‘ಇಡೀ ದೇಶಕ್ಕೇ ಮಾದರಿಯಾದ ಆ್ಯಪ್’

Kannada News

31-10-2017

ಬೆಂಗಳೂರು: ಅತಿವೃಷ್ಠಿ (ನೆರೆ) ಅಥವಾ ಅನಾವೃಷ್ಠಿ (ಬರ) ಯಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿಹಾರ ಒದಗಿಸಲು ಹಾಗೂ ಈ ಪರಿಹಾರದ ಮೊತ್ತವನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ತಿಳಿಸಿದರು.

ರೈತ ಬೆಳೆ ಸಮೀಕ್ಷೆಗಾಗಿ ಫಾರ್ಮರ್ ಕ್ರಾಪ್ ಸರ್ವೆ ಆ್ಯಪ್ ಸಿಟಿಜನ್ ಕನೆಕ್ಟ್ ಆ್ಯಪ್ ಗಳನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ಬೆಳೆ ವಿಮಾ ಯೋಜನೆಗಳಿಗೆ ನೋಂದಾಯಿಸಲು ಈ ಆ್ಯಪ್ ಗಳು ನೆರವಾಗುತ್ತದೆ. ಈ ಬೆಳೆಗಳನ್ನು ಆರ್.ಟಿ.ಸಿ ಯಲ್ಲಿ ದಾಖಲಿಸುವುದರಿಂದ ರೈತರು ಬೆಳೆ ಸಾಲವನ್ನು ಸುಲಭವಾಗಿ ಪಡೆಯಲು ಅನುಕೂಲವಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಸ್ವತಃ ತಾವೇ ಅಥವಾ ಬೇರೆಯವರ ನೆರವಿನಿಂದ ಅಪ್‍ಲೋಡ್ ಮಾಡಬಹುದು ಎಂದು ವಿವರಿಸಿದರು.

ನಾವು ಇದುವರೆಗೆ ಏನೇ ಪ್ರಯತ್ನ ಮಾಡಿದರೂ ಒಟ್ಟಾರೆ ಬೆಳೆಗಳ ಉತ್ಪನ್ನದ ಪ್ರಮಾಣ ಹಾಗೂ ನಷ್ಟದ ಪ್ರಮಾಣಗಳನ್ನು ನಿಖರವಾಗಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಈಗ ಸುಧಾರಿತ ಆ್ಯಪ್ ಗಳನ್ನು ಸಿದ್ಧಪಡಿಸಿದ್ದು ಇದರಿಂದಾಗಿ ಅಧಿಕಾರಿಗಳು ಮಾತ್ರವಲ್ಲದೆ, ರೈತರೇ ನೇರವಾಗಿ ತಮ್ಮ ಹೊಲದ, ಬೆಳೆಯ ವಿವರ ನೀಡಬಹುದು, ನಷ್ಟವಾದರೆ ಅದರ ವಿವರ ನೀಡಬಹುದು ಎಂದರು.

ರಾಜ್ಯದ 2.7 ಕೋಟಿ ಹಿಡುವಳಿಗಳ ಬಗ್ಗೆ ಕಂದಾಯ ಇಲಾಖೆಯಲ್ಲಾಗಲೀ ಅಥವಾ ಕೃಷಿ ಇಲಾಖೆಯಲ್ಲಾಗಲೀ ಯಾವುದೇ ನಿಖರ ದಾಖಲೆಗಳಿಲ್ಲ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಹಾರ ಒದಗಿಸಬೇಕಾದರೆ ಮುಂಗಾರು ಹಾಗೂ ಹಿಂಗಾರು ಋತುಗಳಲ್ಲಿ ಮಾಡಿದ ಬಿತ್ತನೆ, ಬೆಳೆದ ಬೆಳೆ ಹೀಗೆ ಎಲ್ಲದರ ಪೂರ್ವ ಮಾಹಿತಿ ಸರ್ಕಾರದಲ್ಲಿ ಇರಬೇಕಾಗುತ್ತದೆ. ರಾಜ್ಯದ ಪ್ರತಿ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸುವ ಕಾರ್ಯಕ್ರಮವನ್ನು ಸರ್ಕಾರವು ಈಗಾಗಲೇ ಹಮ್ಮಿಕೊಂಡಿದೆ. ಇದಕ್ಕಾಗಿ ಈಗಾಗಲೇ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ 15,000 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಕೋ-ಆರ್ಡಿನೇಟ್‍ಗಳೊಂದಿಗೆ ಜಮೀನಿನಲ್ಲಿ ಬೆಳೆದ ಬೆಳೆಗಳ ಅಧಿಕಾರಿಗಳು ವಿವರವನ್ನು ಸಂಗ್ರಹಿಸುತ್ತಾರೆ. ಅಲ್ಲದೆ, ಭೂ-ಮಾಲೀಕರ ಆಧಾರ್ ವಿವರಗಳನ್ನು ಕೂಡಾ ಪಡೆಯುತ್ತಾರೆ. ರೈತರೂ ಕೂಡಾ ಆ್ಯಪ್ ಮೂಲಕ ಮಾಹಿತಿ ನೀಡಬಹುದು. ಬೃಹತ್ ಪ್ರಮಾಣದ ಈ ದತ್ತಾಂಶ ಸಂಗ್ರಹಣಾ ಕಾರ್ಯಕ್ಕೆ ಮತ್ತಷ್ಟು ವೇಗ ಕಲ್ಪಿಸಲು ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸಲು ರೈತರ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದರು.

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮಾಹಿತಿಯು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಹಾಗೂ ಸೌಲಭ್ಯಗಳನ್ನು ವಿತರಿಸಲು ಸರ್ಕಾರಕ್ಕೆ ನೆರವಾಗಲಿದೆ. ಸೌಲಭ್ಯ ಪಡೆದ ರೈತರಿಗೆ ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಅವಕಾಶವಿದೆ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ತೊಡಗಿದ ಎಲ್ಲಾ ರೈತರನ್ನೂ ಈ ವ್ಯಾಪ್ತಿಗೆ ಒಳಪಡಿಸಲು ಬೆಳೆ ನಷ್ಟ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಸಂದರ್ಭದಲ್ಲಿ ಸಂತ್ರಸ್ತ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಗೆ ಅನುಕೂಲವಾಗುತ್ತದೆ.

ಈ ಆ್ಯಪ್ ಡೌನ್‍ಲೋಡ್ ಮಾಡುವಾಗ ಹಾಗೂ ಬೆಳೆಯ ಮಾಹಿತಿ ನೀಡುವ ಸಂದರ್ಭಗಳನ್ನು ಹೊರತುಪಡಿಸಿ, ಇಂಟರ್‍ ನೆಟ್‍ನ ಅಗತ್ಯವಿಲ್ಲ. ರೈತರ ಜಮೀನಿನ ನಕ್ಷೆಯನ್ನು ಸರ್ವೇ ನಂಬರಿಗೆ ಅನುಗುಣವಾಗಿ ಒದಗಿಸುತ್ತದೆ. ರೈತರು ಒಂದು ಅಥವಾ ಮಿಶ್ರ ಬೆಳೆಯ ಪ್ರಮಾಣ ಹಾಗೂ ಚಿತ್ರಗಳೊಂದಿಗೆ ಬೆಳೆ ವಿವರಗಳನ್ನು ಒದಗಿಸಬಹುದು.

ಅಲ್ಲದೆ, ರೈತರ ಹೆಸರು ಮತ್ತು ಅವರ ಜಮೀನಿನ ಪ್ರಮಾಣವನ್ನು ಅಳೆಯಲು ಭೂಮಿ ತಂತ್ರಾಂಶದೊಂದಿಗೆ ಜೋಡಣೆಯಾಗಿದೆ. ರೈತರಿಗೆ ಲಭ್ಯವಿರುವ ಜಮೀನಿನಲ್ಲಿ ಪ್ರತಿ ಬೆಳೆಗೆ ಜಿಯೊ ಫೆನ್ಸಿಂಗ್ ಮಾಡಲು ಅವಕಾಶವಿದೆ.

ಜಮೀನಿನ ಮಾಹಿತಿಯನ್ನು ಆಧಾರ್‍ಗೆ ಜೋಡಣೆ ಮಾಡುವುದರಿಂದ ‘ಭೂಮಿ’ ಮತ್ತು ಸರ್ಕಾರದ ಇತರ ಯೋಜನೆಗಳ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ರಾಷ್ಟ್ರದಲ್ಲೇ ಬೆಳೆ ಪರಿಹಾರ ವಿತರಿಸಲು ಅಂಕಿತ ವೇದಿಕೆ (ಡಿಜಿಟಲ್ ಪ್ಲಾಟ್‍ಫಾರಂ) ಯನ್ನು ಸಮರ್ಥವಾಗಿ ಬಳಸಿಕೊಂಡ ರಾಜ್ಯ ನಮ್ಮ ಕರ್ನಾಟಕ. ಈ ವೇದಿಕೆಯ ಮೂಲಕ ಫಲಾನುಭವಿ 25 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆಯಾಗಿದೆ. ಅಲ್ಲದೆ, ಇಡೀ ದೇಶಕ್ಕೇ ಮಾದರಿಯಾದ ಆ್ಯಪ್ ವಿನ್ಯಾಸಗೊಳಿಸಿರುವ ಪ್ರಪ್ರಥಮ ಹಾಗೂ ಏಕೈಕ ರಾಜ್ಯ ನಮ್ಮ ಕರ್ನಾಟಕ ಎಂದು ಕೃಷ್ಣ ಬೈರೇಗೌಡ ಅವರು ಪ್ರಕಟಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


It's good app farmers information and crop lone ,carefu Details , land Details , In online Useful . And my Sajesation Revenue culcut to online method is best. OK thank u karnataka government.
  • A M. LOHITH
  • FARMER