ್ಲ. ನಾನು ಸಂದೇಶ ನೀಡಬೇಕಿರುವುದು ರಾಜ್ಯದ ಜನರಿಗೆ, ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡಲಿದ್ದೇವೆ ಎಂದಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲಿಸಬೇಕು ಎಂದರು.

ಮೊದಲು ಜೆಡಿಎಸ್ ಇತರೆ ಸಾಲಿನಲ್ಲಿ ಇತ್ತು, ಆದ್ರೆ ಸಮೀಕ್ಷೆಗಳಲ್ಲಿ ಜೆಡಿಎಸ್ ಸಂಖ್ಯೆ 60ಕ್ಕೆ ಏರಿದೆ, ಅದನ್ನು 113ಕ್ಕೆ ಏರಿಸುವುದು ನನ್ನ ಧ್ಯೇಯ, ಈ ಕಾರಣಕ್ಕಾಗಿಯೇ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದಲ್ಲದೇ ರೆಬೆಲ್ ಶಾಸಕರು ನನಗೆ ಸವಾಲೇ ಅಲ್ಲ, ಆ ಕ್ಷೇತ್ರದಲ್ಲಿ ಜನರೇ ನನಗೆ ದೊಡ್ಡ ಗೆಲುವು ತಂದು ಕೊಡ್ತಾರೆ, ಕೊನೆ ಕ್ಷಣಕ್ಕೆ ಪಕ್ಷಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಹಾಕಲ್ಲ, ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ಕೊಡಲ್ಲ ಎಂದ ಅವರು, ಯಾರೊಂದಿಗೂ ಹೊಂದಾಣಿಕೆ ಇಲ್ಲ, ಏಕಾಂಗಿಯಾಗಿ ರಾಜ್ಯಾದ್ಯಂತ ಸ್ಪರ್ಧಿಸುವುದಾಗಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಜನರಿಗೆ ವಿಕಾಸ ವಾಹಿನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ