ಟ್ರಾಫಿಕ್ ಜಾಮ್ ಗೆ ಅಮಿತ್ ಷಾ ಸುಸ್ತು !

Kannada News

02-11-2017 431

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ನಡುಗಿಸಲು ಇಂದು ‘ನವ ಕರ್ನಾಟಕ ಪರಿವರ್ತನಾ ರ‍್ಯಾಲಿ ಆರಂಭಿಸಿದ ಬಿಜೆಪಿ ಇದಕ್ಕೂ ಮುನ್ನ ತಾನೇ ಗಡಗಡ ನಡುಗುವಂತಹ ದಯನೀಯ ಪರಿಸ್ಥಿತಿ ಸೃಷ್ಟಿ ಆಗಿತ್ತು.

ಒಂದು ಕಡೆ ವಾಹನ ದಟ್ಟಣೆ ಮತ್ತೊಂದೆಡೆ ಖಾಲಿ ಖುರ್ಚಿಗಳು ಹಿರಿಯ ನಾಯಕರನ್ನು ಸ್ವಾಗತಿಸಿತು. ಇದರಿಂದ ಬಿಜೆಪಿ ಉನ್ನತ ನಾಯಕರ ಉತ್ಸಾಹ ಉಡುಗುವಂತೆ ಮಾಡಿತು.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಸಂಚಾರಿ ಒತ್ತಡದಿಂದ ಸಿಡಿಮಿಡಿಗೊಂಡರು. ದೇಶದ ಅತಿ ದೊಡ್ಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಟ್ರಾಫಿಕ್ ಜಾಮ್ ತೀವ್ರವಾಗಿ ಬಾಧಿಸಿತು. ಅವರನ್ನು ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ತುಮಕೂರಿನ ಸಮಾವೇಶ ಜಾಗಕ್ಕೆ ಹೆಲಿಕಾಪ್ಟರ್ ಮೂಲಕ ಕರೆ ತರಲಾಯಿತು.

ಬೂತ್‍ ಗೆ ಮೂರು ಜನರಂತೆ ರಾಜ್ಯದೆಲ್ಲೆಡೆಯಿಂದ ಬೈಕ್‍ನಲ್ಲಿ ಬೆಂಗಳೂರಿಗೆ ಬರುವಂತೆ  ಕರ್ನಾಟಕದ ಬಿಜೆಪಿ ನಾಯಕರು ಹೇಳಿದ್ದರೂ ಏಕಾಏಕಿ ವಾಹನದಟ್ಟಣೆಯಿಂದ ಶುರುವಾದ ಟ್ರಾಫಿಕ್ ಜಾಮ್, ಬಿಜೆಪಿ ನಾಯಕರ ಯೋಚನೆ ಕೂಡಾ ಜಾಮ್ ಆಗುವಂತೆ ಮಾಡಿತು. ಟ್ರಾಫಿಕ್ ಜಾಮ್‍ನಿಂದ ಆದ ಹಿಂಸೆಯನ್ನು ಜನಸಾಮಾನ್ಯರು, ರೋಗಿಗಳು ಅನುಭವಿಸಿದರಲ್ಲದೇ ಖುದ್ದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೂ ಅನುಭವಿಸಿ ಕಿಡಿ ಕಿಡಿಯಾಗುವಂತಾಯಿತು.

ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಬೇಕಿದ್ದ ಕರ್ನಾಟಕ ನವ ಪರಿವರ್ತನಾ ಯಾತ್ರೆ ಟ್ರಾಫಿಕ್ ಜಾಮ್‍ನ ಹಿಂಸೆಯಿಂದಾಗಿ ಮಧ್ಯಾಹ್ನ 2 ಗಂಟೆಯ ವೇಳೆಗೆ ಶುರುವಾಯಿತು. ಅಲ್ಲಿಯ ತನಕ ರ‍್ಯಾಲಿಗೆ ಬೈಕುಗಳಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ತಮ್ಮ ಬೈಕುಗಳನ್ನು ಎಲ್ಲಿ ಪಾರ್ಕಿಂಗ್ ಮಾಡಬೇಕು ಎಂಬ ಸೂಚನೆಯನ್ನು ಪಡೆಯದೆ ಕಕ್ಕಾಬಿಕ್ಕಿಯಾಗಿದ್ದರೆ, ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಎಂಬುದನ್ನರಿಯದೆ ತಡವರಿಸುವಂತಾಯಿತು.

ಇದರ ಫಲವಾಗಿ ಬೆಳಿಗ್ಗೆ ಸಕಾಲಕ್ಕೆ ಬೆಂಗಳೂರಿಗೆ ಆಗಮಿಸಿದರೂ ಮಧ್ಯಾಹ್ನ ಎರಡೂವರೆಯ ತನಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಸಮಾರಂಭ ನಡೆಯುವ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಹೀಗಾಗಬಹುದು ಎಂಬುದನ್ನು ಊಹಿಸದ ಬಿಜೆಪಿ ನಾಯಕರು ಕೂಡಾ ಕಕ್ಕಾಬಿಕ್ಕಿಯಾದರಲ್ಲದೇ ಅಮಿತ್ ಷಾ ಅವರನ್ನು ಹೆಚ್.ಎ.ಎಲ್ ಏರ್‍ಪೋರ್ಟ್‍ನಿಂದ ಸಮಾರಂಭ ನಡೆಯುವ ಸ್ಥಳಕ್ಕೆ ಕರೆ ತರಲು ಹೆಲಿಕಾಫ್ಟರ್‍ ನ್ ಮೊರೆ ಹೋದರು.

ಆದರೆ ಮುಂಚಿತವಾಗಿಯೇ ಹೆಲಿಕಾಫ್ಟರ್ ಅನ್ನು ಬುಕ್ ಮಾಡದೇ ಇದ್ದುದರಿಂದ ಏರ್ ಟ್ರಾಫಿಕ್ ಪರವಾನಗಿಯಿಂದ ಹಿಡಿದು ಹಲವು ಹಂತದ ಪ್ರೊಸೆಸ್ ಮಾಡಬೇಕಾದ ನಾಯಕರು ಕೊನೆಗೂ ಅಮಿತ್ ಶಾ ಅವರನ್ನು ಹೆಲಿಕಾಫ್ಟರ್ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತಂದರು. ಆದರೆ ಸಮಾರಂಭದ ಸ್ಥಳಕ್ಕೆ ಬಂದ ಅಮಿತ್ ಶಾ ಅಲ್ಲಿನ ಪರಿಸ್ಥಿತಿ ಕಂಡು ಅಸಮಾಧಾನಗೊಂಡರು. ಯಾಕೆಂದರೆ ಜನರಿಗೆ ಎಂದು ಹಾಕಲಾದ ಖುರ್ಚಿಗಳು ಬಹುತೇಕ ಖಾಲಿ ಉಳಿದಿದ್ದವು. ಹೀಗಾಗಿ ಪಕ್ಕದಲ್ಲೇ ಕುಳಿತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಬಳಿ ನೇರವಾಗಿಯೇ ತಮ್ಮ ಅಸಮಾಧಾನವನ್ನು ಅವರು ತೋಡಿಕೊಂಡರು.

ಅವರ ಅಸಮಾಧಾನವನ್ನು ಕಂಡ ಸದಾನಂದಗೌಡ ತಕ್ಷಣವೇ ವೇದಿಕೆಯ ಬಲಭಾಗಕ್ಕೆ ಬಂದರಲ್ಲದೆ ಇತರ ನಾಯಕರೊಂದಿಗೆ ಚರ್ಚಿಸಿ ಅವ್ಯವಸ್ಥೆಯನ್ನು ಸರಿಪಡಿಸಲು ಯತ್ನಿಸಿದರು.ಹೀಗಾಗಿ ಬಿಜೆಪಿ ನಾಯಕರು ಪದೇ ಪದೇ, ಹೊರಗಿರುವ,ಮರದ ಕೆಳಗೆ ನಿಂತಿರುವ ಕಾರ್ಯಕರ್ತರು ಒಳಗೆ ಬಂದು ಖುರ್ಚಿಯ ಮೇಲೆ ಕೂರಿ, ಪ್ಲೀಸ್, ಪ್ಲೀಸ್ ಎಂದು ಗೋಗರೆಯಬೇಕಾಯಿತು.

ನಾವು ಮುಂದಿನ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ತೋರಿಸುತ್ತೇವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರಿಗೆ ತೋರಿಸಬೇಕಾಗಿದೆ. ನಮ್ಮ ಶಕ್ತಿ ಏನು ಅಂತ ಅವರಿಗೆ ಗೊತ್ತಾಗಬೇಕಿದೆ. ಹೀಗಾಗಿ ಎಲ್ಲರೂ ಸಹಕರಿಸಿ ಎಂದು ರಾಜ್ಯ ಬಿಜೆಪಿ ನಾಯಕರು ಪದೇ ಪದೇ ಮನವಿ ಮಾಡಿಕೊಂಡರೂ ಖಾಲಿಯಾಗಿದ್ದ ಖುರ್ಚಿಗಳೇನೂ ತುಂಬಲಿಲ್ಲ.

ಹೀಗಾಗಿ ಸಿದ್ಧರಾಮಯ್ಯ ಅವರ ಸರ್ಕಾರದ ಮೇಲೆ ದೋಷ ಕೂರಿಸಿದ ಬಿಜೆಪಿ ನಾಯಕರು, ಹೊರಗೆ ಕಾದಿರುವ ನಮ್ಮ ಅಸಂಖ್ಯಾತ ಕಾರ್ಯಕರ್ತರು ಒಳಗೆ ಬರಲಾಗುತ್ತಿಲ್ಲ. ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸದೇ ಪರಿಸ್ಥಿತಿ ಕೈ ಮೀರುವಂತೆ ಸರ್ಕಾರ ಮಾಡಿದೆ ಎಂದು ಪದೇ ಪದೇ ಆರೋಪಿಸತೊಡಗಿದರು. ಈ ಮಧ್ಯೆ ಬಿಜೆಪಿಯ ಬೈಕ್ ರ‍್ಯಾಲಿಯ ಬಿಸಿಯನ್ನು ಅನುಭವಿಸಿದ ಜನರು ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್ ಚಾಲಕರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ