ಸಮಾಜ ಘಾತುಕ ಶಕ್ತಿಗಳಿಗೆ ಸಿಎಂ ಎಚ್ಚರಿಕೆ

Kannada News

02-11-2017

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಕೋಮು ಸಾಮರಸ್ಯ ಕದಡುವ ಪ್ರಯತ್ನಕ್ಕೆ ಕೈ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಟಿಪ್ಪು ಜಯಂತಿ ಮತ್ತು ಬಿಜೆಪಿಯವರ ಪರಿವರ್ತನಾ ರ‍್ಯಾಲಿ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಕೋಮು ಸಾಮರಸ್ಯ ಹಾಳು ಮಾಡಲು ಬಿಜೆಪಿಯವರು ಪದೇ ಪದೇ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದೇವೆ ಎಂದರು.

ಜನತೆ ಟಿಪ್ಪು ಜಯಂತಿಯನ್ನು ಒಪ್ಪಿದ್ದಾರೆ. ಟಿಪ್ಪು ಒಬ್ಬ ದೇಶಪ್ರೇಮಿ. ಆತ ಹಿಂದೂ ಅಥವಾ ಯಾವುದೇ ಜನಾಂಗದ ವಿರೋಧಿ ಆಗಿರಲಿಲ್ಲ. ಆ ರೀತಿ ಇದ್ದಿದ್ದರೆ ಶೃಂಗೇರಿ ಮಠಕ್ಕೆ, ನಂಜನಗೂಡು ದೇವಾಲಯಕ್ಕೆ ಸಹಾಯ ಮಾಡುತ್ತಿರಲಿಲ್ಲ. ರಾಜ್ಯದಲ್ಲಿ ರೇಷ್ಮೆ ಕೃಷಿ ಬೆಳೆದಿದ್ದರೆ ಅದಕ್ಕೆ ಟಿಪ್ಪು ಕಾರಣ. ನಿಜವಾಗಿಯೂ ಟಿಪ್ಪು ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದು ಮುಖ್ಯಮಂತ್ರಿಯವರು ಬಣ್ಣಿಸಿದರು.

ಕೆಜೆಪಿಯಲ್ಲಿದ್ದಾಗ ಟಿಪ್ಪು ಬಗ್ಗೆ ಯಡಿಯೂರಪ್ಪ ಅವರೇನು ಹೇಳಿದ್ದರು. ರಾಷ್ಟ್ರಪತಿಯವರು ಟಿಪ್ಪು ಸಾಧನೆ ಬಣ್ಣಿಸಿದ ಬಳಿಕ ಬಿಜೆಪಿಯವರಿಗೆ ಜ್ಞಾನೋದಯವಾಗಿದೆ. ಹೀಗಾಗಿ ಟಿಪ್ಪು ಜಯಂತಿಯನ್ನು ಟೀಕಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾರೇ ಕಾನೂನು ಕೈಗೆ ತೆಗೆದುಕೊಂಡರೆ, ಸಮಾಜದಲ್ಲಿ ಶಾಂತಿ ಕದಡಲು ಮುಂದಾದರೆ, ಪ್ರಚೋದನಕಾರಿ ಭಾಷಣ ಮಾಡಿ ಶಾಂತಿಗೆ ಭಂಗ ಉಂಟು ಮಾಡಿದರೆ ಅಂತಹ ಶಕ್ತಿಗಳನ್ನು ಬಲಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಅವರು ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಪೋಸು ನೀಡಿರಲಿಲ್ಲವೇ. ಇತಿಹಾಸ ನಿರ್ಮಿಸಿದವರನ್ನು ನೆನಪು ಮಾಡಿಕೊಳ್ಳುವ ಬುದ್ಧಿ ಬಿಜೆಪಿಯವರಿಗೆ ಇಲ್ಲ. ಇತಿಹಾಸ ತಿರುಚುವುದಷ್ಟೇ ಅವರಿಗೆ ಗೊತ್ತು ಎಂದು ಸಿಎಂ ಹೇಳಿದರು.

ಪರಿವರ್ತನಾ ರ‍್ಯಾಲಿ ಮತ್ತು ಟಿಪ್ಪು ಜಯಂತಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಇದು ಚುನಾವಣಾ ವರ್ಷವಾಗಿರುವುದರಿಂದ ಕೋಮು ಭಾವನೆ ಕೆರಳಿಸುವ ಪ್ರಯತ್ನಕ್ಕೆ ಕೆಲವರು ಕೈ ಹಾಕಬಹುದು, ಅಂಥವರ ಬಗ್ಗೆ ನಿಗಾ ವಹಿಸುವಂತೆ ತಿಳಿಸಲಾಗಿದೆ. ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಆದೇಶಿಸಿದೆ ಎಂದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ