ಬಿಜೆಪಿಗೆ ಮುಖ ಮಾಡಿದ್ದಾರಾ: ಇಬ್ಬರು ಕೈ ನಾಯಕರು...?

Kannada News

06-11-2017 1234

ಬೆಂಗಳೂರು: ಕಾಂಗ್ರೆಸ್‍ನಲ್ಲಿನ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿರುವ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಸಧ್ಯದಲ್ಲೇ ಬಿಜೆಪಿ ಪಾಳೆಯ ಸೇರಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜಧಾನಿ ಬೆಂಗಳೂರಿನ ಬಿಜೆಪಿ ನಾಯಕರನ್ನು ನಿಯಂತ್ರಿಸಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಯಡಿಯೂರಪ್ಪ ಕಾರ್ಯತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‍ನ ಅಪ್ಪ ಮಕ್ಕಳನ್ನು ಪಕ್ಷಕ್ಕೆ ಸೇರಿಸಿಕೊಂಡು ಸಂಘಟನೆಯನ್ನು ಬಲಪಡಿಸಲು ಆಲೋಚನೆ ನಡೆಸಿದ್ದಾರೆ. ಬಿಜೆಪಿಯ ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು, ಈಗಾಗಲೇ ಬಿಜೆಪಿ ಸೇರುವ ಸಂಬಂಧ ಉಭಯತ್ರರೂ ಕಮಲ ಪಾಳೆಯದ ನಾಯಕರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮಾರ್ಚ್ ವೇಳೆಗೆ ಕಮಲ ಪಾಳೆಯಕ್ಕೆ ಸೇರಲು ಉದ್ದೇಶಿಸಿದ್ದಾರೆ.

ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಬೇಕೆಂದರೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಜೊತೆ ಈ ಇಬ್ಬರು ನಾಯಕರು ಬಿಜೆಪಿ ಸೇರುವುದು ಸೂಕ್ತ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.

ಈ ಇಬ್ಬರೂ ಮುಖಂಡರು ಕಮಲ ಪಾಳೆಯ ಸೇರಲು ಉತ್ಸುಕತೆ ತೋರಿದ್ದು, ಮಾರ್ಚ್ ತನಕ ಕಾಲಾವಕಾಶ ನೀಡುವಂತೆ ಯಡಿಯೂರಪ್ಪ ಅವರಿಗೆ ಸಮಯ ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಮುಂದಿನ ವಿಧಾನಸಭಾ ಚುನಾವಣೆಯ ನಂತರ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಬೆಂಗಳೂರಿನ ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಇಪ್ಪತ್ತರಿಂದ ಇಪ್ಪತ್ತೆರಡು ಸೀಟುಗಳನ್ನು ಗೆಲ್ಲಬೇಕು ಎಂದು ಬಿಜೆಪಿ ನಾಯಕರು ಬಯಸಿದ್ದು, ಇದಕ್ಕೆ ಪೂರಕವಾಗಿ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರನ್ನು ಸೆಳೆಯಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಪಕ್ಷಕ್ಕೆ ಬಲವಿದ್ದರೂ ಆ ಶಕ್ತಿ ಮತ್ತಷ್ಟು ಹೆಚ್ಚಬೇಕೆಂದರೆ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಬಿಜೆಪಿಗೆ ಬರಬೇಕು ಎಂದು ಯಡಿಯೂರಪ್ಪ ಈಗಾಗಲೇ ವರಿಷ್ಟರಿಗೆ ವಿವರಿಸಿದ್ದು, ಅವರು ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಉಭಯತ್ರರ ಜೊತೆ ಮಾತುಕತೆ ನಡೆಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರನ್ನು ಬಿಜೆಪಿಗೆ ಸೆಳೆಯುವ ಯತ್ನದ ಹಿಂದೆ, ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಮಟ್ಟ ಹಾಕುವ ಲೆಕ್ಕಾಚಾರ ಯಡಿಯೂರಪ್ಪ ಅವರಲ್ಲಿದೆ.

ರಾಜಧಾನಿಯ ಮೇಲೆ ಏಕಸ್ವಾಮ್ಯ ಸಾಧಿಸುವ ಪ್ರಮುಖ ನಾಯಕರ ಯತ್ನಕ್ಕೆ ಹೊಡೆತ ನೀಡಲು ಬಯಸಿರುವ ಯಡಿಯೂರಪ್ಪ ಅವರು ಇದೇ ನಿಟ್ಟಿನಲ್ಲಿ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರನ್ನು ಸೆಳೆಯಲು ಮುಂದಾಗಿದ್ದಾರೆ. ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಈ ಇಬ್ಬರಿಂದ ಸಾಧ್ಯ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಸಹಜವಾಗಿಯೇ ಈ ಲೆಕ್ಕಾಚಾರ ಕಮಲ ಪಾಳೆಯದ ಕೆಲ ನಾಯಕರ ನಿದ್ದೆಗೆಡಿಸಿರುವುದು ಮಾತ್ರ ನಿಜ.ಸಂಬಂಧಿತ ಟ್ಯಾಗ್ಗಳು

Kannada News Karnataka ವಸತಿ ಸಚಿವ ರಾಜಧಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ