ವೈದ್ಯರಿಗೆ ರೋಗಿಗಳ ಹಿಡಿ ಶಾಪ..

Kannada News

03-11-2017

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ ಉದ್ದೇಶಿತ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ, ರಾಜ್ಯದೆಲ್ಲೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ರೋಗಿಗಳು ತೀವ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾಗಿರುವ ಪ್ರತಿಭಟನೆ ಶನಿವಾರ 8 ಗಂಟೆಗೆ ಕೊನೆಗೊಳ್ಳಲಿದ್ದು, ಇದರಿಂದ ಡೆಂಘಿ, ವೈರಲ್ ಜ್ವರ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವವರು ತೊಂದರೆಗೀಡಾದರು.

ಎಲ್ಲಾ ಆಸ್ಪತ್ರೆಗಳ ಮುಂಭಾಗ ಹೊರ ರೋಗ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿರುವ ತೀರ್ಮಾನದ ವಿರುದ್ಧ ಒಂದು ದಿನದ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ನಾಮ ಫಲಕಗಳನ್ನು ಹಾಕಲಾಗಿತ್ತು.

ರಾಜ್ಯದಲ್ಲಿ ಸುಮಾರು 45 ಸಾವಿರ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳು, ಸಣ್ಣ ಕ್ಲಿನಿಕ್‍ಗಳು, ರೋಗ ಪತ್ತೆ ಕೇಂದ್ರಗಳ ಸೇವೆ ಸ್ಥಗಿತಗೊಂಡಿತ್ತು. ವೈದ್ಯಕೀಯ ಸೇವೆ ಸ್ಥಗಿತಗೊಂಡ ಪರಿಣಾಮ ರೋಗಿಗಳು ವೈದ್ಯರಿಗೆ ಶಪಿಸುತ್ತಾ ವಾಪಸ್ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂದನಿಂತೆ ಕಾರ್ಯನಿರ್ವಹಿಸುತ್ತಿವೆ. ಜನ ಸಾಮಾನ್ಯರಿಗೆ ತೊಂದರೆ ಎದುರಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಉದ್ದೇಶಿತ ಮಸೂದೆ, ಪ್ರತಿ ಜಿಲ್ಲೆಯಲ್ಲಿ ಪರಿಹಾರ ಘಟಕ ಸ್ಥಾಪನೆಗೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ನಿಗದಿಪಡಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡುವುದಲ್ಲದೇ, ತಪ್ಪು ಚಿಕಿತ್ಸೆಯಿಂದಾಗಿ ರೋಗಿ ಮೃತಪಟ್ಟಲ್ಲಿ ಸಂಬಂಧಿಸಿದ ವೈದ್ಯರಿಗೆ 5 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ತಪ್ಪು ಚಿಕಿತ್ಸೆಗಾಗಿ ರೋಗಿಗಳಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಅಂಶಗಳನ್ನು ಒಳಗೊಂಡಿದೆ.

ಆದರೆ ಪ್ರತಿಭಟನಾಕಾರರು ಮಸೂದೆಯ ವ್ಯಾಪ್ತಿಗೆ ಸರ್ಕಾರಿ ವೈದ್ಯರನ್ನು ಒಳಪಡಿಸಬೇಕು, ಚಿಕಿತ್ಸಾ ದರ ನಿಗದಿಪಡಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶವಿರಬೇಕು ಹಾಗೂ ರೋಗಿಗಳಿಗೆ ನೀಡುವ ಪರಿಹಾರಕ್ಕೆ ಮಿತಿ ಇರಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡಸಲಾಗುತ್ತಿದೆ.

ಮೈಸೂರಿನ ಜೆ.ಕೆ ಮೈದಾನದಲ್ಲಿ 120 ಖಾಸಗಿ ಆಸ್ಪತ್ರೆಗಳ 2 ಸಾವಿರ ವೈದ್ಯರು ಮೌನ ಪ್ರತಿಭಟನೆ ನಡೆಸಿದರು. ಬೆಂಗಳೂರು ಗ್ರಾಮಾಂತರದಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳನ್ನು ಬಂದ್ ಮಾಡಲಾಗಿತ್ತು. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲೂಕುಗಳಲ್ಲಿ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ನಡೆಸಿದರು.

ಕೊಪ್ಪಳದ ಗಂಗಾವತಿ, ಕುಷ್ಟಗಿ, ಯಲಬುರ್ಗಾ ಹಾಗೂ ಗದಗದ ಶಿರಹಟ್ಟಿ, ಮುಂಡರಗಿ, ರೋಣ, ಗಜೇಂದ್ರಗಢ, ನರಗುಂದ ತಾಲೂಕುಗಳ 52 ಆಸತ್ರೆಗಳು ಮತ್ತು ನರ್ಸಿಂಗ್ ಹೋಂ ಸೇರಿದಂತೆ 572 ಆಸ್ಪತ್ರೆಗಳಲ್ಲಿ ಸೇವೆ ಅಲಭ್ಯವಾಗಿದೆ.

ದಾವಣಗೆರೆಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ರಜೆಯನ್ನು ರದ್ದುಗೊಳಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿರುವ 45 ಸಾವಿರ ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಬಿ.ವೀರಣ್ಣ ತಿಳಿಸಿದ್ದಾರೆ.

ಈ ಮಧ್ಯೆ, ಮಿತಿ ಮೀರಿರುವ ಖಾಸಗಿ ಆಸ್ಪತ್ರೆಗಳ ಸುಲಿಗೆ ಮತ್ತು ದುರ್ನಡತೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಯಾವುದೇ ಬದಲಾವಣೆ ಇಲ್ಲದೆ, ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಕರ್ನಾಟಕ ಜನಾರೋಗ್ಯ ಚಳವಳಿ, ಸ್ವರಾಜ್ ಸಂಘಟನೆ, ಕರ್ನಾಟಕ ಜನಶಕ್ತಿ, ಸಫಾಯಿ ಕರ್ಮಚಾರಿ ಕಾವಲು ಸಮಿತಿ, ರೈತ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳು, ಮಸೂದೆ ಅಂಗೀಕರಿಸುವಂತೆ ಒತ್ತಾಯಿಸಿವೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಡೆಂಘಿ ಖಾಸಗಿ ಆಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ