ಅಖಾಡಕ್ಕೆ ರಾಜಕೀಯ ಯಾತ್ರೆಗಳು..

Kannada News

04-11-2017

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ಪ್ರತಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ 'ಜನಾಶೀರ್ವಾದ' ಯಾತ್ರೆ ನಡೆಸಲು ನಿರ್ಧರಿಸಿದ್ದರೆ, ಜೆಡಿಎಸ್ ಹಾಗೂ ಕಾಂಗ್ರೆಸ್​ನಿಂದ ಮತ್ತೆರಡು ಪ್ರತ್ಯೇಕ ಯಾತ್ರೆಗಳು ಆಯೋಜನೆಗೆ ಸಿದ್ಧವಾಗುತ್ತಿವೆ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಯಾತ್ರೆಗಳ ಸರಣಿ ಮತದಾರರ ಮನೆ ಬಾಗಿಲಿಗೆ ಬರಲಿವೆ.

ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲು ನಿರ್ಧರಿಸಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ನ.7ರಂದು ಜೆಡಿಎಸ್​ನ ‘ಕುಮಾರಪರ್ವ’ ಯಾತ್ರೆ ಆರಂಭವಾಗಲಿದೆ. ಇನ್ನೊಂದೆಡೆ ಡಿ.15ರಂದು ಆರಂಭವಾಗುವ ಸಿದ್ದರಾಮಯ್ಯ ಅವರ ‘ಜನಾಶೀರ್ವಾದ’ ಯಾತ್ರೆ ಜ.15ಕ್ಕೆ ಅಂತ್ಯವಾಗುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಇನ್ನೊಂದು ಯಾತ್ರೆ ಶುರುವಾಗಲಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನ.7ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಸಭೆ ನಡೆಯಲಿದ್ದು, ಸಭೆಗೂ ಮುನ್ನ ದೇವೇಗೌಡರ ಕುಟುಂಬ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಿದೆ. ನಂತರ ನಡೆಯುವ ಸಮಾವೇಶದ ಬಳಿಕ ಕುಮಾರಸ್ವಾಮಿ ಯಾತ್ರೆಗಾಗಿ ಸಿದ್ಧಗೊಂಡಿರುವ ‘ಕರ್ನಾಟಕ ವಿಕಾಸ ವಾಹಿನಿ’ ಹೆಸರಿನ ವಿಶೇಷ ಬಸ್ ಏರಿ ಪ್ರವಾಸ ತೆರಳಲಿದ್ದಾರೆ.

ಈ ಎರಡೂ ಯಾತ್ರೆಗೆ ಸೆಡ್ಡು ಹೊಡೆಯಲು ಸಿಎಂ ಸಿದ್ದರಾಮಯ್ಯ ‘ಜನಾಶೀರ್ವಾದ ಯಾತ್ರೆ’ ನಡೆಸುತ್ತಿದ್ದಾರೆ. ಸಿಎಂ ಅಥವಾ ಸರ್ಕಾರದಿಂದ ನಡೆಯುವ ಈ ಯಾತ್ರೆ ಅಂತ್ಯವಾಗುತ್ತಿದ್ದಂತೆ ಪರಮೇಶ್ವರ್ ನೇತೃತ್ವದಲ್ಲಿ ಪ್ರತ್ಯೇಕ ಚುನಾವಣಾ ಯಾತ್ರೆ ನಡೆಯಲಿದೆ. ಪರಮೇಶ್ವರ್, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ