ಆಧಾರ್...ಡೇಂಜರ್ ?

Kannada News

03-11-2017 425

ಇತ್ತೀಚಿನ ದಿನಗಳಲ್ಲಿ ಆಧಾರ್ ಅಥವ ವಿಶಿಷ್ಟ ಗುರುತಿನ ಸಂಖ್ಯೆ ಅನ್ನುವುದು ದೇಶದ ನಾಗರಿಕರ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಯ ಭದ್ರತೆಗೆ ಸಂಬಂಧಿಸಿದಂತೆ ತಂದೊಡ್ಡಬಹುದಾದ ಆಪತ್ತುಗಳ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಆದರೆ, ಆಧಾರ್ ಅನ್ನುವುದರ ಪರಿಣಾಮ ಇಷ್ಟಕ್ಕೆ ಮಾತ್ರ ಸೀಮಿತವಾಗಿರುವಂಥದಲ್ಲ, ಇದು ತುಂಬಾ ದೊಡ್ಡದಾದ, ವ್ಯಾಪಕವಾದ ಮತ್ತು ಕರಾಳವಾದ ರೀತಿಯ ಪರಿಣಾಮಗಳನ್ನು ಉಂಟುಮಾಡುವ ವಿಚಾರ ಅನ್ನುವುದನ್ನು, ಈ ದೇಶದ ನಾಗರಿಕರು ಅರ್ಥಮಾಡಿಕೊಳ್ಳಬೇಕು.

ಇದು, ಒಬ್ಬ ವ್ಯಕ್ತಿಯಾಗಿ ನಿಮ್ಮ ಸ್ವಾತಂತ್ರ್ಯವನ್ನು ಎಷ್ಟರಮಟ್ಟಿಗೆ ಸರ್ಕಾರದ ಹಿಡಿತಕ್ಕೆ ಒಪ್ಪಿಸಿದ್ದೀರಿ, ಸರ್ಕಾರಕ್ಕೆ ಎಂಥ ಶಕ್ತಿಯನ್ನು ಖುದ್ದು ನೀವೇ ಕೊಟ್ಟಿದ್ದೀರಿ ಅನ್ನುವ ಪ್ರಶ್ನೆ.

ನೀವು ಆಧಾರ್ ಯೋಜನೆ ಮತ್ತು ಆ ವಿಚಾರದಲ್ಲಿ ಸರ್ಕಾರವನ್ನು ಬೆಂಬಲಿಸುತ್ತೀರೇನು? ಹಾಗಿದ್ದರೆ, ಸ್ವಲ್ಪ ಇಲ್ಲಿ ಕೇಳಿ. ಈಗ ಕೇಂದ್ರದಲ್ಲಿ ಬಿಜೆಪಿಗೆ ವಿರುದ್ಧವಾದ ಒಂದು ಸರ್ಕಾರ ಆಡಳಿತದಲ್ಲಿದೆ ಅಂದುಕೊಳ್ಳಿ ಅಥವ ಇನ್ನೂ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ, ಸೇನಾ ಮುಖ್ಯಸ್ಥರು ಬಂಡೆದ್ದು ಅಧಿಕಾರ ಕಸಿದುಕೊಂಡು, ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ ಎಂದು ಒಂದೇ ಒಂದು ಕ್ಷಣ ಬರೀ ಊಹೆ ಮಾಡಿಕೊಳ್ಳಿ.

1975ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗ ಏನೆಲ್ಲಾ ಆಯಿತು ಅನ್ನುವುದು ನಿಮಗೆ ಗೊತ್ತಲ್ಲವೇ? ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಮುಂತಾದವರನ್ನು ಬಂಧಿಸಿದ್ದರು. ಆದರೆ, ಬಂಧನ ತಪ್ಪಿಸಿಕೊಂಡು, ಹೋರಾಟ ನಡೆಸುವ ಸಲುವಾಗಿ ಜಾರ್ಜ್‌ ಫರ್ನಾಂಡಿಸ್ ಅವರಂಥವರು ಭೂಗತರಾಗಿದ್ದರು. ಅವರು ಮಾರುವೇಶ ಧರಿಸಿ, ದೇಶದ ಹಲವೆಡೆ ಸಂಚರಿಸುತ್ತಾ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಜನರ ಬೆಂಬಲ ಗಳಿಸುವ ಪ್ರಯತ್ನ ನಡೆಸುತ್ತಿದ್ದರು.

ಆದರೆ, ಮೇಲೆ ಹೇಳಿದ ರೀತಿಯಲ್ಲಿ, ಒಂದು ಪಕ್ಷ ಇವತ್ತೇನಾದರೂ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರೆ ಯಾವುದೇ ನಾಯಕನೂ ತಪ್ಪಿಸಿಕೊಳ್ಳುವುದಾಗಲಿ, ಭೂಗತರಾಗುವುದಾಗಲಿ ಸಾಧ್ಯವೇ ಇಲ್ಲ. ನೀವು ನಿಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ ಕೂಡಲೇ ಸರ್ಕಾರದವರು ನಿಮ್ಮನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಅಂದುಕೊಂಡಿದ್ದರೆ ಅದು ಮೂರ್ಖತನ.  ನಮ್ಮ ಸರ್ಕಾರದ ಬಳಿ ನಿಮ್ಮ ಆಧಾರ್ ಸಂಖ್ಯೆ ಇದೆ ಸ್ವಾಮಿ… ಎಲ್ಲೇ ಇದ್ದರೂ ನಿಮ್ಮನ್ನು ಕಟ್ಟಿಹಾಕುವುದಕ್ಕೆ ಅದೊಂದು ಸಂಖ್ಯೆಯೇ ಸಾಕು. ಸರ್ಕಾರದವರು ಆಧಾರ್ ನೆರವಿನಿಂದ, ನೀವು ಎಟಿಎಮ್ ನಲ್ಲಿ ಹಣ ಪಡೆಯುವುದನ್ನು ತಡೆಯಬಹುದು, ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸುವುದನ್ನು ತಪ್ಪಿಸಬಹುದು. ಇನ್ನು ಮುಂದೆ, ರೈಲಿನ ಟಿಕೆಟ್‌ಗಳಿಗೂ ಆಧಾರ್ ಸಂಖ್ಯೆ ಲಿಂಕ್ ಮಾಡಲಾಗುತ್ತದಂತೆ, ಹಾಗೇನಾದರೂ ಮಾಡಿದರೆ, ನೀವು ರೈಲಿನಲ್ಲಿ ಪ್ರಯಾಣ ಮಾಡುವುದೂ ಸಾಧ್ಯವಿಲ್ಲ.

ಕೇಂದ್ರೀಕೃತ ಮಾಹಿತಿ ಸಂಗ್ರಹಣೆ ವ್ಯವಸ್ಥೆ ಇರುವುದರಿಂದ, ಆಧಾರ್ ದೃಢೀಕರಣ ಬಳಸಿ ನೀವು ಪಡೆಯುತ್ತಿದ್ದ ಎಲ್ಲ ರೀತಿಯ ಸೇವೆಗಳನ್ನೂ ಅರ್ಧ ಕ್ಷಣದಲ್ಲಿ ನಿಲ್ಲಿಸಬಹುದು. ಬ್ಯಾಂಕಿನಲ್ಲಿ ಹಣವಿದ್ದರೂ ನೀವು ತೆಗೆದುಕೊಳ್ಳಲಾಗುವುದಿಲ್ಲ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲಾಗುವುದಿಲ್ಲ,  ಯಾರೊಂದಿಗೂ ಸಂಪರ್ಕ ಸಾಧಿಸಲಾಗುವುದಿಲ್ಲ. ನಿಮ್ಮ ಬೆರಳಚ್ಚುಗಳು ಮತ್ತು ಕಣ್ಣಾಲಿಗಳ ಗುರುತೂ ಕೂಡ ಆಧಾರ್ ಜೊತೆಗೆ ಸೇರಿರುವುದರಿಂದ, ನೀವು ನಕಲಿ ಹೆಸರು ಬಳಕೆಮಾಡಿ ಯಾಮಾರಿಸುವುದೂ ಅಸಾಧ್ಯ.

ಹಾಗಿದ್ದರೆ, ನಾವು ಎಲ್ಲೇ ಇದ್ದರೂ ಕೂಡ ಸರ್ಕಾರ ನಮ್ಮನ್ನು ತುಂಬಾ ಸುಲಭವಾಗಿ ಅರೆಸ್ಟ್ ಮಾಡಿ, ವಶಕ್ಕೆ ತೆಗೆದುಕೊಂಡು ಬಿಡಬಹುದೇ ಎಂದು ಕೇಳುತ್ತೀರೇನು? ಇಲ್ಲ, ಸರ್ಕಾರಕ್ಕೆ ನಿಮ್ಮನ್ನು ಬಂಧಿಸುವ ಅವಶ್ಯಕತೆಯೇ ಬರದೇ ಇರಬಹುದು. ಏಕೆಂದರೆ, ಈವರೆಗೂ ತಿಳಿಸಿದ ಹಾಗೆ, ಆಧಾರ್ ಬಳಸಿ ನಿಮ್ಮ ಅಸ್ತಿತ್ವವನ್ನೇ ಇಲ್ಲದಂತೆ ಮಾಡಬಹುದು, ಅಷ್ಟು ಸಾಕಲ್ಲವೇ?.ಹೀಗೆ ಮಾಡುವುದರಿಂದ ನೀವೇನೂ ಸತ್ತುಹೋಗುವುದಿಲ್ಲ, ಆದರೆ ನಿಮ್ಮ ಬದುಕನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿ, ನೀವು ಜೀವಂತವಿದ್ದೂ ಸತ್ತವರಂತಾಗುವ ಹಾಗೆ ಮಾಡಿಬಿಡಬಹುದು.

ಇತ್ತೀಚಿನ ದಿನಗಳಲ್ಲಿ ನಿಮ್ಮ ಆಸ್ತಿಯ ದಾಖಲೆ ಪತ್ರಗಳಿಗೆ, ನಿಮ್ಮ ಆದಾಯ ತೆರಿಗೆ ಸಲ್ಲಿಕೆಗೆ, ಬ್ಯಾಂಕ್ ಅಕೌಂಟ್‌ ಗಳಿಗೆ, ಫೋನ್ ನಂಬರ್‌ ಗೆ, ರೇಷನ್ ಕಾರ್ಡಿಗೆ, ಚುನಾವಣಾ ಆಯೋಗದ ಗುರುತು ಪತ್ರಕ್ಕೆ, ಡ್ರೈವಿಂಗ್ ಲೈಸೆನ್ಸ್‌ಗೆ, ನಿಮ್ಮ ಮಕ್ಕಳ ಸ್ಕೂಲ್ ಅಡ್ಮಿಷನ್‌ ಗೆ ಇತ್ಯಾದಿ ಎಲ್ಲಕ್ಕೂ ಆಧಾರ್ ಸಂಖ್ಯೆ ಲಿಂಕ್ ಮಾಡಲಾಗಿದೆ. ಹೀಗಾಗಿ, ನಿಮ್ಮ ಜೊತೆಗೆ ನಿಮ್ಮ ಕುಟುಂಬದ ಸದಸ್ಯರನ್ನು, ನಿಮ್ಮ ಆಪ್ತ ಸ್ನೇಹಿತರನ್ನು ಅಥವ ನಿಮಗೆ ಸಂಬಂಧ ಇರುವ ಯಾವುದೇ ವ್ಯಕ್ತಿಯನ್ನು ಗುರುತಿಸಿ, ಒಂದೆರಡು ನಿಮಿಷಗಳಲ್ಲಿ ನಿಮ್ಮ ಜೊತೆಗೆ ಅವರನ್ನೂ ಕೂಡ ಸ್ವಿಚ್ ಆಫ್ ಮಾಡಿ ಬಿಸಾಕಬಹುದು.

ಒಂದು ವೇಳೆ, ನೀವು ಫೇಸ್ ಬುಕ್ ನಲ್ಲಿ ಹಾಕಿರುವ ಒಂದು ಸಂದೇಶ ಅಥವ ಚಿತ್ರ ಸರ್ಕಾರಕ್ಕೆ ಇಷ್ಟವಾಗದಿದ್ದರೆ ಕೆಲವೇ ಕ್ಷಣಗಳಲ್ಲಿ ಅದನ್ನೂ ಸ್ಥಗಿತಗೊಳಿಸಬಹುದು.

ನೋಡಿ, ನಮ್ಮ ಸರ್ಕಾರಗಳು ಈ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯಾವುದೇ ರೀತಿಯ ತುರ್ತುಪರಿಸ್ಥಿತಿ ಜಾರಿ ಮಾಡುವ ಅವಶ್ಯಕತೆಯೇ ಇಲ್ಲ.  ನಿಮ್ಮ ಬಗೆಗಿನ ಎಲ್ಲ ಮಾಹಿತಿಯನ್ನೂ ತನ್ನೊಳಗೆ ಸೇರಿಸಿಕೊಂಡಿರುವ ಆಧಾರ್ ಅನ್ನುವುದೇ ನಿಮ್ಮ ಮಾಲೀಕನಾಗಿದೆ.

ನೀವು ಎಲ್ಲೆಲ್ಲಿ ಏನೆಲ್ಲಾ ವಹಿವಾಟು ನಡೆಸಿದ್ದೀರಿ ಅನ್ನುವುದರ ಜಾಡು ಅಥವ ಮಾಹಿತಿಯ ದಾಖಲೆ ನಿಮ್ಮಲ್ಲೇ ಇಲ್ಲದಿರಬಹುದು, ಆದರೆ ಬೇರೊಂದು ಕಡೆ ನಿಮ್ಮ ಸಂಪೂರ್ಣ ವಿವರ ದಾಖಲಾಗಿದೆ, ಅದನ್ನು ಸರ್ಕಾರದವರು ಯಾವಾಗ ಬೇಕಿದ್ದರೂ ಪರಿಶೀಲಿಸಬಹುದು. ಒಮ್ಮೆ ಸಂಗ್ರಹಿಸಿದ ಮಾಹಿತಿ ಕನಿಷ್ಟ 7 ವರ್ಷಗಳವರೆಗೆ ಅಥವ ಅದ್ದಕ್ಕಿಂತ ಹೆಚ್ಚು ಸಮಯ ಇರುತ್ತದೆ. ಇದನ್ನು ತಪ್ಪಿಸಲು ಯಾವುದೇ ಕಾನೂನಿಂದಲೂ ಆಗುವುದಿಲ್ಲ, ಹೀಗಾಗಿಯೇ ಹೇಳುವುದು, ಆಧಾರ್ ಅನ್ನುವುದು ಇರಬಾರದಾಗಿತ್ತು ಎಂದು.

ಅಚ್ಛೇ ದಿನಗಳು ನಡೆಯುವಾಗ, ನಮಗೆ ಹಕ್ಕುಗಳು ಮತ್ತು ರಕ್ಷಣೆಗಳ ಅಗತ್ಯ ಬೀಳುವುದಿಲ್ಲ. ಆದರೆ, ಕೆಟ್ಟ ಸಮಯಗಳು ಏನೆಲ್ಲಾ ಸಂಕಷ್ಟಗಳನ್ನು ತರಬಹುದು ಅನ್ನುವುದರ ಬಗ್ಗೆ ಮತ್ತು ಅದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಅನ್ನುವುದರ ಬಗ್ಗೆ, ಒಳ್ಳೆಯ ಕಾಲ ಇರುವಂಥ ಸಂದರ್ಭದಲ್ಲೇ ನಾವೆಲ್ಲಾ ಯೋಚನೆ ಮಾಡಬೇಕು.

ನಂದನ್ ನಿಲೇಕಣಿ ಮುಂತಾದವರು, ಈ ಆಧಾರ್ ತಂದೊಡ್ಡ ಬಹುದಾದ ಸಮಸ್ಯೆಗಳನ್ನು ನಿರಾಕರಿಸುತ್ತಾರೆ. ಗೂಗಲ್, ಫೇಸ್ ಬುಕ್, ವಾಟ್ಸಾಪ್‌ ಮತ್ತು ನಿಮ್ಮ ಸ್ಮಾರ್ಟ್‌ ಫೋನಿನ ಆಂಡ್ರಾಯ್ಡ್ ಅಥವ ಐಒಎಸ್ ಆಪರೇಟಿಂಗ್ ಸಿಸ್ಟಮ್‌ಗಳೂ ಕೂಡ ನಿಮ್ಮ ಬಗ್ಗೆ ಅಪಾರ ಮಾಹಿತಿ ಸಂಗ್ರಹಿಸಿಡುತ್ತವೆ ಅನ್ನುವ ಮಾತನ್ನು ಅವರು ಹೇಳುತ್ತಾರೆ. ಆದರೆ, ಆಧಾರ್ ಮತ್ತು ಸಾಮಾಜಿಕ ಜಾಲತಾಣಗಳು ಒಂದೇ ತರಹದ ವ್ಯವಸ್ಥೆಗಳೇನೂ ಅಲ್ಲ. ಒಂದು ವೇಳೆ, ನಮಗೆ ಬೇಕಿಲ್ಲದಿದ್ದರೆ ಸಾಮಾಜಿಕ ಜಾಲ ತಾಣಗಳಿಂದ ಹೊರಬರಬಹುದು. ಅವುಗಳಿಗೆ ನಮ್ಮ ಮೇಲೆ ಯಾವುದೇ ಹಿಡಿತವಿಲ್ಲ, ಅವು ನಮ್ಮನ್ನು ಸ್ವಿಚ್ ಆಫ್ ಮಾಡಿ ಇದ್ದಲ್ಲಿಯೇ ಕಟ್ಟಿಹಾಕಿಬಿಡಲು ಸಾಧ್ಯವಿಲ್ಲ.

‘ಇತರೆ ವ್ಯವಸ್ಥೆಗಳಲ್ಲಿ ನಿಮಗೆ ಹೆಚ್ಚಿನ ಭದ್ರತೆಯೇನೂ ಇಲ್ಲ, ಹೀಗಾಗಿ ನಾವೂ ಕೂಡ ನಿಮಗೆ ಭದ್ರತೆಯ ಬಗ್ಗೆ ಖಾತ್ರಿ ನೀಡಲು ಸಾಧ್ಯವಿಲ್ಲ’ ಎಂಬ ‘ಆಧಾರ್’ ವಾದಿಗಳ ಮಾತನ್ನು ಒಪ್ಪಲಾಗುವುದಿಲ್ಲ.

ಆಧಾರ್ ಅನ್ನುವುದನ್ನು ಸೃಷ್ಟಿಸುವ ಮೊದಲು, ಅದು ತರಬಹುದಾದ ಅಪಾಯಗಳ ಬಗ್ಗೆ ಮತ್ತು ಅದರಿಂದ ರಕ್ಷಿಸಿಕೊಳ್ಳುವ ಉಪಾಯಗಳ ಬಗ್ಗೆಯೂ ಸರಿಯಾಗಿ ಯೋಚಿಸಬೇಕಿತ್ತು. ಆದರೆ, ಆ ಜವಾಬ್ದಾರಿಯನ್ನೇ ಮರೆತು, ಆಧಾರ್ ಅನ್ನುವುದನ್ನು ಹುಟ್ಟಿಹಾಕಿ ದೊಡ್ಡದಾಗಿ ಬೆಳೆಸಲಾಗಿದೆ. ಹೀಗೆ ಮಾಡಿರುವುದು, ಮುಂದೇನಾಗಬಹುದು ಎಂದು ಯೋಚಿಸದೆ, ತಲೆ ಮೇಲೆ ಅವನ ಕೈ ಇಟ್ಟವರೆಲ್ಲಾ ಸುಟ್ಟು ಬೂದಿಯಾಗುವಂತೆ ಭಸ್ಮಾಸುರನಿಗೆ ವರ ಕೊಟ್ಟು, ಅವನಿಂದ ತಪ್ಪಿಸಿಕೊಳ್ಳಲು ಓಡಿಹೋದ ಶಿವನ ಕಥೆಯಂತಾಗಿದೆ.

 

 

 

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ