ಸಿಎಂ ಸಂಪರ್ಕ ಇನ್ನು ಆ್ಯಪ್‍ ಮೂಲಕ !

Kannada News

31-10-2017

ಬೆಂಗಳೂರು: ರಾಜ್ಯದ ರೈತನ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿರುವ ರಾಜ್ಯ ಸರ್ಕಾರ,  ಇದೀಗ ನೇರವಾಗಿ ರೈತನೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗುವ ಎರಡು ವಿಶಿಷ್ಟ ಆ್ಯಪ್‍ಗಳನ್ನು  ಬಿಡುಗಡೆ ಮಾಡಿದೆ.

 ರೈತ ಬೆಳೆ ಸಮೀಕ್ಷೆಗಾಗಿ ಫಾರ್ಮರ್ ಕ್ರಾಪ್ ಸರ್ವೆ ಮತ್ತು ಸಿಟಿಜನ್ ಕನೆಕ್ಟ್ ಆಪ್‍ಗಳನ್ನು  ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿದರು. ಮೊಬೈಲ್‍ನಲ್ಲಿ ಈ ಎರಡು ಆಪ್‍ಗಳನ್ನು ಬಳಸಿ ರೈತರ ಹೊಲದ ಪರಿಸ್ಥಿತಿಯನ್ನು ಅವಲೋಕಿಸಲು, ಬೆಳೆದ ಬೆಳೆ, ಹಾನಿಯಾದ ಬೆಳೆಯಿಂದ ಹಿಡಿದು ಎಲ್ಲ ಮಾಹಿತಿಗಳನ್ನು ಕ್ಷಣಾರ್ದದಲ್ಲಿ ಸರ್ಕಾರ ಪಡೆಯಲು ಸಾಧ್ಯವಾಗಲಿದೆ.

ಇದು ಡಿಜಿಟಲ್ ಯುಗ. ಪ್ರತಿಯೊಬ್ಬರ ಕಿಸೆಯಲ್ಲೂ ಮೊಬೈಲ್ ಎಂಬ ಸಂಪರ್ಕ ಸಾಧನ ಇದೆ. ಮೊಬೈಲ್ ಕೇವಲ ಸಂಭಾಷಣೆಯ ವಿನಿಮಯ ಮಾಡಿಕೊಳ್ಳುವ ಸಾಧನವಾಗಿ ಉಳಿದಿಲ್ಲ. ಬಹು ಉಪಯೋಗಿ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ತಂತ್ರಜ್ಞಾನ ಬಳಸಿ ಸರ್ಕಾರದ ವಿವಿಧ ಯೋಜನೆಗಳ ಕುರಿತ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪಿಸಿ, ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಅನುವಾಗುವಂತೆ ‘ದಿ ಸಿಟಿಜನ್ ಕನೆಕ್ಟ್’ ಆ್ಯಪ್ ರೂಪಿಸಲಾಗಿದೆ ಎಂದರು.

ವಿವಿಧ ಯೋಜನೆಗಳನ್ನು ರೂಪಿಸುವುದು-ಅವುಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವುದು ಈ ಆ್ಯಪ್‍ನ ಮೂಲ ಉದ್ದೇಶವಾಗಿದೆ. ಅಲ್ಲದೆ, ಜನರೊಂದಿಗೆ ಮುಖ್ಯಮಂತ್ರಿ ಅವರು ನೇರವಾಗಿ ಸಂವಾದ ನಡೆಸಲು ಹಾಗೂ ಈ ಯೋಜನೆಗಳಲ್ಲಿ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಈ ಆ್ಯಪ್ ನಿಂದ ಮತ್ತಷ್ಟು ಉತ್ತೇಜನ ದೊರೆಯಲಿದೆ.

ನವ ಕರ್ನಾಟಕ ನಿರ್ಮಾಣದ ದೃಷ್ಟಿಕೋನ ಹೊತ್ತ ಮುಖ್ಯಮಂತ್ರಿ ಕನಸು ಸಾಕಾರಗೊಳಿಸಲಿರುವ ಈ ಆ್ಯಪ್ ನಾಗರೀಕರಿಗೆ ಒಂದೆಡೆಯೇ ಎಲ್ಲಾ ಪರಿಹಾರ ಒದಗಿಸುವ ಅತ್ಯುತ್ತಮ ವೇದಿಕೆಯಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಹದಿನೈದು ಸಾವಿರ ಅಧಿಕಾರಿಗಳು ಸುಮಾರು ನಲವತ್ತೈದು ಲಕ್ಷ ಎಕರೆಗಳಷ್ಟು ಭೂಮಿಯ ವಿವರವನ್ನು ಇವುಗಳ ಮೂಲಕ ಪಡೆದಿದ್ದು ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ.

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇದೇ ರೀತಿ ಅಧಿಕಾರಿಗಳು ಮಾತ್ರವಲ್ಲದೆ ರೈತರು ಕೂಡಾ ತಮ್ಮ ಹೊಲ, ತೋಟಗಳ ವಿವರಗಳನ್ನು ಈ ತಂತ್ರಜ್ಞಾನದ ಮೂಲಕ ಸರ್ಕಾರಕ್ಕೆ ರವಾನಿಸುವುದರಿಂದ ಬೆಳೆ ಹಾನಿಯಂತಹ ಸಂದರ್ಭಗಳಲ್ಲಿ ಯಾವ ಕಾರಣಕ್ಕೂ ಆತ ಪರಿಹಾರದಿಂದ ವಂಚಿತನಾಗಲಾರ ಎಂದು ಹೇಳಿದರು.

 ರೈತರ ಭೂಮಿಯ ಸಂಪೂರ್ಣ ವಿವರ ಲಭ್ಯವಾಗುವುದರಿಂದ ಮುಂದಿನ ದಿನಗಳಲ್ಲಿ ಅವರ ಬದುಕು ಹಸನಾಗಲು ಮತ್ತಷ್ಟು ಅವಕಾಶಗಳು ಲಭ್ಯವಾದಂತಾಗಲಿದೆ. ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುವುದರ ಮೂಲಕ ರೈತರು ಮತ್ತಷ್ಟು ಅನುಕೂಲ ಪಡೆಯಬೇಕು. ಬೆಳೆ ವಿಮೆ ಸಿಕ್ಕಿಲ್ಲ ಎನ್ನುವ ಬದಲು ಅವರ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರವೇ ಅವರ ಖಾತೆಗಳಿಗೆ ಬೆಳೆವಿಮೆ ಹಣವನ್ನು ಪಾವತಿಸುವಂತಾಗಬೇಕು ಎಂದು ಹೇಳಿದರು.

ಅದೇ ರೀತಿ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ರೈತರಿಗೆ ಸರ್ಕಾರದ ಸೌಲಭ್ಯ ಹಾಗೂ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕ್ಷಿಪ್ರವಾಗಿ ದೊರಕಿಸಿಕೊಡಲು ಫಾರ್ಮರ್ಸ್ ಕ್ರಾಪ್ ಸರ್ವೇ ಆ್ಯಪ್ ವಿನ್ಯಾಸಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಆ್ಯಪ್‍ಗಳ ವೈಶಿಷ್ಠ್ಯತೆಗಳ ವಿವರಿಸಿದ ಮುಖ್ಯಮಂತ್ರಿ ಆವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಈ ಆ್ಯಪ್ ಮೂಲಕ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಲ್ಲದೆ, ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಅಂತೆಯೇ, ಮುಖ್ಯಮಂತ್ರಿಯವರು ನಡೆದು ಬಂದ ದಾರಿ ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿಯವರ ಮುನ್ನೋಟ ಏನು ? ಎಂಬುದನ್ನು ನಾಗರೀಕರು ತಿಳಿಯಬಹುದು ಎಂದರು.

ಅದೇ ರೀತಿ ನಾಗರಿಕ ಸ್ನೇಹಿ ಎನಿಸಿರುವ ಸಿಟಿಜನ್ ಕನೆಕ್ಟ್ ಆ್ಯಪ್ ಬಳಕೆದಾರರಿಗೆ ಮುಖ್ಯಮಂತ್ರಿ ಕಚೇರಿಯ ತಾಜಾ ಸುದ್ದಿಗಳನ್ನು ನೀಡುತ್ತದೆ. ಮುಖ್ಯಮಂತ್ರಿಯವರ ಬ್ಲಾಗ್, ಭಾಷಣಗಳು ಹಾಗೂ ಸಂದರ್ಶನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಾಗರೀಕರು ಮುಖ್ಯಮಂತ್ರಿಯವರ ಕಚೇರಿಗೆ ನೇರವಾಗಿ ಇಲಾಖಾವಾರು ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ತಿಳಿಸಬಹುದು. ಅಂತೆಯೇ, ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿ ದಾಖಲಿಸಬಹುದು ಎಂದು ವಿವರಿಸಿದರು.

ಮುಖ್ಯಮಂತ್ರಿಯವರ ಕಚೇರಿಯಿಂದ ತಾಜಾ ಸುದ್ದಿ ಸ್ವೀಕರಿಸುವುದು ಮಾತ್ರವಲ್ಲ, ಕರ್ನಾಟಕವನ್ನು ಪರಿವರ್ತಿಸುವ ಮುಖ್ಯಮಂತ್ರಿಯವರ ಕಾರ್ಯಕ್ರಮಗಳನ್ನು ಸರಳವಾಗಿ ಮತ್ತು ಸಮಗ್ರವಾಗಿ ಚಿತ್ರಿಸಲಿರುವ ಈ ಆ್ಯಪ್ ನಾಗರೀಕರನ್ನು ಸಬಲೀಕರಣಗೊಳಿಸಿ ಸಮಾಜವನ್ನು ಸಕಾರಾತ್ಮಕ ಪಥದಲ್ಲಿ ಕೊಂಡ್ಯೊಯಲಿದೆ ಎಂದರು.

ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆಯೂ ನಾಗರೀಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದಾಗಿದೆ. ವ್ಯಕ್ತಿಚಿತ್ರ ವಿಭಾಗದಲ್ಲಿ ಮುಖ್ಯಮಂತ್ರಿಯವರ ವಿಶಿಷ್ಠ ದೃಷ್ಟಿಯನ್ನು ಕಾಣಬಹುದಾಗಿದೆ. ಮುಖ್ಯಮಂತ್ರಿಯವರ ದಿನಚರಿ, ಆಡಳಿತದ ಕ್ರಮಗಳು ಸಾಧನೆಗಳು ಹಾಗೂ ಅವುಗಳು ರಾಜ್ಯದ ಜನರ ಜೀವನವನ್ನು ಹೇಗೆ ಉತ್ತಮಪಡಿಸುತ್ತಿವೆ ಎಂಬುದರ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಈ ಆ್ಯಪ್‍ನಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಪಡೆಯಬಹುದು. ಮುಖ್ಯಮಂತ್ರಿಯವರ ಸಾಮಾಜಿಕ ಜಾಲ ತಾಣಗಳೊಂದಿಗೆ ಸಂಪರ್ಕ ಸಾಧಿಸಬಹುದು. ಮುಖ್ಯಮಂತ್ರಿಯವರ ಕುರಿತು ವಿವಿಧ ವೇದಿಕೆಗಳಲ್ಲಿ ಮಾಧ್ಯಮಗಳಲ್ಲಿ ವ್ಯಕ್ತವಾಗುವ ವಿಚಾರಗಳನ್ನು ಒಂದೆಡೆಯೇ ತಿಳಿಯಬಹುದು. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಮಾಹಿತಿ ವಿನಿಮಯಕ್ಕೆ ಅವಕಾಶವಿದೆ ಎಂದು ಅತೀಕ್ ಅವರು ಮಾಹಿತಿ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Vinoba nagara Shimogga
  • Sanju
  • Sanju