‘ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕ’-ಸಿಎಂ

Kannada News

03-11-2017

ಬೆಂಗಳೂರು: ಪತ್ರಿಕೆಗಳು ಯಾವುದೇ ರಾಜಕೀಯ ಪಕ್ಷದ ಮುಖವಾಣಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆಯ 15 ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಸಿಎಂ, ಸರ್ಕಾರಗಳಾಗಲೀ, ಪಕ್ಷಗಳಾಗಲೀ ಅಥವಾ ಜನಪ್ರತಿನಿಧಿಗಳೇ ಆಗಲೀ ತಪ್ಪು ಮಾಡಿದರೆ ತಪ್ಪು ಎಂದು ಹೇಳುವ ನೈತಿಕತೆ ಪತ್ರಿಕೆಗಳಲ್ಲಿ ಇರಬೇಕು. ಭ್ರಷ್ಟಾಚಾರ ಎಸಗಿದ್ದರೆ ಅದನ್ನು ಬಯಲಿಗೆಳೆಯುವ ದಿಟ್ಟತನವನ್ನು ಪತ್ರಿಕೆಗಳು ತೋರಬೇಕು. ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಸಮರ ಸಾರುವ ಸಾಮರ್ಥ್ಯ ಪತ್ರಿಕೆಗಳು ಮೈಗೂಡಿಸಿಕೊಳ್ಳಬೇಕು. ತಪ್ಪೆಸಗಿದರೆ ನನ್ನನ್ನೂ ಒಳಗೊಂಡಂತೆ ಎಲ್ಲರನ್ನೂ ಟೀಕಿಸಿ. ಆದರೆ, ಯಾರನ್ನೇ ಆಗಲೀ ಅನಗತ್ಯ ಟೀಕೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಸ್ವಾತಂತ್ರ್ಯಾಪೂರ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನುಗಳಿಸಿ ಕೊಡುವ ವಿಷಯಕ್ಕೆ ಪ್ರೇರಣೆ ನೀಡುವುದೇ ಪತ್ರಿಕೆಗಳ ಒಂದಂಶದ ಕಾರ್ಯಕ್ರಮವಾಗಿತ್ತು. ಆದರೆ, ಸ್ವಾತಂತ್ರ್ಯಾ ನಂತರದಲ್ಲಿ ಪರಿಸ್ಥಿತಿ ಬದಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಸಮಾಜದಲ್ಲಿರುವ ತಾರತಮ್ಯಗಳನ್ನು ನಿವಾರಣೆ ಮಾಡುವ, ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಜಾತ್ಯಾತೀತ ತತ್ವಗಳನ್ನು ಪಾಲಿಸುವ, ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಹಾಗೂ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂಬುದನ್ನು ಮರೆಯಬಾರದು. ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕ ಎಂದು ಸಿದ್ದರಾಮಯ್ಯ ಅವರು ಹಿತ ನುಡಿದರು.

ಪರಿವರ್ತನೆಯಾಗಬೇಕು: ಭಾರತೀಯ ಜನತಾ ಪಕ್ಷದ ಪರಿವರ್ತನಾ ರ‍್ಯಾಲಿಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ಪರಿವರ್ತನಾ ರ‍್ಯಾಲಿಯ ಮೂಲಕ ಜನರನ್ನು ಪರಿವರ್ತಿಸುವುದಿರಲಿ ಮೊದಲು ಆ ಪಕ್ಷದ ನಾಯಕರೇ ಕೋಮುವಾದದಿಂದ ಜಾತ್ಯಾತೀತವಾದಕ್ಕೆ ಪರಿವರ್ತನೆಯಾಗಬೇಕು ಎಂದು ಹೇಳಿದರು. ಯಾವುದೇ ರ‍್ಯಾಲಿಗೆ ಅಭ್ಯಂತರವಿಲ್ಲ. ಆದರೆ, ಪ್ರಚೋದನಾಕಾರಿ ಭಾಷಣಗಳ ಮೂಲಕ ಕೋಮು ಸೌಹಾರ್ಧಕ್ಕೆ ಭಂಗ ಉಂಟು ಮಾಡಿ ಶಾಂತಿಮ ಕದಡಿದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಯವರು ಕನ್ನಡ ರಾಜ್ಯೋತ್ಸವಕ್ಕಿಂತಲೂ ಟಿಪ್ಪು ಜಯಂತಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂಬ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ತಾವು ಕನ್ನಡಾಭಿಮಾನವನ್ನು ಯಾರಿಂದಲೂ ಕಲಿಯಬೇಕಾಗಿಲ್ಲ ಎಂದು ಪುನರುಚ್ಛರಿಸಿದರು. ಅಧಿಕಾರದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿ ಇಲ್ಲದಾಗ ಮತ್ತೊಂದು ನಿಲುವು ತಾಳುವ ಗೋಸುಂಬೆಯ ಜಾಯಮಾನ ತಮ್ಮದಲ್ಲ. ಕನ್ನಡ ಭಾಷೆಯಲ್ಲಿ ಪ್ರಪ್ರಥಮ ರಾಜ್ಯಪತ್ರವನ್ನು ಪ್ರಕಟಿಸಿದ ಟಿಪ್ಪು ಸುಲ್ತಾನ್, ಕನ್ನಡ ವಿರೋಧಿಯಾಗಲು ಹೇಗೆ ಸಾಧ್ಯ..? ದಿವಾನರ ಸ್ಥಾನದಲ್ಲಿ ಪೂರ್ಣಯ್ಯ ಅವರನ್ನು ನೇಮಕ ಮಾಡಿಕೊಂಡಿದ್ದ ಟಿಪ್ಪು, ಹಿಂದೂ ವಿರೋಧಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ..? ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುನ್ನವೇ, ನಾಲ್ಕು ಬಾರಿ ಬ್ರಿಟೀಷರ ವಿರುದ್ಧ ಯುದ್ಧಮಾಡಿ ಹೋರಾಡಿ ವೀರ ಮರಣವನ್ನಪ್ಪಿದ ಟಿಪ್ಪು ಸುಲ್ತಾನ್ ಅವರನ್ನು ದೇಶಪ್ರೇಮಿ ಅಲ್ಲ ಎಂದು ಬಣ್ಣಿಸುವುದು ನ್ಯಾಯ ಸಮ್ಮತವೇ ? ಎಂದು ಮುಖ್ಯಮಂತ್ರಿ ಪ್ರಶ್ನೆಗಳ ಸುರಿಮಳೆಗೆರೆದರು.

ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹಮದ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ಮಾಜಿ ಸಚಿವರಾದ ಬಿ. ಎ. ಮೊಹಿದ್ದೀನ್ ಹಾಗೂ ಸುಬ್ಬಯ್ಯ ಶೆಟ್ಟಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತೀಕ್, ಮಾಧ್ಯಮ ಕಮ್ಯುನಿಕೇಷನ್ಸ್ ಲಿಮಿಟೆಡ್‍ನ ನಿರ್ದೇಶಕ ಹೆಚ್.ಎಂ.ಅಪ್ರೋಜ್ ಅಸ್ಸಾದಿ, ಬ್ಯಾರೀಸ್ ಗ್ರೂಪ್‍ನ ಅಧ್ಯಕ್ಷ ಸಯ್ಯದ್ ಮೊಹಮದ್ ಬ್ಯಾರಿ, ವಾರ್ತಾ ಭಾರತಿ ಸಂಪಾದಕ ಅಬುಸ್ಸಲಾಂ ಪುತ್ತಿಗೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಮುಖವಾಣಿ ಪತ್ರಿಕೆಗಳು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ನೀವು ಮೊದಲು ಮೋದಿ ji ರವರ ಅವರ ಆಡಳಿತದ ಬಗ್ಗೆ ತಪ್ಪು ಮಾಹಿತಿ ಕೊಡುವುದು ಬಿಡಿ ಆಗ ನಿಮ್ಮ ಪತ್ರಿಕೆ ಮೇಲೆ ಬರುತ್ತದೆ
  • ಸುನಿಲ್
  • ಬ್ಯುಸಿನೆಸ್