ಆಪತ್ಬಾಂಧವ ‘ಬಸ್ ಮಿತ್ರ’

Kannada News

04-11-2017

ಬೆಂಗಳೂರು: ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವ “ ಬಸ್ ಮಿತ್ರ “ ಬೊಲೇರೋ ವಾಹನಗಳ ಸೇವೆಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಚಾಲನೆ ನೀಡಿದರು.

ಅಪಘಾತಗಳು ಸಂಭವಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ತ್ವರಿತವಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದೆ. ಅಮೂಲ್ಯ ಜೀವ ರಕ್ಷಿಸುವ ಸದುದ್ದೇಶಕ್ಕಾಗಿ 45 ‘ಬಸ್ ಮಿತ್ರ’ ವಾಹನಗಳನ್ನು 3.52 ಕೋಟಿ ರೂ ವೆಚ್ಚದಲ್ಲಿ ಖರೀದಿಸಿ ನಿಗಮದ 15 ವಿಭಾಗಗಳಿಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ, ಚಾಮರಾಜನಗರ, ಪುತ್ತೂರು, ಮೈರೂಸು ಗ್ರಾಮಾಂತರ, ಚಿಕ್ಕಮಗಳೂರು ವಿಭಾಗಗಳಿಗೆ ತಲಾ 3, ರಾಮನಗರ, ಹಾಸನ, ತುಮಕೂರು, ಕೋಲಾರ, ಮಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ವಿಭಾಗಗಳಲ್ಲಿ ತಲಾ ಎರಡು ವಾಹನಗಳನ್ನು ನಿಯೋಜಿಸಲಾಗಿದೆ.

ಅಪಘಾತಗಳಲ್ಲಿ ಮರಣ ಹೊಂದಿದ ಪ್ರಯಾಣಿಕರ ವಾರಸುದಾರರಿಗೆ 3 ಲಕ್ಷ ರೂ, ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತಿದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಅಪಘಾತ ಪರಿಹಾರ ಕಾರ್ಯಗಳನ್ನು ಕೈಗೊಂಡು ಅಪಘಾತಕ್ಕೊಳಗಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಹತ್ತಿರದ ಕಾರ್ಯಾಗಾರಗಳಿಗೆ ಸಾಗಿಸುವ ಸಲುವಾಗಿ ವಿಶೇಷ ಪರಿಹಾರ ಕಾರ್ಯ ವಾಹನಗಳನ್ನು ಸಹ ನಿಯೋಜಿಸಲಾಗುತ್ತಿದೆ ಎಂದರು.

‘’ಗೋಲ್ಡನ್ ಅವರ್ ಟ್ರಸ್ಟ್’’ ಮತ್ತು ‘’ಭಾರತೀಯ ರೆಡ್ ಕ್ರಾಸ್ ಸಂಸ್ಥೆ’’ ಸಹಯೋಗದಲ್ಲಿ  ಚಾಲನಾ ಸಿಬ್ಬಂದಿಗಳಿಗೆ ಹಾಗೂ ಪ್ರಯಾಣಿಕರಿಗೆ ಅಪಘಾತವಾದ ತುರ್ತು ಸಮಯದಲ್ಲಿ ಸ್ಥಳದಲ್ಲಿಯೇ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಕ್ಷಣದಲ್ಲಿಯೇ ‘ಪ್ರಥಮ ಸಹಾಯ’ ಅಥವಾ ‘ಪ್ರಥಮ ಚಿಕಿತ್ಸೆ’ ನೀಡಲು ತರಬೇತಿ ಕಾರ್ಯಗಾರ ಸಹ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ