‘ರಾಜ್ಯದ ಜನತೆ ಬಿಜೆಪಿ ಜೊತೆಗಿಲ್ಲ’-ಸಿಎಂ

Kannada News

02-11-2017

ಬೆಂಗಳೂರು: ಬಿಜೆಪಿಯ ಪರಿವರ್ತನಾ  ರ‍್ಯಾಲಿ ಮೊದಲ ದಿನವೇ ವಿಫಲವಾಗಿದ್ದು, ರಾಜ್ಯದ ಜನತೆ ಆ ಪಕ್ಷದ ಜೊತೆ ಇಲ್ಲ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪರಿವರ್ತನಾ ರ‍್ಯಾಲಿ ವಿಫಲವಾಗಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯಿಸಿದರು. ಪರಿವರ್ತನಾ  ರ‍್ಯಾಲಿಗೆ ಬಿಜೆಪಿ ಭಾರಿ ಸಿದ್ಧತೆ ನಡೆಸಿತ್ತು. ಮೂರೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ಆ ಪಕ್ಷದ ನಾಯಕರು ಘೋಷಣೆ ಮಾಡಿದ್ದರು. ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮುಂತಾದವರು ರಾಜ್ಯವ್ಯಾಪಿ ಪ್ರವಾಸ ಮಾಡಿ ಜನರನ್ನು ಸೇರಿಸುವ ಪ್ರಯತ್ನ ಮಾಡಿದ್ದರು. ಆದರೆ, ಜನ ತಾವು ಬಿಜೆಪಿ ಜೊತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಬಿಜೆಪಿಯವರು ಪರಿವರ್ತನಾ ರ‍್ಯಾಲಿ ಮಾಡುವುದಲ್ಲ, ಮೊದಲು ಅವರು ಪರಿವರ್ತನೆ ಆಗಬೇಕು, ಕೋಮುವಾದಿಗಳು ಜಾತ್ಯತೀತವಾದಿಗಳಾಗಿ ಬದಲಾಗಬೇಕು ಎಂದು ತಿಳಿಸಿದರು.  ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಜನಬೆಂಬಲ ಅವರಿಗೆ ಸಿಗುವುದಿಲ್ಲ, ಮೊದಲೇ ದಿನವೇ  ರ‍್ಯಾಲಿ ವಿಫಲವಾಗಲಿದೆ. ಇನ್ನೂ ಹಳ್ಳಿಗಳಿಗೆ ಹೋಗಲಿ ಗೊತ್ತಾಗುತ್ತದೆ ಎಂದರು.

ರ‍್ಯಾಲಿಗೆ ಜನ ಬರಂದತೆ ಸರ್ಕಾರ ತಡೆದಿದೆ ಎಂದು ಸಂಸದ ಪ್ರಲ್ಹಾದ್ ಜೋಷಿ ಹೇಳಿದ್ದಾರೆ. ಜನರೇ ಬಂದಿಲ್ಲ. ಹೀಗಿರುವಾಗ ತಡೆಯುವುದು ಯಾರನ್ನು ಎಂದು ಸಿಎಂ ಪ್ರಶ್ನಿಸಿದರು. ಬಿಜೆಪಿಯವರು ಈ ಹಿಂದೆ ಮಂಗಳೂರಿಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಕೋಮುಭಾವನೆ ಕೆರಳಿಸಲು ಹೋಗುತ್ತಿದ್ದಾರೆ ಎಂಬ ಕಾರಣಕ್ಕೆ ಅದಕ್ಕೆ ಅನುಮತಿ ನೀಡಿರಲಿಲ್ಲ. ಈಗ ಪಕ್ಷ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿ ಬೈಕ್  ರ‍್ಯಾಲಿಗೆ ಈಗ ಅನುಮತಿ ನೀಡಿದ್ದೇವೆ ಎಂದರು.

ಶಾ ಹೇಳಿಕೆಗೆ ತಿರುಗೇಟು: ಕನ್ನಡ ರಾಜ್ಯೋತ್ಸವಕ್ಕಿಂತ ಮುಖ್ಯಮಂತ್ರಿಯವರಿಗೆ ಟಿಪ್ಪು ಜಯಂತಿ ಬಗ್ಗೆ ಹೆಚ್ಚು ಕಾಳಜಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯೋತ್ಸವದ ಬಗ್ಗೆ ಈ ನಾಡಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ನಮಗೆ ಅಪಾರವಾದ ಬದ್ಧತೆ ಇದೆ. ರಾಜ್ಯೋತ್ಸವದ ಕುರಿತು ಅಮಿತ್ ಶಾ ಅಂಥವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ. ರಾಜ್ಯೋತ್ಸವವನ್ನು ಎಷ್ಟು ಅಭಿಮಾನದಿಂದ ಆಚರಣೆ ಮಾಡುತ್ತೇವೆಯೋ ಅಷ್ಟೇ ಅಭಿಮಾನದಿಂದ ಟಿಪ್ಪು ಸೇರಿದಂತೆ 26 ಮಹಾನ್ ಪುರುಷರು ಹಾಗೂ ಮಹಾ ಮಾತೆಯನ್ನು ಜಯಂತಿಯನ್ನು ನಮ್ಮ ಸರ್ಕಾರ ಆಚರಿಸುತ್ತದೆ ಎಂದು ಹೇಳಿದರು.

ನಾವು ಇತಿಹಾಸ ಪುರುಷರನ್ನು ನೆನಪು ಮಾಡಿಕೊಳ್ಳುವವರು. ಆದರೆ, ಬಿಜೆಪಿಯವರು ಇತಿಹಾಸವನ್ನು ತಿರುಚುವ ಮಂದಿ ಎಂದು ಮುಖ್ಯಮಂತ್ರಿಯವರು ಟೀಕಿಸಿದರು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು ಲಕ್ಷ ಕೋಟಿ ಅನುದಾನ ಕೊಟ್ಟಿದೆ. ಆದರೆ ಸದ್ಬಳಕೆಯಾಗಿಲ್ಲ ಎಂಬ ಶಾ ಹೇಳಿಕೆ ಕುರಿತು ಮಾತನಾಡಿದ ಸಿಎಂ, ಕೇಂದ್ರ ಕೊಟ್ಟಿರುವ ಅನುದಾನದ ಬಗ್ಗೆ ಶಾ ಅವರಿಗೆ ಲೆಕ್ಕ ಗೊತ್ತಿದೆಯೇ ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಅನುದಾನ ಯಾರದ್ದು ? ಅದು ಅಮಿತ್ ಶಾ ಅಥವಾ ಅವರ ಪುತ್ರ ಸಂಪಾದನೆ ಮಾಡಿರುವ ಹಣ ಅಲ್ಲ ಎಂದು ಖಾರವಾಗಿ ಹೇಳಿದರು.  ವಿವಿಧ ರೂಪದಲ್ಲಿ ರಾಜ್ಯದಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ನಮಗೆ ಪಾಲು ಕೊಡುತ್ತದೆ. ಅದು ಸಂವಿಧಾನಬದ್ಧವಾಗಿ. ಐದು ವರ್ಷಕ್ಕೊಮ್ಮೆ ರಚನೆಯಾಗುವ ಹಣಕಾಸು ಆಯೋಗದ ಶಿಫಾರಸು ಅನುಸಾರವಾಗಿ ರಾಜ್ಯಗಳಿಗೆ ಅನುದಾನ ಹೋಗುತ್ತದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ವಿಫಲ ಹಣಕಾಸು ಆಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ