‘ಬೆಂಗಳೂರು ಸಿರಿಧಾನ್ಯಗಳ ರಾಜಧಾನಿ’

Kannada News

06-11-2017

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಬೆಂಗಳೂರು ಇದೀಗ ಸಾವಯವ ಹಾಗೂ ಸಿರಿಧಾನ್ಯಗಳ ರಾಜಧಾನಿಯೂ ಆಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಬರುವ ಜನವರಿ 19ರಿಂದ 21ರವರೆಗೆ ನಗರದಲ್ಲಿ ನಡೆಯುವ ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಿದ್ಧತೆ ಹಾಗೂ ವೆಬ್‌ ಸೈಟನ್ನು ರಾಗಿ ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಐ.ಟಿ. ಕ್ಷೇತ್ರದಲ್ಲಿ ಮಾತ್ರವಲ್ಲ ಸಿರಿಧಾನ್ಯ ಆರೋಗ್ಯಕರ ಆಹಾರ ಪದಾರ್ಥ ತಲುಪಿಸುವಲ್ಲಿಯೂ ಬೆಂಗಳೂರು ರಾಜಧಾನಿಯೇ ಆಗುತ್ತದೆ ಎಂದರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾವಯವ ಮತ್ತು ಸಿರಿಧಾನ್ಯ ಕ್ರಾಂತಿಯನ್ನು ಕೊಂಡೊಯ್ಯಲು ಕರ್ನಾಟಕವೇ ಅಡಿಪಾಯವಾಗಿದ್ದು, ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅಂತಾರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ ನಡೆಸಲಾಗುವುದು ಎಂದರು.

ಬೇರೆ ಎಲ್ಲಾ ರಾಜ್ಯಗಳಿಗಿಂತಲೂ ಕರ್ನಾಟಕ ಸರ್ಕಾರ, ಸಾವಯವ ಮತ್ತು ಸಿರಿಧಾನ್ಯ ಉತ್ಪಾದನೆಗೆ ಹೆಚ್ಚಿನ ಮಹತ್ವವನ್ನು ನೀಡಿ, ಕಳೆದ ಎರಡು ಮೂರು ವರ್ಷಗಳಲ್ಲಿ ಆಂದೋಲನದ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಂಡು ಬರುತ್ತಿದೆ ಎಂದು ಹೇಳಿದರು. ಸಾವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಉತ್ತೇಜಿಸಲು ಮಾತ್ರವಲ್ಲ ಅವರ ಬೆಳೆಗೆ ಮಾರುಕಟ್ಟೆ ಒದಗಿಸಲು ಮತ್ತು ಸಿರಿಧಾನ್ಯ ಆಹಾರ ಪದಾರ್ಥ ಉತ್ಪಾದನೆಯನ್ನು ಗ್ರಾಹಕರ ಬಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ರಾಜ್ಯ ಮಾತ್ರವೇ ಹೆಚ್ಚಿನ ಮಟ್ಟದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ