ರಾಜ್ಯ ಕಾಂಗ್ರೆಸ್ ವಿರುದ್ಧ ಷಾ ವಾಗ್ದಾಳಿ

Kannada News

02-11-2017

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನಿರಾಸಕ್ತಿ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೋಮುವಾದಿಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಉತ್ತಮ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು. ಕೇರಳ, ಮಹಾರಾಷ್ಟ್ರ, ಗುಜರಾತ್ ಸೇರಿ ದೇಶದ ಹಲವು ರಾಜ್ಯಗಳ ಕುರಿತಂತೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಪರಮ ಭ್ರಷ್ಟ ಸರ್ಕಾರವಾಗಿ ಹೊರಹೊಮ್ಮಿದೆ ಎಂದು ಎಂದು ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ‘ಕರ್ನಾಟಕ ನವ ಪರಿವರ್ತನಾ ರ‍್ಯಾಲಿ’ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿರುವ ಸರ್ಕಾರಗಳಲ್ಲಿರುವವರ ಮೇಲೆ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಆರೋಪಗಳು ಬಂದು, ಆರೋಪಗಳು ಸಾಬೀತಾಗಿ, ಹೈಕಮಾಂಡ್‍ಗೆ ಕಪ್ಪ ನೀಡಿದ ಡೈರಿಯೂ ಬಿಡುಗಡೆ ಆಗುತ್ತಿರುವುದೇ ಸಿದ್ದರಾಮಯ್ಯ ಸರ್ಕಾರದ ಹಿರಿಮೆ ಎಂದು ವ್ಯಂಗ್ಯವಾಡಿದರು.

ಸ್ಟೀಲ್ ಬ್ರಿಡ್ಜ್ ನಿರ್ಮಿಸುವ ವಿಷಯದಲ್ಲಿ ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ಧಂದೆಯಲ್ಲಿ ಭ್ರಷ್ಟಾಚಾರ ಸೇರಿದಂತೆ ಎಲ್ಲ ವಿಷಯಗಳಲ್ಲೂ ಭ್ರಷ್ಟತೆಯ ಮಹಾಪೂರವೇ ಸಿದ್ಧರಾಮಯ್ಯ ಸರ್ಕಾರದ ಮೇಲೆ ಹರಿದಿದೆ. ಅದೇ ರೀತಿ ವರ್ಗಾವಣೆ ಧಂದೆಯ ಕೈಗಾರಿಕೆಯನ್ನೇ ಈ ಸರ್ಕಾರ ತೆರೆದು ಕುಳಿತುಕೊಂಡಿದೆ ಎಂದು ಅವರು ದೂರಿದರು.

ರಾಜ್ಯದ ವಿಕಾಸಕ್ಕಾಗಿ ಮೋದಿ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಿದೆ.ಆದರೆ ಸಿದ್ದರಾಮಯ್ಯ ಮಾತ್ರ, ಕೇಂದ್ರದಿಂದ ನಮಗೆ ಯಾವ ಬೆಂಬಲವೂ ಸಿಗುತ್ತಿಲ್ಲ ಎಂದು ದೂರುತ್ತಾರೆ. ಹಾಗಿದ್ದರೆ ಮೋದಿ ಸರ್ಕಾರ ನೀಡಿದ ನೆರವಿನ ಹಣ ಎಲ್ಲಿ ಹೋಯಿತು? ಲೆಕ್ಕ ಕೊಡಿ ಎಂದು ಅವರು ಸವಾಲು ಎಸೆದರು.

ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಇದ್ದಾಗ ಹದಿಮೂರನೇ ಹಣಕಾಸಿನ ಆಯೋಗದ ಮೂಲಕ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 88,583 ಕೋಟಿ ರೂ, ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಹಣಕಾಸು ಆಯೋಗದಿಂದ ಸಿಕ್ಕಿದ್ದು 2,19,503 ಕೋಟಿ ರೂ. ಹೀಗೆ 1,30,921 ಕೋಟಿ ರೂ ಹೆಚ್ಚು ಹಣ ನೀಡಿದ್ದರೂ ಆ ಹಣ ಕರ್ನಾಟಕದ ವಿಕಾಸಕ್ಕೆ ಬಳಕೆಯಾಗಿಲ್ಲವೆಂದರೆ ಆ ಹಣ ಎಲ್ಲಿಗೆ ಹೋಯಿತು?ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ ನವ ಪರಿವರ್ತನಾ  ರ‍್ಯಾಲಿಯ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಿಗೆ ಈ ವಿಷಯ ಮುಟ್ಟಿಸಿ ಎಂದು ಹೇಳಿದ ಅವರು, ಈ ಪ್ರಮಾಣದ ಹಣವನ್ನು ಸಿದ್ದರಾಮಯ್ಯ ಸರ್ಕಾರ ನುಂಗಿ ಹಾಕಿದೆ ಎಂದು ಅವರು ಟೀಕಿಸಿದರು. ಮುದ್ರಾ ಯೋಜನೆಯಡಿ 39 ಸಾವಿರ ಕೋಟಿ ರೂಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ. ಸ್ಮಾರ್ಟ್ ಸಿಟಿಗಳ ಲೆಕ್ಕದಲ್ಲಿ 960 ಕೋಟಿ ರೂ ನೀಡಲಾಗಿದೆ. ಮೆಟ್ರೋ ಯೋಜನೆಗೆ 2370 ಕೋಟಿ ರೂ ನೀಡಲಾಗಿದೆ. ರೈಲ್ವೇ ಯೋಜನೆಗಳಿಗೆ 2197 ಕೋಟಿ ರೂ ನೀಡಲಾಗಿದೆ ಎಂದರು.

ಆದರೆ ಕರ್ನಾಟಕದ ಅಭಿವೃದ್ಧಿಗೆ ನೀಡಲಾಗಿರುವ ಈ ಹಣ ಅದಕ್ಕಾಗಿ ಬಳಕೆಯಾಗುತ್ತಿಲ್ಲ. ಅಂದ ಮೇಲೆ ಇಂತಹ ಭ್ರಷ್ಟ ಸರ್ಕಾರವನ್ನು ಇಟ್ಟುಕೊಳ್ಳುವ ಅಗತ್ಯ ಕರ್ನಾಟಕದ ಜನರಿಗೂ ಇಲ್ಲ ಎಂದವರು ಅಭಿಪ್ರಾಯ ಪಟ್ಟರು. ಸಿದ್ದರಾಮಯ್ಯ ಅವರಿಗೆ ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಿಸುವ ಉತ್ಸಾಹ ಇರಲಿಲ್ಲ. ಬದಲಿಗೆ ನವೆಂಬರ್ ಹತ್ತರಂದು ನಡೆಯಲಿರುವ ಟಿಪ್ಪು ಜಯಂತಿಯ ಬಗ್ಗೆ ಅಪರಿಮಿತಿ ಉತ್ಪಾಹ ಎಂದರು.

ರಾಜ್ಯದಲ್ಲಿ ಹತ್ತೊಂಭತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಯಿತು. ಆ ಮೂಲಕ ದೇಶ ಪ್ರೇಮಿಗಳಿಗೆ ಕಷ್ಟ ಕಾದಿದೆ ಎಂಬ ಮೆಸೇಜು ಹೋಯಿತು. ಅದೇ ಕಾಲಕ್ಕೆ ಕೋಮುವಾದಿ ಎಸ್.ಡಿ.ಪಿ.ಐ ಸಂಘಟನೆಯ ಮತ್ತು ಕ್ರಿಮಿನಲ್‍ಗಳ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದಾಯಿತು ಎಂದರು.

ನರೇಂದ್ರಮೋದಿ ಅವರ ಸರ್ಕಾರ ಇತರ ಹಿಂದುಳಿದ ವರ್ಗದವರಿಗೆ ಒಳಮೀಸಲಾತಿ ಕಲ್ಪಿಸಿಕೊಡಲು ಆಯೋಗ ರಚಿಸಿತು. ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಕರೆಸಿಕೊಳ್ಳುವ ಸಿದ್ಧರಾಮಯ್ಯ ಅವರ ಪಕ್ಷ ಅದನ್ನು ವಿರೋಧಿಸಿತು ಎಂದು ವ್ಯಂಗ್ಯವಾಡಿದರು.

ಈ ನೆಲದ ಬಡವರು, ರೈತರು, ಕೂಲಿ-ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರ ಅಭಿವೃದ್ಧಿಗಾಗಿ ಮೋದಿ ಸರ್ಕಾರ 130 ಯೋಜನೆಗಳನ್ನು ರೂಪಿಸಿದೆ. ಆದರೆ ಈ ಯಾವ ಯೋಜನೆಯ ಲಾಭವೂ ಇಲ್ಲಿನ ಜನರಿಗೆ ಸಿಗುತ್ತಿಲ್ಲ. ಹೀಗಾಗಿ ಇಂತಹ ಸರ್ಕಾರ ಬೇಡ. ಬದಲಿಗೆ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತನ್ನಿ. ರಾಜ್ಯದ ಹಿತವನ್ನು ಕಾಪಾಡಿ.ಪ್ರಧಾನಿ ನರೇಂದ್ರಮೋದಿ ಅವರ ಕೈಯ್ಯನ್ನು ಬಲಪಡಿಸಿ ಎಂದು ಅವರು ಮನವಿ ಮಾಡಿಕೊಂಡರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ