'ನನ್ನ ಬದುಕಿನ 2ನೇ ಹೋರಾಟ ಆರಂಭ'

Kannada News

06-11-2017

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ನ ಚುನಾವಣಾ ಪ್ರಚಾರ ಯಾತ್ರೆ ನಾಳೆಯಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಜೆಡಿಎಸ್ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಕರ್ನಾಟಕ ವಿಕಾಸ ವಾಹಿನಿ ಬಸ್ ಮೂಲಕ ಚುನಾವಣಾ ಪ್ರಚಾರದ ಯಾತ್ರೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳಲಿದ್ದಾರೆ.

ನಾಳೆ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲಿಂಗದೇವರ ಕೊಪ್ಪಲಿನ ಮೈದಾನದಲ್ಲಿ ಆಯೋಜಿಸಲಿರುವ ಕುಮಾರ ಪರ್ವ-2018 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಮೈಸೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾಳೆ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ ಪರ್ವ ಹೆಸರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಆಯೋಜಿಸಲಾಗಿದೆ.

ಇನ್ನು ಈ ಕುರಿತಂತೆ ಹಾಸನದ ಹರದನಹಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ನಾಳೆಯಿಂದ ನನ್ನ ಬದುಕಿನ 2 ನೇ ಹೋರಾಟ ಆರಂಭವಾಗಲಿದೆ. ಚಾಮುಂಡೇಶ್ವರಿ ‌ಕ್ಷೇತ್ರದಿಂದ ‌ವಿಕಾಸ ಯಾತ್ರೆ ಆರಂಭಿಸಲಿದ್ದೇನೆ, ಇದು ರಾಜ್ಯವ್ಯಾಪಿ ಮುಂದುವರಿಯಲಿದ್ದು, ಜೆಡಿಎಸ್ ಬಲ ಏನು ಅನ್ನೋದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತೋರಿಸುತ್ತೇನೆ, ಮುಂದಿನ ಚುನಾವಣೆಯಲ್ಲಿ ನಾಡಿನ‌ ಜನ‌ ಜೆಡಿಎಸ್ ಬೆಂಬಲಿಸಲಿದ್ದಾರೆ, ಜೆಡಿಎಸ್ ಸ್ವತಂತ್ರ ಬಲದಿಂದ ಅಧಿಕಾರಕ್ಕೆ ಬರೋ ಸಂಪೂರ್ಣ ವಿಶ್ವಾಸವಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ವಿಕಾಸ ವಾಹಿನಿ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ