‘ಬೇಡಿಕೆ ಈಡೇರುವವರೆಗೆ ಮುಷ್ಕರ ನಿಲ್ಲುವುದಿಲ್ಲ’

Kannada News

03-11-2017

ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ) ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿನಗರದ ಕೇಂದ್ರ ಕಚೇರಿಯ ಆವರಣದಲ್ಲಿ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸಿದ ನೂರಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ನೌಕರರನ್ನು ಬಂಧಿಸಿ ಪೊಲೀಸರು ಕರೆದೊಯ್ದು ಸಂಜೆ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಧರಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹೆಚ್‍.ಎಸ್ ಮಂಜುನಾಥ್ ಅವರು ಮಾತನಾಡಿ, ಬೇಡಿಕೆ ಈಡೇರುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂವತ್ತು ದಿನಗಳ ಒಳಗಾಗಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ನಮ್ಮ ಹಿಂದಿನ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಆದರೆ ಈವರೆಗೂ ಯಾವುದೇ ರೀತಿಯ ಬೇಡಿಕೆಗಳನ್ನು ಈಡೇರಿಸಿಲ್ಲ. ಶೇ.12.5 ವೇತನ ಹೆಚ್ಚಳ ಮಾಡಲಾಗಿತ್ತು. ಇದರ ಹೊರತು ಬೇರಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.

ನಾವು ಒಟ್ಟು 52 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಹೂಡಿದ್ದೆವು. ಒಟ್ಟು 1600 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ 2016ರ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ಪುತ್ತೂರು ವಿಭಾಗದಿಂದ 250 ಜನರನ್ನು ಎಲ್ಲಿಗೆ ವರ್ಗಾವಣೆಯಾಗಿದೆಯೋ ಅಲ್ಲಿಗೆ ಕಳುಹಿಸಿಕೊಟ್ಟಿಲ್ಲ. ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ನೌಕರರಿಗೆ 2014-15ರ ಸಾಲಿನ ಎರಡು ವರ್ಷದ ಬೋನಸ್ ಹಣವನ್ನು ಕೊಟ್ಟಿಲ್ಲ. ಇನ್ನೂ 2016-17ನೇ ಸಾಲಿನ ಬೋನಸ್ ಹಣವನ್ನು ಘೋಷಣೆ ಮಾಡಿಲ್ಲ. ಏಪ್ರಿಲ್ ನಲ್ಲೇ ಘೋಷಣೆ ಮಾಡಬೇಕಿಲ್ಲ ಆದರೆ ಇಲ್ಲಿಯವರೆಗೆ ಮಾಡಿಲ್ಲ ಎಂದು ದೂರಿದರು.

ಸರ್ಕಾರದ ಸಚಿವರ ಪ್ರಾಮಾಣಿಕ ಪ್ರಯತ್ನಕ್ಕೂ ಸಾರಿಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಪೋಗಳಲ್ಲಿ ವಿಪರೀತ ಕಿರುಕುಳ ನೀಡಲಾಗುತ್ತಿದ್ದು, ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ನೌಕರರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ. ಮಂತ್ರಿಗಳು ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಸಚಿವರ ಭರವಸೆ: ಪ್ರತಿಭಟನೆ ನಡೆಸುತ್ತಿರುವ ಸಂಸ್ಥೆಯ ನೌಕರರ ಬೇಡಿಕೆಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರೇವಣ್ಣ ಅವರು ಭರವಸೆ ನೀಡಿದ್ದಾರೆ. ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ ಗಮನಕ್ಕೆ ಬಂದಿದೆ. ಅವರೊಂದಿಗೆ ಚರ್ಚಿಸಿದ್ದೇವೆ. ಒಂದೇ ದಿನದಲ್ಲಿ ಪರಿಹಾರಕ್ಕೆ ಪಟ್ಟು ಹಿಡಿದರೆ ಸಾಧ್ಯವಿಲ್ಲ, ನಾನೂ ಹೋರಾಟದಿಂದ ಬಂದಿದ್ದೇನೆ. ಹೋರಾಟ ಹತ್ತಿಕ್ಕಿಲ್ಲ. ಅವರ ಸಮಸ್ಯೆ ಪರಿಹರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ