ಕೆಎಸ್‍ಆರ್‍ಟಿಸಿ: ‘ಮಹಿಳೆಯರಿಗೆ 50ರಷ್ಟು ಮೀಸಲಾತಿ'

Kannada News

02-11-2017

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ಸಂಸ್ಥೆಯ ಬಸ್ ಚಾಲಕರ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ದೊಡ್ಡ ಸಾರಿಗೆ ವಾಹನ(ಎಚ್‍ಟಿವಿ)ಗಳ ಚಾಲಕ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 50ರಷ್ಟು ಅವಕಾಶ ನೀಡುವ ಸಂಬಂಧ ಕರಡು ನೀತಿ ತಯಾರಿಸುವಂತೆ ಇತ್ತೀಚಿಗೆ ನಡೆದ  ಕೆ.ಎಸ್‍.ಆರ್.ಟಿ.ಸಿ ಮತ್ತು ಬಿಎಂಟಿಸಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸೂಚನೆ ನೀಡಿದ್ದಾರೆ.

ಮಹಿಳೆಯರಿಗೆ ಬಸ್ ಚಾಲನೆಯ ವಿಶೇಷ ತರಬೇತಿ ನೀಡುವುದರೊಂದಿಗೆ ಅವರಿಗೆ ಸ್ಟೈಫಂಡ್ ನೀಡುವುದು ಕೂಡ ಇದರಲ್ಲಿ ಸೇರಲಿದೆ. ಒಂದು ವೇಳೆ ಈ ನೀತಿ ಜಾರಿಯಾದರೆ ದೇಶದಲ್ಲೇ ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಸಾರಿಗೆ ಪಾತ್ರವಾಗಲಿದೆ.

ಹೆಚ್‍ಟಿವಿ ವಾಹನ ಚಾಲನೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವುದರೊಂದಿಗೆ ಅವರಿಗೆ ಉಚಿತ ಚಾಲನಾ ಪರವಾನಿಗಿಯನ್ನೂ ನೀಡುತ್ತೇವೆ. ಈಗಾಗಲೇ ಚೀನಾ, ಬ್ರಿಟನ್, ಇಟಲಿ ದೇಶಗಳಲ್ಲಿ ಮಹಿಳಾ ಬಸ್ ಚಾಲಕರು ಇದ್ದಾರೆ. ಕರ್ನಾಟಕ ಕೂಡ ಮಹಿಳೆಯರಿಗೆ ಸಾರಿಗೆ ಕ್ಷೇತ್ರದಲ್ಲಿ ಶೇಕಡಾ 50ರಷ್ಟು ಮೀಸಲು ನೀಡಿದ ಮೊದಲ ರಾಜ್ಯವಾಗಲಿದೆ ಎಂದು ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಚಾಲಕ ಹುದ್ದೆಗೆ ಮಹಿಳೆಯರನ್ನು ಆಕರ್ಷಿಸಲು ವಿಶೇಷ ನೀತಿ ಜಾರಿಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಕೆಲಸ ಆರಂಭಗೊಂಡಿದ್ದು, ಶೀಘ್ರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ತಿಳಿಸಿದ್ದಾರೆ.

ಕರ್ನಾಟಕ ವಕೋಷನ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಸಾರಿಗೆ ಇಲಾಖೆ ಈಗಾಗಲೇ ಮಾತುಕತೆ ನಡೆಸಿದ್ದು, ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಿಗಮ ಒಪ್ಪಿಗೆ ನೀಡಿದೆ. ಮುಂದಿನ ತಿಂಗಳು ತರಬೇತಿ ಕಾರ್ಯ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ನೀಡಲು ನಿರ್ಭಯಾ ನಿಧಿಯಡಿ 57 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಮಹಿಳಾ ಸಬಲೀಕರಣ ಮತ್ತು ರಸ್ತೆಯ ಮೇಲೆ ಅತಿವೇಗವಾಗಿ ಹೋಗುವುದನ್ನು ತಡೆಯಲು ಮಹಿಳೆಯರನ್ನು ಚಾಲಕರಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮಹಿಳೆಯರು ಬಹಳ ಸೂಕ್ಷ್ಮವಾಗಿ ಮತ್ತು ಸಾವಧಾನದಿಂದ ವಾಹನ ಚಲಾಯಿಸುತ್ತಾರೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ತಿಳಿಸಿದ್ದಾರೆ.

ಕೆಎಸ್‍ಆರ್‍ಟಿಸಿಯ 8 ಚಾಲನಾ ತರಬೇತಿ ಟ್ರ್ಯಾಕ್‍ ನಲ್ಲಿ ಈ ತರಬೇತಿ ನಡೆಯಲಿದೆ. ಬಾಗಲಕೋಟೆ, ಹಾಸನ, ಮಳವಳ್ಳಿ, ಚಿಕ್ಕಮಗಳೂರು, ಹುಮ್ನಾಬಾದ್ ಮತ್ತು ಹಗರಿಬೊಮ್ಮನಹಳ್ಳಿ ಸೇರಿದಂತೆ ಒಟ್ಟು 8 ಟ್ರ್ಯಾಕ್‍ ಗಳಲ್ಲಿ ಹೊಸ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ